ADVERTISEMENT

ಚಾಮರಾಜನಗರ: ರಾಜ್ಯ ಮಟ್ಟದ ಚೆಸ್‌ ಪಂದ್ಯಾವಳಿಗೆ ಚಾಲನೆ

ಭಾನುವಾರ ಮುಕ್ತಾಯ, ಇಲ್ಲಿ ಗೆದ್ದವರು ರಾಷ್ಟ್ರಮಟ್ಟಕ್ಕೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 16:24 IST
Last Updated 23 ಸೆಪ್ಟೆಂಬರ್ 2022, 16:24 IST
ಚಾಮರಾಜನಗರದದಲ್ಲಿ ಶುಕ್ರವಾರ ಆರಂಭಾಗಿರುವ ಮೂರು ದಿನಗಳ 11 ವರ್ಷದೊಳಗಿನ ಮುಕ್ತ ಹಾಗೂ ಬಾಲಕಿಯರ ಚೆಸ್‌ ಟೂರ್ನಿಯಲ್ಲಿ ಮಕ್ಕಳು ಆಡುವುದನ್ನು ಗ್ರ್ಯಾಂಡ್‌ ಮಾಸ್ಟರ್‌ ಪ್ರಣವ್‌ ಆನಂದ್‌ ವೀಕ್ಷಿಸಿದರು
ಚಾಮರಾಜನಗರದದಲ್ಲಿ ಶುಕ್ರವಾರ ಆರಂಭಾಗಿರುವ ಮೂರು ದಿನಗಳ 11 ವರ್ಷದೊಳಗಿನ ಮುಕ್ತ ಹಾಗೂ ಬಾಲಕಿಯರ ಚೆಸ್‌ ಟೂರ್ನಿಯಲ್ಲಿ ಮಕ್ಕಳು ಆಡುವುದನ್ನು ಗ್ರ್ಯಾಂಡ್‌ ಮಾಸ್ಟರ್‌ ಪ್ರಣವ್‌ ಆನಂದ್‌ ವೀಕ್ಷಿಸಿದರು   

ಚಾಮರಾಜನಗರ:ರಾಜ್ಯ ಮಟ್ಟದ ಫಿಡೆ ಶ್ರೇಯಾಂಕದ 11 ವರ್ಷದೊಳಗಿನ ಮುಕ್ತ ಮತ್ತು ಬಾಲಕಿಯರ ಚೆಸ್ ಚಾಂಪಿಯನ್‌ಶಿಪ್‌ಗೆ ಶುಕ್ರವಾದ ನಗರದಲ್ಲಿ ಚಾಲನೆ ದೊರೆಯಿತು.

ನಗರದ ಕಿಂಗ್ಸ್‌ ರೆಸಾರ್ಟ್‌ನಲ್ಲಿ (ನಿಜಗುಣ) ಮೂರು ದಿನಗಳ ಕಾಲ ನಡೆಯಲಿರುವ ಪಂದ್ಯಾವಳಿಗೆ 16 ವರ್ಷದೊಳಗಿನ ವಿಶ್ವ ಚಾಂಪಿಯನ್‌ ಶಿಪ್‌ ವಿಜೇತರಾದ ಕರ್ನಾಟಕದ 4ನೇ ಗ್ರ್ಯಾಂಡ್‌ ಮಾಸ್ಟರ್‌ ಪ್ರಣವ್‌ ಆನಂದ್‌ ಅವರು, ಚದುರಂಗದ ಕಾಯಿಗಳನ್ನು ನಡೆಸುವುದರ ಮೂಲಕ ಉದ್ಘಾಟಿಸಿ, ಎಲ್ಲ ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು.

ಭಾರತೀಯ ಜೀವ ವಿಮಾ ನಿಗಮದ ಹಿರಿಯ ವಿಭಾಗೀಯ ವ್ಯವಸ್ಥಾಪಕ ಜಿ.ಸತ್ಯನಾರಾಯಣ ಶಾಸ್ತ್ರಿ ಮಾತನಾಡಿ, ‘ಚಾಮರಾಜನಗರದಲ್ಲಿ ಇಂತಹ ಪಂದ್ಯಾವಳಿ ನಡೆದಿರುವುದು ಸಂತಸ ತಂದಿದೆ. ಮುಂದೆಯೂ ಇನ್ನಷ್ಟು ಕಾರ್ಯಕ್ರಮಗಳು ನಡೆಯಬೇಕು. ನಗರದಿಂದ ಇನ್ನಷ್ಟು ಚೆಸ್‌ ಕ್ರೀಡಾಳುಗಳು ಮುಂದೆ ಬರಬೇಕು’ ಎಂದು ಹಾರೈಸಿದರು.

ADVERTISEMENT

ಮೊದಲ ಟೂರ್ನಿ: ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಚೆಸ್‌ ಚಾಂಪಿಯನ್‌ ಶಿಪ್‌ ನಡೆಯತ್ತಿರುವುದು ಇದೇ ಮೊದಲು.

ಚಾಮರಾಜನಗರ ಜಿಲ್ಲಾ ಚೆಸ್ ಅಸೋಸಿಯೇಷನ್, ಬನಶಂಕರಿ ಸಮೂಹ ಸಂಸ್ಥೆ ಹಾಗೂ ಎಲ್‌ಐಸಿ ಮೈಸೂರು ವಿಭಾಗದ ಜಂಟಿ ಆಶ್ರಯದಲ್ಲಿ ಪಂದ್ಯಾವಳಿ ನಡೆಯುತ್ತಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ 152 ಮಕ್ಕಳು ಭಾಗವಹಿಸಿದ್ದಾರೆ. ಮುಕ್ತ (ಬಾಲಕ, ಬಾಲಕಿಯರು ಸೇರಿ) ವಿಭಾಗದಲ್ಲಿ 102 ಹಾಗೂ ಬಾಲಕಿಯರ ವಿಭಾಗದಲ್ಲಿ 48 ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ.

ಎಂಟು ಸುತ್ತುಗಳಲ್ಲಿ ಸ್ಪರ್ಧೆ ನಡೆಯಲಿದೆ. ಶುಕ್ರವಾರ ಮೂರು ಸುತ್ತುಗಳು ಪೂರ್ಣಗೊಂಡಿವೆ. ಶನಿವಾರ ಮೂರು ಸುತ್ತಿನ ಪಂದ್ಯ ನಡೆಯಲಿದ್ದು, ಕೊನೆಯ ದಿನವಾದ ಭಾನುವಾರ 7ನೇ ಮತ್ತು 8ನೇ ಸುತ್ತಿನ ಸ್ಪರ್ಧೆಗಳು ನಡೆಯಲಿವೆ.50ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ರೇಟಿಂಗ್ ಹೊಂದಿದ ಚೆಸ್ ಪಟುಗಳು ಭಾಗವಹಿಸಿದ್ದಾರೆ.

ಈ ಟೂರ್ನಿಯಲ್ಲಿ ವಿಜೇತರಾದ ನಾಲ್ವರುರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ. ಹರಿಯಾಣದ ಗುರುಗ್ರಾಮದಲ್ಲಿ ಅ. 28ರಿಂದ ಟೂರ್ನಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.

ಬನಶಂಕರಿ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಎನ್. ಮೂರ್ತಿ, ಜಿಲ್ಲಾ ಚೆಸ್ ಅಸೋಶಿಯೇಷನ್‌ ಅಧ್ಯಕ್ಷ ಜೆ.ಸುರೇಶ್, ಮಾರಾಟ ಅಧಿಕಾರಿ ಜೆ.ಎಚ್.ದೇಶಪಾಂಡೆ, ರಾಜ್ಯ ಚೆಸ್ ಅಸೋಸಿಯೇಷನ್ ಉಪಾಧ್ಯಕ್ಷ ಮುರಳೀಧರ ನಾಗೇಂದ್ರ, ಖಜಾಂಚಿ ಪುನೀತ್ ಇದ್ದರು.

ಕಲ್ಬುರ್ಗಿಯ ಪ್ರಮೋದ್ ಮೋರೆ, ಬಿ.ಅರಸು ಪ್ರಶಾಂತ್, ಸಂಜನಾ ಮತ್ತು ಮಂಜುನಾಥ್ ಜೈನ್ ತೀರ್ಪುಗಾರರಾಗಿ ಭಾಗವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.