ADVERTISEMENT

ಶಾರ್ಟ್‌ಕೋರ್ಸ್‌ ಈಜು: ಬೆಂಗಳೂರು ಪಟುಗಳ ಪಾರಮ್ಯ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2018, 19:12 IST
Last Updated 7 ಡಿಸೆಂಬರ್ 2018, 19:12 IST

ಪುತ್ತೂರು: ಕರ್ನಾಟಕ ಈಜು ಸಂಸ್ಥೆ ಹಾಗೂ ಪುತ್ತೂರು ಅಕ್ವೆಟಿಕ್ ಕ್ಲಬ್‍ ಆಶ್ರಯದಲ್ಲಿ ಇಲ್ಲಿನ ಬಾಲವನ ಈಜುಕೊಳದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಶಾರ್ಟ್ ಕೋರ್ಸ್ ಈಜು ಚಾಂಪಿಯನ್‌ ಷಿಪ್‌ ಶುಕ್ರವಾರ ಬೆಂಗಳೂರಿನ ಈಜುಪಟುಗಳು ಒಂಬತ್ತು ಕೂಟ ದಾಖಲೆಗಳನ್ನು ಮಾಡಿದ್ದಾರೆ.

ಬೆಂಗಳೂರಿನ ಡಾಲ್ಪಿನ್ ಅಕ್ವೆಟಿಕ್ ಕ್ಲಬ್‍ನ ಸದಸ್ಯರು ಆರು ಕೂಟ ದಾಖಲೆ ನಿರ್ಮಿಸುವ ಮೂಲಕ ಪಾರಮ್ಯ ಮೆರೆದಿದ್ದಾರೆ. ಬೆಂಗಳೂರಿನ ಪೂಜಾ ಅಕ್ವೆಟಿಕ್‍ನ ಇಬ್ಬರು ಹಾಗೂ ಬಸವನಗುಡಿ ಅಕ್ವೆಟಿಕ್ ಸೆಂಟರ್‍ನ ಒಬ್ಬ ಕ್ರೀಡಾಪಟು ವಿಶಿಷ್ಟ ಸಾಧನೆ ಮೆರೆದಿದ್ದಾರೆ.

ಬಾಲಕಿಯರ ವಿಭಾಗ: 50 ಮೀ ಬ್ಯಾಕ್‍ಸ್ಟ್ರೋಕ್‍ನಲ್ಲಿ ಡಾಲ್ಪಿನ್‌ ಅಕ್ವೆಟಿಕ್ಸ್‌ನ ನೀನಾ ವೆಂಕಟೇಶ್ ಕಾಲ: 30.28 ಸೆಕೆಂಡ್‌ಗಳಲ್ಲಿ (ಗ್ರೂಪ್- 2) ಗುರಿ ಮುಟ್ಟಿ ದಾಖಲೆ ಮಾಡಿದರು.

ADVERTISEMENT

ಸಂಜಯ್ ಸಿ.ಜೆ.ಅವರು ಬಾಲಕರ ವಿಭಾಗದ 50 ಮೀಟರ್ ಫ್ರೀಸ್ಟೈಲ್‍ನಲ್ಲಿ (ಗ್ರೂಪ್- 1) 24.31 ಸೆಕೆಂಡುಗಳಲ್ಲಿ ದೂರ ಕ್ರಮಿಸಿ ದಾಖಲೆ ಬರೆದರು.

ಬಾಲಕರ 50 ಮೀಟರ್ ಬಟರ್‍ಫ್ಲೈ ವಿಭಾಗದಲ್ಲಿ (ಗ್ರೂಪ್- 4) ಡಾಲ್ಫಿನ್ ಅಕ್ವೆಟಿಕ್ಸ್‍ನ ರೇಣುಕಾಚಾರ್ಯ ಹೊದ್ಮನಿ 32.85 ಸೆಕೆಂಡುಗಳಲ್ಲಿ ಗುರಿ ತಲುಪಿ ಹೊಸ ಕೂಟ ದಾಖಲೆ ನಿರ್ಮಿಸಿದರು.

ಡಾಲ್ಫಿನ್ ಅಕ್ವೆಟಿಕ್ಸ್‍ನ ವಿದಿತ್ ಎಸ್. ಶಂಕರ್ ಅವರು ತರುಣರ 100 ಮೀಟರ್ ಬ್ಯಾಕ್‍ಸ್ಟ್ರೋಕ್‍ನಲ್ಲಿ (ಗ್ರೂಪ್- 3) 1 ನಿಮಿಷ 14.29 ಸೆಕೆಂಡುಗಳಲ್ಲಿ ಗುರಿ ತಲುಪಿ ದಾಖಲೆ ಬರೆದರು.

ಬಸವನಗುಡಿ ಅಕ್ವೆಟಿಕ್ ಸೆಂಟರ್‍ನ ಸಾಚಿ ಜಿ.ಅವರು ತರುಣಿಯರ 200 ಮೀಟರ್ ಮೆಡ್ಲೆನಲ್ಲಿ (ಗ್ರೂಪ್- 1) ಒಟ್ಟು 2 ನಿಮಿಷ 32.45 ಸೆಕೆಂಡ್‍ಗಳಲ್ಲಿ ಗಮ್ಯ ತಲುಪುವ ಮೂಲಕ ಸಾಧನೆ ಮಾಡಿದರು.

200 ಮೀಟರ್ ಮೆಡ್ಲೆಯ ತರುಣರ ವಿಭಾಗದಲ್ಲಿ (ಗ್ರೂಪ್- 2) ಪೂಜಾ ಅಕ್ವೆಟಿಕ್ ಸೆಂಟರ್‍ನ ಕಲ್ಪ್ ಎಸ್. ಬೋಹ್ರಾ ಅವರು 2 ನಿಮಿಷ 17.62 ಸೆಕೆಂಡುಗಳಲ್ಲಿ ಸಾಧನೆ ಮಾಡಿದರು.

ಡಾಲ್ಫಿನ್ ಅಕ್ವೆಟಿಕ್ಸ್‌ನ ರೇಣುಕಾಚಾರ್ಯ ಹೊದ್ಮನಿ ಅವರು 200 ಮೀಟರ್ ಮೆಡ್ಲೆಯ (ಗ್ರೂಪ್- 4) ತರುಣರ ವಿಭಾಗದಲ್ಲಿ 2 ನಿಮಿಷ 42.12 ಸೆಕೆಂಡುಗಳಲ್ಲಿ ತಲುಪಿ ದಾಖಲೆ ಬರೆದರು.

ತರುಣಿಯರ 200 ಮೀಟರ್ ಮೆಡ್ಲೆಯಲ್ಲಿ ಪೂಜಾ ಅಕ್ವೆಟಿಕ್ ಸೆಂಟರ್‍ನ ವಿಹಿತಾ ನಯನ (ಗ್ರೂಪ್- 4) ಅವರು 2 ನಿಮಿಷ 44.63 ಸೆಕೆಂಡುಗಳಲ್ಲಿ ಗುರಿ ತಲುಪಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.