ADVERTISEMENT

ಬ್ಯಾಡ್ಮಿಂಟನ್‌: ಪ್ರಶಸ್ತಿ ಸುತ್ತಿಗೆ ಸಿಂಧು; ಸೆಯಂಗ್‌ ಸವಾಲು

ಬಿಡಬ್ಲ್ಯುಎಫ್‌ ವಿಶ್ವ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್‌: ಯಾಮಗುಚಿಗೆ ನಿರಾಸೆ

ಪಿಟಿಐ
Published 4 ಡಿಸೆಂಬರ್ 2021, 13:35 IST
Last Updated 4 ಡಿಸೆಂಬರ್ 2021, 13:35 IST
ಪಂದ್ಯ ಜಯಿಸಿದ ಪಿ.ವಿ.ಸಿಂಧು ಸಂಭ್ರಮ– ಪಿಟಿಐ ಚಿತ್ರ
ಪಂದ್ಯ ಜಯಿಸಿದ ಪಿ.ವಿ.ಸಿಂಧು ಸಂಭ್ರಮ– ಪಿಟಿಐ ಚಿತ್ರ   

ಬಾಲಿ, ಇಂಡೊನೇಷ್ಯಾ: ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಗೆದ್ದ ಭಾರತದ ಪಿ.ವಿ.ಸಿಂಧು ಅವರು ಬಿಡಬ್ಲ್ಯುಎಫ್‌ ವಿಶ್ವ ಟೂರ್‌ ಫೈನಲ್ಸ್ ಬ್ಯಾಡ್ಮಿಂಟನ್‌ ಟೂರ್ನಿಯ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.

ಶನಿವಾರ ನಡೆದ ಮಹಿಳಾ ಸಿಂಗಲ್ಸ್ ಸೆಮಿಫೈನಲ್‌ ಹಣಾಹಣಿಯಲ್ಲಿ ಅವರು ಜಪಾನ್‌ನ ಅಕಾನೆ ಯಾಮಗುಚಿ ಸವಾಲು ಮೀರಿದರು. ಒಂದು ತಾಸು 10 ನಿಮಿಷಗಳ ಕಾಲ ರೋಚಕ ಸೆಣಸಾಟದಲ್ಲಿ ಭಾರತದ ಆಟಗಾರ್ತಿಗೆ 21-15, 15-21, 21-19ರಿಂದ ಗೆಲುವು ಒಲಿಯಿತು.

ಪಂದ್ಯದ ಮೊದಲ ಗೇಮ್‌ನ ಆರಂಭದಲ್ಲಿ ಸಿಂಧು 0–4ರಿಂದ ಹಿನ್ನಡೆ ಅನುಭವಿಸಿದ್ದರು. ಬಳಿಕ 4–4ರಿಂದ ಸಮಬಲ ಸಾಧಿಸಿದರು. ಅದೇ ಲಯದೊಂದಿಗೆ ಮುಂದುವರಿದು 18–15ರ ಮೇಲುಗೈ ಪಡೆದರು. ಇದಾದ ನಂತರ ಮೂರು ನೇರ ಪಾಯಿಂಟ್ಸ್‌ ನೆರವಿನಿಂದ ಗೇಮ್ ತಮ್ಮದಾಗಿಸಿಕೊಂಡರು.

ADVERTISEMENT

ಎರಡನೇ ಗೇಮ್‌ನಲ್ಲಿ ಯಾಮಗುಚಿ ಪರಿಣಾಮಕಾರಿ ಎನಿಸಿದರು. ಒಂದು ಹಂತದಲ್ಲಿ 10–10ರಿಂದ ಸಮಬಲವಾಗಿದ್ದ ಗೇಮ್‌ಅನ್ನು ಚುರುಕಿನ ಆಟದ ಮೂಲಕ ಪಾಯಿಂಟ್ಸ್ ಹೆಚ್ಚಿಸಿಕೊಂಡು ಕೈವಶಮಾಡಿಕೊಂಡರು.

ಮೂರನೇ ಹಾಗೂ ನಿರ್ಣಾಯಕ ಗೇಮ್‌ ರಂಗು ಪಡೆದುಕೊಂಡಿತು. 5–5ರಿಂದ ಸಾಗಿದ್ದ ಗೇಮ್‌ನಲ್ಲಿ ಸಿಂಧು ಸತತ ಏಳು ಪಾಯಿಂಟ್ಸ್ ಕಲೆಹಾಕಿ ಮುನ್ನಡೆ ತಮ್ಮದಾಗಿಸಿಕೊಂಡರು. ಆದರೆ ಚೇತರಿಸಿಕೊಂಡ ಜಪಾನ್ ತಾರೆ 11–13ಕ್ಕೆ ಹಿನ್ನಡೆ ತಗ್ಗಿಸಿದರು. ಆದರೆ ಸಿಂಧು ಮತ್ತೆ ಛಲದ ಆಟ ತೋರಿ 17–12ಕ್ಕೆ ಮುನ್ನಡೆದರು. ಒಂದು ಹಂತದಲ್ಲಿ 19–19ರಿಂದ ಸಮಬಲಕ್ಕೆ ಬಂದಿದ್ದ ಗೇಮ್‌ನಲ್ಲಿ ಸಿಂಧು ಸತತ ಎರಡು ಪಾಯಿಂಟ್ಸ್ ಗಳಿಸಿ ಗೆದ್ದುಕೊಂಡರು. ಜಯದ ಸಂಭ್ರಮದಿಂದ ಕುಣಿದಾಡಿದರು.

ಭಾನುವಾರ ನಡೆಯುವ ಫೈನಲ್‌ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಸಿಂಧು ಅವರು ಕೊರಿಯಾದ ಆ್ಯನ್ ಸೆಯಂಗ್ ಅವರಿಗೆ ಮುಖಾಮುಖಿಯಾಗುವರು. ನಾಲ್ಕರ ಘಟ್ಟದ ಮತ್ತೊಂದು ಪಂದ್ಯದಲ್ಲಿ ಸೆಯಂಗ್‌ 25-23, 21-17ರಿಂದ ಥಾಯ್ಲೆಂಡ್‌ನ ಪಾರ್ನ್‌ಪವೀ ಚೋಚುವಾಂಗ್ ಅವರನ್ನು ಮಣಿಸಿದರು.

ಟೂರ್ನಿಯಲ್ಲಿ ಸಿಂಧು ಅವರಿಗೆ ಇದು ಮೂರನೇ ಫೈನಲ್ ಪ್ರವೇಶ. 2018ರಲ್ಲಿ ಪ್ರಶಸ್ತಿ ಗೆದ್ದಿದ್ದ ಅವರು ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದಾರೆ.

ವಿಶ್ವ ಕ್ರಮಾಂಕದಲ್ಲಿ ಏಳನೇ ಸ್ಥಾನದಲ್ಲಿರುವ ಸಿಂಧು, ಮೂರನೇ ರ‍್ಯಾಂಕಿನ ಯಾಮಗುಚಿ ಎದುರು ಆಡಿದ 20 ಪಂದ್ಯಗಳಲ್ಲಿ 12ರಲ್ಲಿ ಜಯ ಸಾಧಿಸಿದ್ದರು.

ಸಿಂಧುಗೆ ಕಠಿಣ ಸವಾಲು ಸಾಧ್ಯತೆ: ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು ಅವರಿಗೆಸೆಯಂಗ್ ಎದುರಿನ ಫೈನಲ್‌ ಪಂದ್ಯ ಕಠಿಣ ಸವಾಲಾಗುವ ಸಾಧ್ಯತೆಯಿದೆ. ಕೊರಿಯಾ ಆಟಗಾರ್ತಿ ಇಂಡೊನೇಷ್ಯಾ ಮಾಸ್ಟರ್ಸ್ ಹಾಗೂ ಇಂಡೊನೇಷ್ಯಾ ಓಪನ್‌ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದು ಈ ಟೂರ್ನಿಗೆ ಆಗಮಿಸಿದ್ದಾರೆ.

ವಿಶ್ವ ಕ್ರಮಾಂಕದಲ್ಲಿ ಆರನೇ ಸ್ಥಾನದಲ್ಲಿರುವ ಸೆಯಂಗ್‌, ಅಕ್ಟೋಬರ್‌ನಲ್ಲಿ ನಡೆದ ಡೆನ್ಮಾರ್ಕ್‌ ಓಪನ್‌ನಲ್ಲಿ ಸಿಂಧು ಅವರಿಗೆ ಸೋಲುಣಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.