ADVERTISEMENT

ಸಿಂಗಪುರ ಸ್ಮ್ಯಾಷ್‌ ಟಿಟಿ: ಶರತ್‌ ನಿರ್ಗಮನ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2024, 16:26 IST
Last Updated 15 ಮಾರ್ಚ್ 2024, 16:26 IST
ಭಾರತದ ಶರತ್ ಕಮಲ್ 
ಭಾರತದ ಶರತ್ ಕಮಲ್    

ಸಿಂಗಪುರ: ಭಾರತದ ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್ ಅವರು ಸಿಂಗಪುರ ಸ್ಮ್ಯಾಷ್‌ನ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಫ್ರಾನ್ಸ್‌ನ ಫೆಲಿಕ್ಸ್ ಲೆಬ್ರನ್ ವಿರುದ್ಧ ಪರಾಭವಗೊಂಡರು. ಈ ಮೂಲಕ ಟೂರ್ನಿಯಲ್ಲಿ ಭಾರತದ ಆಟಗಾರರ ಸವಾಲು ಅಂತ್ಯಗೊಂಡಿದೆ.

ಶುಕ್ರವಾರ ನಡೆದ ಪಂದ್ಯದಲ್ಲಿ ಶರತ್‌ ಅವರು 9–11, 2–11, 7–11, 11–9, 8–11ರಿಂದ ಫೆಲಿಕ್ಸ್ ಅವರ ಎದುರು ಸೋತರು. ಮೊದಲು ಮೂರು ಗೇಮ್‌ನಲ್ಲಿ ಹಿನ್ನಡೆ ಅನುಭವಿಸಿದ್ದ ಭಾರತದ ಆಟಗಾರ, ನಾಲ್ಕನೇ ಗೇಮ್‌ನಲ್ಲಿ ತಿರುಗೇಟು ನೀಡಿದರು. ಆದರೆ, ಐದನೇ ಗೇಮ್‌ನಲ್ಲಿ ಮತ್ತೆ ಮುಗ್ಗರಿಸಿದರು.

‌ಅರ್ಹತಾ ಸುತ್ತಿನಲ್ಲಿ ಗೆದ್ದು ಪ್ರಧಾನ ಸುತ್ತಿಗೆ ತಲುಪಿದ್ದ ವಿಶ್ವದ 88ನೇ ಕ್ರಮಾಂಕದ ಶರತ್‌ ಅವರು 16ರ ಘಟ್ಟದ ಪಂದ್ಯದಲ್ಲಿ ವಿಶ್ವದ 22ನೇ ಕ್ರಮಾಂಕದ ಒಮರ್ ಅಸ್ಸಾರ್ (ಈಜಿಪ್ಟ್‌) ಅವರನ್ನು ಸೋಲಿಸಿದ್ದರು. 64ರ ಘಟ್ಟ ಹಾಗೂ 32ರ ಘಟ್ಟದಲ್ಲೂ ತನಗಿಂತ ಹೆಚ್ಚಿನ ಕ್ರಮಾಂಕದ ಆಟಗಾರರ ವಿರುದ್ಧ ಜಯ ಸಾಧಿಸಿದ್ದರು.

ADVERTISEMENT

ಭಾರತದ ಮಾನವ್ ವಿಕಾಸ್‌ ಥಕ್ಕರ್, ಹರ್ಮೀತ್ ದೇಸಾಯಿ, ‌‌ಸತ್ಯನ್ ಜ್ಞಾನಶೇಖರನ್ ಅವರಿಗೆ ಅರ್ಹತಾ ಸುತ್ತು ದಾಟಲು ಸಾಧ್ಯವಾಗಲಿಲ್ಲ. ಮಹಿಳೆಯರ ಸಿಂಗಲ್ಸ್‌ನಲ್ಲಿ ಮಾಣಿಕಾ ಬಾತ್ರಾ, ಸುತೀರ್ಥ ಮುಖರ್ಜಿ, ಶ್ರೀಜಾ ಅಕುಲ ಮತ್ತು ರೀತ್ ಟೆನ್ನಿಸನ್ ಆರಂಭಿಕ ಸುತ್ತಿನಲ್ಲೇ ಮುಗ್ಗರಿಸಿದರು.

ಒಲಿಂಪಿಕ್ಸ್‌ಗೆ ಅವಕಾಶ ಸಾಧ್ಯತೆ: ಶರತ್‌ ಅವರು ಈ ಟೂರ್ನಿಯಲ್ಲಿ ತನಗಿಂತ ಉತ್ತಮ ಕ್ರಮಾಂಕದ ಆಟಗಾರರ ಮೇಲೆ ಜಯ ಸಾಧಿಸಿದ್ದರಿಂದ ಅವರ ರ‍್ಯಾಂಕಿಂಗ್‌ನಲ್ಲಿ ಗಣನೀಯವಾಗಿ ಸುಧಾರಿಸಲಿದೆ. ಹೀಗಾಗಿ, ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಅವರಿಗೆ ಟಿಕೆಟ್‌ ದೊರೆಯುವ ಸಾಧ್ಯತೆಯಿದೆ.

ಪುರುಷರ ಸಿಂಗಲ್ಸ್‌ ಆಟಗಾರರ ರ್‍ಯಾಂಕಿಂಗ್‌ ಆಧರಿಸಿ ಇಬ್ಬರು ಆಟಗಾರರನ್ನು ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಭಾರತ ಟೇಬಲ್ ಟೆನಿಸ್ ಫೆಡರೇಷನ್ ಕಳುಹಿಸಲಿದೆ. ಸದ್ಯ ಹರ್ಮೀತ್ ದೇಸಾಯಿ (64) ಮತ್ತು ಮಾನವ್ ಠಕ್ಕರ್ (83) ಅಗ್ರ ಕ್ರಮಾಂಕ ಹೊಂದಿದ್ದಾರೆ. ಮುಂದಿನ ವಾರ ಪ್ರಕಟವಾಗುವ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಶರತ್‌ ಅವರಿಗೆ ಬಡ್ತಿ ದೊರೆಯಲಿದೆ.

ಭಾರತದ ಪುರುಷ ಮತ್ತು ಮಹಿಳಾ ಟೇಬಲ್‌ ಟೆನಿಸ್‌ ತಂಡಗಳು ಮೊದಲ ಬಾರಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದು ಈಗಾಗಲೇ ಇತಿಹಾಸ ಬರೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.