ಹೊ ಚಿ ಮಿನ್ ಸಿಟಿ: ನೇರ ಗೇಮ್‌ಗಳಿಂದ ಜಪಾನ್‌ನ ಮಿನೋರು ಕೊಗ ಎದುರು ಗೆಲುವು ಸಾಧಿಸಿದ ಭಾರತದ ಸೌರಭ್ ವರ್ಮಾ, ಬಿಡಬ್ಲ್ಯುಎಫ್ ಟೂರ್ ಸೂಪರ್ 100 ವಿಯೆಟ್ನಾಂ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ಪ್ರವೇಶಿಸಿದರು.
ಶನಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ನಾಲ್ಕರ ಘಟ್ಟದ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಸೌರಭ್ 22–20, 21–15ರಲ್ಲಿ ಜಪಾನ್ ಆಟಗಾರನನ್ನು ಮಣಿಸಿದರು. ವಿಶ್ವ ಕ್ರಮಾಂಕದಲ್ಲಿ 112ನೇ ಸ್ಥಾನದಲ್ಲಿರುವ ಮಿನೋರು ವಿರುದ್ಧ ಜಯ ಗಳಿಸಲು ಸೌರಭ್‌ಗೆ ಕೇವಲ 51 ನಿಮಿಷ ಸಾಕಾದವು. ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಅವರು ಚೀನಾದ ಸೂನ್ ಫೀ ಜಿಯಾಂಗ್ ವಿರುದ್ಧ ಸೆಣಸುವರು.
ಆರಂಭದಲ್ಲಿ ಹಿನ್ನಡೆ: ಸೌರಭ್, ಪಂದ್ಯದ ಆರಂಭದಲ್ಲಿ 0–4ರ ಹಿನ್ನಡೆ ಅನುಭವಿಸಿದ್ದರು. ನಂತರ ಚೇತರಿಸಿಕೊಂಡು ಸುಲಭವಾಗಿ ಪಾಯಿಂಟ್‌ಗಳನ್ನು ಗಳಿಸಿ ವಿರಾಮದ ವೇಳೆ 11–9ರಲ್ಲಿ ಮುನ್ನಡೆದರು. ನಂತರ ಸತತ ಮೂರು ಪಾಯಿಂಟ್ ಗಳಿಸಿದರು. ಆದರೆ ತಿರುಗೇಟು ನೀಡಿದ ಎದುರಾಳಿ ಆಟಗಾರ 18–18ರ ಸಮಬಲ ಸಾಧಿಸಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡರು. 20–19ರ ಮುನ್ನಡೆ ಗಳಿಸಲು ಯಶಸ್ವಿಯಾದ ಮಿನೊರು ಗೇಮ್ ಕೈವಶ ಮಾಡಿಕೊಳ್ಳುವ ಕಸನು ಹೊತ್ತಿದ್ದಾಗಲೇ ಸೌರಭ್ ಆಘಾತ ನೀಡಿದರು. ಸತತ ಮೂರು ಪಾಯಿಂಟ್ ಗಳಿಸಿ ಗೇಮ್ ವಶಪಡಿಸಿಕೊಂಡರು.
ಎರಡನೇ ಗೇಮ್‌ನಲ್ಲೂ ಆರಂಭದಲ್ಲಿ ಸೌರಭ್ 2–7ರ ಹಿನ್ನಡೆ ಅನುಭವಿಸಿದ್ದರು. 11–8ರ ಮುನ್ನಡೆಯೊಂದಿಗೆ ವಿರಾಮಕ್ಕೆ ತೆರಳಿದಾಗ ಮಿನೊರು ಭರವಸೆಯ ಅಲೆಯಲ್ಲಿದ್ದರು. ಆದರೆ ವಿರಾಮದ ನಂತರ ಚಾಕಚಕ್ಯತೆ ಮೆರೆದ ಸೌರಭ್, ಜಪಾನ್ ಆಟಗಾರನ ಕನಸನ್ನು ನುಚ್ಚುನೂರು ಮಾಡಿದರು. ಕೊನೆಯಲ್ಲಿ ಸತತ ನಾಲ್ಕು ಪಾಯಿಂಟ್ ಕಲೆ ಹಾಕಿ ಫೈನಲ್‌ಗೆ ಪ್ರವೇಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.