ADVERTISEMENT

ಸೆಯಂಗ್‌ಗೆ ಮಣಿದ ಸಿಂಧುಗೆ ಬೆಳ್ಳಿ

ವಿಶ್ವ ಟೂರ್ ಬ್ಯಾಡ್ಮಿಂಟನ್‌ ಫೈನಲ್ಸ್: ಕೊರಿಯಾ ಆಟಗಾರ್ತಿಗೆ ಗರಿ

ಪಿಟಿಐ
Published 5 ಡಿಸೆಂಬರ್ 2021, 12:45 IST
Last Updated 5 ಡಿಸೆಂಬರ್ 2021, 12:45 IST
ಪ್ರಶಸ್ತಿ ವಿಜೇತ ಆ್ಯನ್ ಸೆಯಂಗ್‌– ಎಎಫ್‌ಪಿ ಚಿತ್ರ
ಪ್ರಶಸ್ತಿ ವಿಜೇತ ಆ್ಯನ್ ಸೆಯಂಗ್‌– ಎಎಫ್‌ಪಿ ಚಿತ್ರ   

ಬಾಲಿ: ಪಿ.ವಿ ಸಿಂಧು ಅವರ ಪ್ರಶಸ್ತಿ ಗೆಲುವಿನ ಕನಸು ಕೈಗೂಡಲಿಲ್ಲ. ವಿಶ್ವ ಟೂರ್‌ ಬ್ಯಾಡ್ಮಿಂಟನ್‌ ಫೈನಲ್ಸ್‌ ಟೂರ್ನಿಯಲ್ಲಿ ಕೊರಿಯಾದ ಆ್ಯನ್ ಸೆಯಂಗ್ ಎದುರು ಸೋತ ಭಾರತದ ಆಟಗಾರ್ತಿ ಬೆಳ್ಳಿ ಪದಕಕ್ಕೆ ಸಮಾಧಾನಪಡಬೇಕಾಯಿತು.

ವಿಶ್ವ ಚಾಂಪಿಯನ್‌ ಸಿಂಧು, ಮಹಿಳಾ ಸಿಂಗಲ್ಸ್ ಫೈನಲ್‌ ಹಣಾಹಣಿಯಲ್ಲಿ 16-21, 12-21ರಿಂದ ವಿಶ್ವ ಕ್ರಮಾಂಕದಲ್ಲಿ ಆರನೇ ಸ್ಥಾನದಲ್ಲಿರುವ ಸೆಯಂಗ್ ಎದುರು ಎಡವಿದರು. 40 ನಿಮಿಷಗಳ ಪಂದ್ಯದಲ್ಲಿ ಕೊರಿಯಾ ಆಟಗಾರ್ತಿಯ ಸವಾಲು ಮೀರಲು ಸಿಂಧು ಅವರಿಗೆ ಸಾಧ್ಯವಾಗಲಿಲ್ಲ.

ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು ಅವರಿಗೆ ಸೆಯಂಗ್‌ ಎದುರು ಇದು ಸತತ ಮೂರನೇ ಸೋಲು. ಈ ಗೆಲುವಿನೊಂದಿಗೆ ಸೆಯಂಗ್‌, ವಿಶ್ವ ಟೂರ್‌ ಬ್ಯಾಡ್ಮಿಂಟನ್‌ ಫೈನಲ್ಸ್‌ ಗೆದ್ದ ಕೊರಿಯಾದ ಮೊದಲ ಆಟಗಾರ್ತಿ ಎಂಬ ಶ್ರೇಯ ಗಳಿಸಿದರು. ಬಾಲಿಯಲ್ಲಿ ಅವರಿಗೆ ಇದು ಸತತ ಮೂರನೇ ಪ್ರಶಸ್ತಿ. ಇಂಡೊನೇಷ್ಯಾ ಮಾಸ್ಟರ್ಸ್ ಮತ್ತು ಇಂಡೊನೇಷ್ಯಾ ಓಪನ್ ಟೂರ್ನಿಗಳಲ್ಲಿ ಅವರಿಗೆ ಟ್ರೋಫಿ ಒಲಿದಿತ್ತು.

ADVERTISEMENT

26 ವರ್ಷದ ಸಿಂಧು ಕೊರಿಯಾ ಆಟಗಾರ್ತಿಯ ವಿರುದ್ಧ ಸೂಕ್ತ ಯೋಜನೆಗಳನ್ನು ಹೆಣೆಯುವಲ್ಲಿ ವಿಫಲರಾದರು. ಹೆಚ್ಚು ಆಕ್ರಮಣಕಾರಿ ಆಟ ಅವರಿಂದ ಹೊಮ್ಮಲಿಲ್ಲ. ಸಂಪೂರ್ಣ ಅಂಗಣವನ್ನು ಬಳಸಿಕೊಳ್ಳುವಲ್ಲಿಯೂ ಅವರು ಹಿಂದೆ ಬಿದ್ದರು.

19 ವರ್ಷದ ಸೆಯಂಗ್‌ ನೆಟ್‌ನಲ್ಲಿ ಪರಿಣಾಮಕಾರಿ ಎನಿಸಿದರು. ಗುಣಮಟ್ಟದ ಹೊಡೆತಗಳು, ಚುರುಕಿನ ಪಾದಚಲನೆಯೊಂದಿಗೆ ಸಿಂಧು ಅವರ ಯೋಜನೆಗಳನ್ನು ತಲೆಕೆಳಗಾಗಿಸಿದರು.

ಮೊದಲ ಗೇಮ್‌ನ ಆರಂಭದಲ್ಲಿ 0–4ರಿಂದ ಹಿನ್ನಡೆ ಅನುಭವಿಸಿದ್ದ ಸಿಂಧು, ಬಳಿಕ ತಿರುಗೇಟು ನೀಡುವ ಸಾಹಸ ಮಾಡಿದರು. ಆದರೆ ವೇಗದ ಆಟದ ಮೂಲಕ 16–8ರಿಂದ ಮುನ್ನಡೆದ ಸೆಯಂಗ್ ಅದೇ ಲಯದೊಂದಿಗೆ ಸಾಗಿ ಗೇಮ್ ತಮ್ಮದಾಗಿಸಿಕೊಂಡರು.

ಎರಡನೇ ಗೇಮ್‌ನಲ್ಲಿ ಸಿಂಧು 5–4ರ ಆರಂಭದ ಮುನ್ನಡೆ ಗಳಿಸಿದ್ದರು. ಕೆಲವೇ ನಿಮಿಷಗಳಲ್ಲಿ ಪುಟಿದೆದ್ದ ಸೆಯಂಗ್‌ 10–6ರ ಮುನ್ನಡೆ ಸಾಧಿಸಿದರು. ರ‍್ಯಾಲಿಗಳಲ್ಲಿ ಪಟ್ಟು ಸಡಿಲಿಸದೆ ಇದ್ದುದು ಅವರ ಮುನ್ನಡೆಗೆ ಕಾರಣವಾಯಿತು. ವಿರಾಮದ ವೇಳೆಗೆ ಕೊರಿಯಾ ಆಟಗಾರ್ತಿ 11–8ರಿಂದ ಮೇಲುಗೈ ಸಾಧಿಸಿದ್ದರು.

ವಿರಾಮದ ಬಳಿಕವೂ ಸೆಯಂಗ್ ಪಾರಮ್ಯ ಮುಂದುವರಿಯಿತು. ಮುನ್ನಡೆಯ ನಾಗಾಲೋಟ 15–8ಕ್ಕೆ ತಲುಪಿತು. ಈ ಹಂತದಲ್ಲಿ 10 ಮ್ಯಾಚ್‌ ಪಾಯಿಂಟ್ಸ್ ಕಲೆಹಾಕಿದ ಸೆಯಂಗ್‌ ಗೆಲುವಿನ ಸಂಭ್ರಮದಲ್ಲಿ ಮಿಂದೆದ್ದರು.

ಡಿಸೆಂಬರ್‌ 12ರಿಂದ ಸ್ಪೇನ್‌ನ ಹುಯೆಲ್ವಾದಲ್ಲಿ ವಿಶ್ವ ಚಾಂಪಿಯನ್‌ಷಿಪ್‌ ನಿಗದಿಯಾಗಿದ್ದು, ಸಿಂಧು ಕಣಕ್ಕಿಳಿಯಲಿದ್ದಾರೆ. ಚಾಂಪಿಯನ್‌ಷಿಪ್‌ನಲ್ಲಿ ಪದಕ ಉಳಿಸಿಕೊಳ್ಳುವ ಸವಾಲು ಅವರ ಮುಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.