ADVERTISEMENT

ಸಿಂಗಪುರ ಬ್ಯಾಡ್ಮಿಂಟನ್‌: ಪ್ರಧಾನ ಹಂತಕ್ಕೆ ಮಿಥುನ್‌

ಬ್ಯಾಡ್ಮಿಂಟನ್‌: ಸಿಂಗಪುರ ಓಪನ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2022, 19:30 IST
Last Updated 12 ಜುಲೈ 2022, 19:30 IST
ಮಿಥುನ್ ಮಂಜುನಾಥ್
ಮಿಥುನ್ ಮಂಜುನಾಥ್   

ಸಿಂಗಪುರ (ಪಿಟಿಐ): ಭಾರತದ ಯುವ ಆಟಗಾರ ಮಿಥುನ್‌ ಮಂಜುನಾಥ್‌ ಅವರು ಇಲ್ಲಿ ಆರಂಭವಾದ ಸಿಂಗಪುರ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ವಿಭಾಗದ ಪ್ರಧಾನ ಹಂತ ಪ್ರವೇಶಿಸಿದರು.

ಮಂಗಳವಾರ ನಡೆದ ಅರ್ಹತಾ ಹಂತದ ಎರಡೂ ಪಂದ್ಯಗಳಲ್ಲಿ ಅವರು ಗೆದ್ದರು. ಮೊದಲ ಹಣಾಹಣಿಯಲ್ಲಿ 21–11, 21–15 ರಲ್ಲಿ ಡೆನ್ಮಾರ್ಕ್‌ನ ಮ್ಯಾಡ್ಸ್‌ ಕ್ರೀಸ್ಟೋಫರ್‌ಸನ್‌ ಅವರನ್ನು ಮಣಿಸಿದರೆ, ಎರಡನೇ ಪಂದ್ಯದಲ್ಲಿ 21–14, 21–12 ರಲ್ಲಿ ಜರ್ಮನಿಯ ಮ್ಯಾಕ್ಸ್ ವೈಸ್‌ಕರ್ಚೆನ್‌ ಎದುರು ಜಯಿಸಿದರು.

ಬುಧವಾರ ನಡೆಯಲಿರುವ ಮೊದಲ ಸುತ್ತಿನ ಪಂದ್ಯದಲ್ಲಿ ಮಿಥುನ್‌, ಭಾರತದವರೇ ಆದ ಕೆ.ಶ್ರೀಕಾಂತ್‌ ಎದುರು ಆಡುವರು.

ADVERTISEMENT

ಪ್ರೀ ಕ್ವಾರ್ಟರ್‌ಗೆ ಸುತ್ತಿಗೆ ಅರ್ಜುನ್‌–ಧ್ರುವ್: ಎಂ.ಆರ್‌.ಅರ್ಜುನ್‌ ಮತ್ತು ಧ್ರುವ್‌ ಕಪಿಲ ಜೋಡಿ ಪುರುಷರ ಡಬಲ್ಸ್‌ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು. ಮೊದಲ ಸುತ್ತಿನಲ್ಲಿ ಅವರು 21–19, 21–9 ರಲ್ಲಿ ಜರ್ಮನಿಯ ಜೋನ್ಸ್ ರಾಲ್ಫಿ ಜನ್ಸೆನ್‌– ಜಾನ್‌ ಕಾಲಿನ್‌ ವೊಲ್ಕೆರ್‌ ವಿರುದ್ಧ ಜಯಿಸಿದರು.

ಉಳಿದಂತೆ ಮೊದಲ ದಿನದಲ್ಲಿ ಕಣಕ್ಕಿಳಿದ ಭಾರತದ ಎಲ್ಲ ಸ್ಪರ್ಧಿಗಳು ಸೋತುಹೊರಬಿದ್ದರು. ಪುರುಷರ ಸಿಂಗಲ್ಸ್‌ ವಿಭಾಗದ ಅರ್ಹತಾ ಹಂತದ ಪಂದ್ಯದಲ್ಲಿ ಚಿರಾಗ್‌ ಸೇನ್‌ 14–21, 14–21 ರಲ್ಲಿ ಮಲೇಷ್ಯದ ಚಿಯಾಮ್‌ ಜೂನ್‌ ವೀ ವಿರುದ್ಧ; ಕಿರಣ್‌ ಜಾರ್ಜ್‌ 17–21, 17–21 ರಲ್ಲಿ ಅಜರ್‌ಬೈಜಾನ್‌ನ ಅಡೆ ರೆಸ್ಕಿ ದ್ವಿಕಾವೊ ವಿರುದ್ಧ ಸೋತರು.

ಪುರುಷರ ಡಬಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಕೃಷ್ಣಪ್ರಸಾದ್‌– ಪಂಜಲ ವಿಷ್ಣುವರ್ಧನ್‌ 15–21, 21–19, 17–21 ರಲ್ಲಿ ಸಿಂಗಪುರದ ಹಿ ಯೊಂಗ್‌ ಕಾಯ್ ಟೆರಿ– ಲೊಹ್‌ ಕೀನ್‌ ಹೀನ್ ಎದುರು; ಶ್ಯಾಮ್ ಪ್ರಸಾದ್‌– ಎಸ್‌.ಸುಜಿತ್ 12–21, 10–21 ರಲ್ಲಿ ಮಲೇಷ್ಯದ ಗೊ ವಿ ಶೆಮ್– ಲೊ ಜುವಾನ್‌ ಶೆನ್‌ ಎದುರು ಮಣಿದರು.

ಪಿ.ವಿ.ಸಿಂಧು, ಸೈನಾ ನೆಹ್ವಾಲ್‌, ಪಿ.ಕಶ್ಯಪ್‌, ಸಮೀರ್‌ ವರ್ಮ ಮತ್ತು ಎಚ್‌.ಎಸ್‌.ಪ್ರಣಯ್‌ ಅವರು ಪ್ರಶಸ್ತಿಯೆಡೆಗಿನ ಅಭಿಯಾನ ಬುಧವಾರ ಆರಂಭಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.