ADVERTISEMENT

ಇಂಡೊನೇಷ್ಯಾ ಓಪನ್ ಬ್ಯಾಡ್ಮಿಂಟನ್: ಸಾತ್ವಿಕ್– ಚಿರಾಗ್ ಜೋಡಿಗೆ ಪ್ರಶಸ್ತಿ ಕನಸು

ಲಕ್ಷ್ಯ ಸೇನ್, ಸಿಂಧು ಕಣದಲ್ಲಿ

ಪಿಟಿಐ
Published 20 ಜನವರಿ 2025, 15:46 IST
Last Updated 20 ಜನವರಿ 2025, 15:46 IST
<div class="paragraphs"><p>ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ&nbsp; &nbsp;</p></div>

ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ   

   

ಪಿಟಿಐ ಚಿತ್ರ

ಜಕಾರ್ತ, ಇಂಡೊನೇಷ್ಯಾ: ಭಾರತದ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಮಂಗಳವಾರ ಆರಂಭವಾಗಲಿರುವ ಇಂಡೊನೇಷ್ಯಾ ಓಪನ್ ಮಾಸ್ಟರ್ಸ್‌ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ. 

ADVERTISEMENT

ಪ್ರಸಕ್ತ ಋತುವಿನ ಮೊದಲ ಪ್ರಶಸ್ತಿ ಜಯಿಸುವತ್ತ ಈ ಜೋಡಿ ಕಣ್ಣು ನೆಟ್ಟಿದೆ. ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್ ಹಾಗೂ ಮಹಿಳೆಯರ ಸಿಂಗಲ್ಸ್‌ ನಲ್ಲಿ ಪಿ.ವಿ. ಸಿಂಧು  ಅವರು ಕೂಡ ಪ್ರಶಸ್ತಿ ಬರವನ್ನು ನೀಗಿಸಿಕೊಳ್ಳುವ ಛಲದಲ್ಲಿದ್ದಾರೆ.

ವಿಶ್ವ ರ‍್ಯಾಂಕ್‌ನಲ್ಲಿ 9ನೇ ಸ್ಥಾನದಲ್ಲಿರುವ ಸಾತ್ವಿಕ್ –ಚಿರಾಗ್ ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಕಳೆದ ಮಲೇಷ್ಯಾ ಓಪನ್ ಸೂಪರ್ 1000 ಮತ್ತು ಇಂಡಿಯಾ ಓಪನ್ ಸೂಪರ್ 750 ಟೂರ್ನಿಗಳಲ್ಲಿ ಅವರು ಸೆಮಿಫೈನಲ್ ಪ್ರವೇಶಿಸಿದ್ದರು.  ಆದರೆ ಆ ಎರಡೂ ಪಂದ್ಯಗಳಲ್ಲಿ ಸೋತಿದ್ದರು. 

ಈ ಜೋಡಿಯು 32ರ ಘಟ್ಟದಲ್ಲಿ ಚೈನಿಸ್ ತೈಪೆಯ ಚೆನ್ ಝಿ ರೇ ಮತ್ತು ಯೂ ಚೀ ಲಿನ್ ವಿರುದ್ಧ ಕಣಕ್ಕಿಳಿಯುವರು. 

ಆದರೆ ಸಿಂಗಲ್ಸ್‌ ವಿಭಾಗದಲ್ಲಿ ಹೆಚ್ಚು ಕಠಿಣ ಪೈಪೋಟಿಯು ಭಾರತಕ್ಕೆ ಎದುರಾಗಲಿದೆ. 

23 ವರ್ಷದ ಲಕ್ಷ್ಯ ಅವರು ಹೋದ ವರ್ಷ ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು. ಕಳೆದೆರಡು ವಾರಗಳಲ್ಲಿ ಅವರು ಆಡಿದ ಟೂರ್ನಿಗಳಲ್ಲಿಯೂ ಮೊದಲ ಸುತ್ತಿನಲ್ಲಿ ಸೋತಿದ್ದರು. ಇಲ್ಲಿ ಪುಟಿದೇಳುವ ನಿರೀಕ್ಷೆಯಲ್ಲಿದ್ದಾರೆ. 

ಭಾರತದ ಪ್ರಿಯಾಂಶು ರಾಜಾವತ್ ಅವರು ಜಪಾನಿನ ಕೊಡೈ ನರೋಕಾ ವಿರುದ್ಧ ಪಂದ್ಯದ ಮೂಲಕ ಅಭಿಯಾನ ಆರಂಭಿಸುವರು. ಕಣದಲ್ಲಿರುವ ಇನ್ನಿಬ್ಬರು ಭಾರತೀಯ ಆಟಗಾರರಾದ ಕಿದಂಬಿ ಶ್ರೀಕಾಂತ್ ಮತ್ತು ಕಿರಣ್ ಜಾರ್ಜ್ ಅವರೂ ಲಯಕ್ಕೆ ಮರಳುವ ಪ್ರಯತ್ನದಲ್ಲಿದ್ದಾರೆ.

ಮಹಿಳೆಯರ ಸಿಂಗಲ್ಸ್‌ನಲ್ಲಿ ಸಿಂಧು 32 ರ ಹಂತದಲ್ಲಿ ತೈಪೆಯ ಸಂಗ್ ಶಾವೊ ಯುನ್ ವಿರುದ್ಧ ಆಡಲಿದ್ದಾರೆ. ಆಕರ್ಷಿ ಕಶ್ಯಪ್ ಅವರು ಜಪಾನಿನ ನೊಝೊಮಿ ಒಕುಹರಾ ವಿರುದ್ಧ ಕಣಕ್ಕಿಳಿಯುವರು. ಒಕುಹರಾ ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ 19ನೇ ಸ್ಥಾನದಲ್ಲಿದ್ದಾರೆ.

ಈಚೆಗೆ ಇಂಡಿಯಾ ಓಪನ್ ಟೂರ್ನಿಯಲ್ಲಿ ಸಿಂಧು ಅವರು ಕ್ವಾರ್ಟರ್‌ಫೈನಲ್‌ನಲ್ಲಿ ಸೋತಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.