ADVERTISEMENT

ಏಷ್ಯಾ ಬ್ಯಾಡ್ಮಿಂಟನ್‌| ರೋಚಕ ಹೋರಾಟದಲ್ಲಿ ಒಲಿದ ಗೆಲುವು

ಏಷ್ಯಾ ಬ್ಯಾಡ್ಮಿಂಟನ್‌: ಸಾತ್ವಿಕ–ಚಿರಾಗ್‌ಗೆ ಚಿನ್ನದ ಪದಕ

ಪಿಟಿಐ
Published 30 ಏಪ್ರಿಲ್ 2023, 17:39 IST
Last Updated 30 ಏಪ್ರಿಲ್ 2023, 17:39 IST
   

ದುಬೈ: ಭಾರತದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಇದರೊಂದಿಗೆ 58 ವರ್ಷಗಳ ಚಿನ್ನದ ಪದಕದ ಬರ ನೀಗಿಸಿದರು.

ಇಲ್ಲಿ ನಡೆದ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಗೇಮ್‌ ಹಿನ್ನಡೆಯಿಂದ ಪುಟಿದೆದ್ದ ಭಾರತದ ಜೋಡಿ 16–21, 21–17, 21–19ರಿಂದ ಮಲೇಷ್ಯಾದ ಆಂಗ್‌ ಯೆವ್‌ ಸಿನ್‌– ತಿಯೊ ಎ ಯಿ ಅವರನ್ನು ಮಣಿಸಿತು.

ಏಷ್ಯಾ ಚಾಂಪಿಯನ್‌ಷಿಪ್‌ನ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತಕ್ಕೆ ಒಲಿದ ಮೊದಲ ಚಿನ್ನದ ಪ‍ದಕವಿದು. 1971ರಲ್ಲಿ ಭಾರತದ ದೀಪು ಘೋಷ್‌– ರಮಣ್ ಘೋಷ್‌ ಕಂಚು ಜಯಿಸಿದ್ದೇ ಇದುವರೆಗಿನ ಶ್ರೇಷ್ಠ ಸಾಧನೆಯಾಗಿತ್ತು.

ADVERTISEMENT

1965ರಲ್ಲಿ ದಿನೇಶ್ ಖನ್ನಾ ಅವರು ಥಾಯ್ಲೆಂಡ್‌ನ ಸಂಗೊಬ್‌ ರತ್ತನುಸೊರ್ನ್‌ ಅವರನ್ನು ಸೋಲಿಸಿ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದ್ದರು. ಲಖನೌನಲ್ಲಿ ಈ ಟೂರ್ನಿ ನಡೆದಿತ್ತು.

ಸಾತ್ವಿಕ್–ಚಿರಾಗ್‌ 2022ರ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಹಾಗೂ ಐದು ಬಿಡಬ್ಲ್ಯುಎಫ್‌ ವಿಶ್ವ ಟೂರ್‌ಗಳಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಈ ಋತುವಿನಲ್ಲಿ ಭಾರತದ ಆಟಗಾರರು ಗೆದ್ದ ಎರಡನೇ ಪ್ರಶಸ್ತಿ ಇದು. ಮಾರ್ಚ್‌ನಲ್ಲಿ ನಡೆದ ಸ್ವಿಸ್‌ ಓಪನ್‌ 300 ಟೂರ್ನಿಯಲ್ಲಿ ಅವರು ಚಾಂಪಿಯನ್ ಆಗಿದ್ದರು.

ರೋಚಕ ಹೋರಾಟ

2022ರ ವಿಶ್ವ ಚಾಂಪಿಯನ್‌ಷಿಪ್ ಕಂಚು ವಿಜೇತ ಸಾತ್ವಿಕ್‌– ಚಿರಾಗ್‌, ಈ ಪಂದ್ಯದ ಫೈನಲ್‌ನಲ್ಲಿ ರೋಚಕ ಹೋರಾಟ ನಡೆಸಿದರು.

1–1, 10–10 ಸಮಬಲದೊಂದಿಗೆ ಸಾಗಿದ ಮೊದಲ ಗೇಮ್‌ನ ವಿರಾಮದ ವೇಳೆಗೆ ಮಲೇಷ್ಯಾ ಜೋಡಿ ಒಂದು ಪಾಯಿಂಟ್‌ ಮುನ್ನಡೆ ಸಾಧಿಸಿತು.

ಆ ಬಳಿಕ ಚುರುಕಿನ ಆಟದ ಮೂಲಕ ಸತತ ಪಾಯಿಂಟ್ಸ್ ಕಲೆಹಾಕಿದ ಮಲೇಷ್ಯಾದ ಆಂಗ್‌ – ತಿಯೊ 18–13ರ ಮೇಲುಗೈ ಪಡೆದರು. ಅದೇ ಲಯದೊಂದಿಗೆ ಗೇಮ್‌ ತಮ್ಮದಾಗಿಸಿಕೊಂಡರು.

ಎರಡನೇ ಗೇಮ್‌ನ ಆರಂಭದಲ್ಲೂ ಮಲೇಷ್ಯಾ ಆಟಗಾರರು 6–2ರ ಮುನ್ನಡೆ ಗಳಿಸಿದರು. ಇದು 10–4ಕ್ಕೆ ಮುಂದುವರಿಯಿತು. ವಿರಾಮದ ವೇಳೆಗೆ ಭಾರತದ ಜೋಡಿ 6–11ರಿಂದ ಹಿಂದಿತ್ತು. ನಂತರವೂ ಪಾರಮ್ಯ ಮುಂದುವರಿಸಿದ ಆಂಗ್‌ – ತಿಯೊ ಜೋಡಿ 13–8ಕ್ಕೆ ಮುನ್ನಡೆಯಿತು. ಈ ಹಂತದಿಂದ ಭಾರತದ ಆಟಗಾರರ ಚೇತೋಹಾರಿ ಆಟ ಮನಸೂರೆಗೊಂಡಿತು. 

ಮಲೇಷ್ಯಾ ಆಟಗಾರರ ತಪ್ಪುಗಳ ಲಾಭ ಪಡೆದ ಸಾತ್ವಿಕ್– ಚಿರಾಗ್‌ 18–15ರಿಂದ ಮೇಲುಗೈ ಪಡೆದರು. ಬಳಿಕ ಮೂರು ಗೇಮ್‌ ಪಾಯಿಂಟ್ಸ್ ಗಳಿಸಿ ಪಂದ್ಯವನ್ನು ನಿರ್ಣಾಯಕ ಗೇಮ್‌ಗೆ ಕೊಂಡೊಯ್ದರು.

ಮೂರನೇ ಮತ್ತು ನಿರ್ಣಾಯಕ ಗೇಮ್‌ನ ಆರಂಭದಲ್ಲಿ ತಾಂತ್ರಿಕ ನೈಪುಣ್ಯ ಮೆರೆದ ಮಲೇಷ್ಯಾ ಆಟಗಾರರು 8–5ರಿಂದ ಮುನ್ನಡೆದರು. ವಿರಾಮದ ಹೊತ್ತಿಗೆ ಇದು 11–8ಕ್ಕೆ ತಲುಪಿತು. ಬಳಿಕ ಚಿರಾಗ್‌– ಸಾತ್ವಿಕ್‌ ಹಿನ್ನಡೆಯನ್ನು 14–15ಕ್ಕೆ ತಗ್ಗಿಸಿಕೊಂಡರು. ನೆಟ್‌ನಲ್ಲಿ ಆಂಗ್ ಮಾಡಿದ ತಪ್ಪಿನ ಲಾಭ ಗಳಿಸಿ 17–16ರ ಮೇಲುಗೈ ಪಡೆದರು. ಬಳಿಕ ನಡೆದ ತೀವ್ರ ಹೋರಾಟದಲ್ಲಿ ಭಾರತದ ಆಟಗಾರರು ಗೆಲುವಿನ ನಗೆ ಬೀರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.