ADVERTISEMENT

ಇಂಡೊನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿ: ಸೆಮಿಫೈನಲ್‌ಗೆ ಸಿಂಧು ಲಗ್ಗೆ

ಪಿಟಿಐ
Published 19 ನವೆಂಬರ್ 2021, 11:16 IST
Last Updated 19 ನವೆಂಬರ್ 2021, 11:16 IST
ಪಿ.ವಿ.ಸಿಂಧು ಅವರು ಚೆಂಡು ಹಿಂತಿರುಗಿಸಿ ಪರಿ– ಎಎಫ್‌ಪಿ ಚಿತ್ರ
ಪಿ.ವಿ.ಸಿಂಧು ಅವರು ಚೆಂಡು ಹಿಂತಿರುಗಿಸಿ ಪರಿ– ಎಎಫ್‌ಪಿ ಚಿತ್ರ   

ಬಾಲಿ: ಎದುರಾಳಿಯ ವಿರುದ್ಧ ಸುಲಭ ಜಯ ಗಳಿಸಿದ ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ, ಭಾರತದ ಪಿ.ವಿ.ಸಿಂಧು, ಇಂಡೊನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್‌ ಟೂರ್ನಿಯ ಸೆಮಿಫೈನಲ್‌ ತಲುಪಿದ್ದಾರೆ.

ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಎಂಟರಘಟ್ಟದ ಹಣಾಹಣಿಯಲ್ಲಿ ವಿಶ್ವ ಚಾಂಪಿಯನ್ ಸಿಂಧು, 21-13, 21-10ರಿಂದ ಟರ್ಕಿಯ ನೆಸ್ಲಿಹಾನ್‌ ಯಿಜಿಟ್‌ ಅವರನ್ನು ಪರಾಭವಗೊಳಿಸಿದರು. ಮೂರನೇ ಶ್ರೇಯಾಂಕದ ಸಿಂಧು 35 ನಿಮಿಷಗಳ ಆಟದಲ್ಲಿ ಸಂಪೂರ್ಣ ಪಾರಮ್ಯ ಮೆರೆದರು. ಇಲ್ಲಿ ಶ್ರೇಯಾಂಕರಹಿತರಾಗಿರುವ ನೆಸ್ಲಿಹಾನ್‌ ಎದುರು ಭಾರತದ ಆಟಗಾರ್ತಿಗೆ ಒಲಿದ ಒಟ್ಟಾರೆ ನಾಲ್ಕನೇ ಜಯ ಇದು.

ಹೋದ ತಿಂಗಳು ಡೆನ್ಮಾರ್ಕ್ ಓಪನ್ ಟೂರ್ನಿಯಲ್ಲೂ ನೆಸ್ಲಿಹಾನ್ ಅವರು ಸಿಂಧು ಎದುರು ನಿರಾಸೆ ಅನುಭವಿಸಿದ್ದರು.

ADVERTISEMENT

ಟೂರ್ನಿಯಲ್ಲಿ ಇದುವರೆಗಿನ ಪಂದ್ಯಗಳಲ್ಲಿ ಬಹುತೇಕ ಸುಲಭದ ಜಯ ಸಂಪಾದಿಸಿರುವ ಸಿಂಧು ಅವರಿಗೆ ಮುಂದಿನ ಸುತ್ತಿನಲ್ಲಿ ಕಠಿಣ ಸವಾಲು ಎದುರಾಗಲಿದೆ. ಜಪಾನ್ ಆಟಗಾರ್ತಿ ಅಗ್ರಶ್ರೇಯಾಂಕದ ಅಕಾನೆ ಯಾಮಗುಚಿ ಹಾಗೂ ಐದನೇ ಶ್ರೇಯಾಂಕದ, ಥಾಯ್ಲೆಂಡ್ ಆಟಗಾರ್ತಿ ಪಾರ್ನ್‌ಪವೀ ಚೋಚುವಾಂಗ್ ಅವರ ನಡುವಣ ಕ್ವಾರ್ಟರ್‌ಫೈನಲ್ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.