ADVERTISEMENT

ಸಿಂಗಪುರ ಓಪನ್‌ ಬ್ಯಾಡ್ಮಿಂಟನ್‌: ಭಾರತದ ಸವಾಲು ಮುಕ್ತಾಯ

ಸಿಂಧುಗೆ ನಿರಾಸೆ

ಪಿಟಿಐ
Published 13 ಏಪ್ರಿಲ್ 2019, 17:50 IST
Last Updated 13 ಏಪ್ರಿಲ್ 2019, 17:50 IST
ನೊಜೊಮಿ ಒಕುಹರ –ಎಎಫ್‌ಪಿ ಚಿತ್ರ
ನೊಜೊಮಿ ಒಕುಹರ –ಎಎಫ್‌ಪಿ ಚಿತ್ರ   

ಸಿಂಗಪುರ: ಭಾರತದ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ.ಸಿಂಧು ಜಪಾನ್‌ನ ನೊಜೊಮಿ ಒಕುಹರ ವಿರುದ್ಧ ಪರಾಭವಗೊಂಡರು. ಈ ಮೂಲಕಸಿಂಗಪುರ ಓಪನ್‌ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಹೋರಾಟ ಅಂತ್ಯವಾಯಿತು.

ಶನಿವಾರ ನಡೆದ ಸೆಮಿಫೈನಲ್‌ ಹಣಾಹಣಿಯಲ್ಲಿ ಸಿಂಧು ಅವರು ಜಪಾನ್‌ ಆಟಗಾರ್ತಿ ಎದುರು 7–21, 11–21ರಿಂದ ಸೋತರು.

ಒಕುಹರ ಅವರು ಆರಂಭದ 15 ನಿಮಿಷಗಳಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿದರು.

ADVERTISEMENT

ಒಂದು ಹಂತದಲ್ಲಿ 11–5ರಿಂದ ಮುನ್ನಡೆ ಪಡೆದು ಸಿಂಧು ಮೇಲೆ ಒತ್ತಡ ಹೆಚ್ಚಿಸಿದರು. ಹೀಗಾಗಿ ಸಿಂಧು ಅವರು ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗಬೇಕಾಯಿತು. ಅಂತಿಮವಾಗಿ ಮೊದಲ ಗೇಮ್ ಅನ್ನು ಒಕುಹರ ಸುಲಭವಾಗಿ ಗೆದ್ದರು.

ಎರಡನೇ ಗೇಮ್‌ನಲ್ಲಿ ಸಿಂಧು ತಮ್ಮ ಎಂದಿನ ಆ‌ಕ್ರಮಣಕಾರಿ ಆಟವಾಡಲಿಲ್ಲ. ಸಿಂಧು ಪುಟಿದೇಳುವರೆಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆಪಡಬೇಕಾಯಿತು. ಒಕುಹರ ಅವರ ನಾಲ್ಕು ವೈಡ್‌ ಶಾಟ್ಸ್‌ಗಳನ್ನು ಸಿಂಧು ಕೈಚೆಲ್ಲಿದ್ದು ದುಬಾರಿಯಾಯಿತು. 18–8ರಿಂದ ಮುನ್ನಡೆ ಸಾಧಿಸಿದ ಜಪಾನ್‌ ಆಟಗಾರ್ತಿ, ಪಂದ್ಯದ ಕೊನೆಯಲ್ಲಿ ಆಕರ್ಷಕವಾಗಿ ಕ್ರಾಸ್‌ ಕೋರ್ಟ್‌ ರಿಟರ್ನ್‌ ಮಾಡಿ ಗೆಲುವಿನಅಂಕ ಗಿಟ್ಟಿಸಿಕೊಂಡರು.

ಪಂದ್ಯ ಕೇವಲ 37 ನಿಮಿಷಗಳಲ್ಲಿ ಕೊನೆಗೊಂಡಿತು.

ಇನ್ನೊಂದು ಸೆಮಿಫೈನಲ್‌ ಪಂದ್ಯದಲ್ಲಿ ಚೀನಾ ತೈಪೆಯ ತಾಯ್‌ ಜು ಯಿಂಗ್‌ ಅವರು ಜಪಾನ್‌ನ ಅಕಾನೆ ಯಮಗಚಿ ಅವರನ್ನು 57ನಿಮಿಷಗಳಲ್ಲಿ 15-21 24-22 21-19ರಿಂದ ಸೋಲಿಸಿದರು. ಇಂದು ನಡೆಯುವ ಫೈನಲ್‌ನಲ್ಲಿತಾಯ್‌ ಜು ಯಿಂಗ್‌ ಮತ್ತು ಒಕುಹರ ಸೆಣಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.