ADVERTISEMENT

ರಾಜ್ಯ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್ ಟೂರ್ನಿ: ಎರಡು ಫೈನಲ್‌ ತಲುಪಿದ ಶೈನಾ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 17:18 IST
Last Updated 1 ಆಗಸ್ಟ್ 2025, 17:18 IST
ಬ್ಯಾಡ್ಮಿಂಟನ್
ಬ್ಯಾಡ್ಮಿಂಟನ್   

ಮಂಗಳೂರು: ಬೆಂಗಳೂರಿನ ಶೈನಾ ಮಣಿಮುತ್ತು ಅವರು ನಗರದ ಉರ್ವ ಕ್ರೀಡಾ ಸಂಕೀರ್ಣದಲ್ಲಿ ನಡೆಯುತ್ತಿರುವ ರಾಜ್ಯ ರ್‍ಯಾಂಕಿಂಗ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಶುಕ್ರವಾರ 19 ವರ್ಷದೊಳಗಿನ ಬಾಲಕಿಯರ ಮತ್ತು ಮಹಿಳಾ ವಿಭಾಗಗಳಲ್ಲಿ ಸಿಂಗಲ್ಸ್‌ ಫೈನಲ್ ತಲುಪಿದ್ದು ‘ಪ್ರಶಸ್ತಿ ಡಬಲ್‌’ ಹಾದಿಯಲ್ಲಿದ್ದಾರೆ.

ನಾಲ್ಕನೇ ಶ್ರೇಯಾಂಕ ಪಡೆದಿದ್ದ ಶೈನಾ ಮಹಿಳೆಯರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ 21–9, 21–10 ರಿಂದ ಅಗ್ರ ಶ್ರೇಯಾಂಕದ ಅಶ್ವತಿ ವರ್ಗೀಸ್‌ (ಬೆಂಗಳೂರು) ಅವರನ್ನು ಸುಲಭವಾಗಿ ಸೋಲಿಸಿದರು. ಇನ್ನೊಂದು ಸೆಮಿಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಲಕ್ಷ್ಯಾ ರಾಜೇಶ್‌ 21–16, 21–19 ರಿಂದ ಪ್ರೇರಣಾ ಶೇಟ್‌ ಅವರನ್ನು ಪರಾಭವಗೊಳಿಸಿದರು.

19 ವರ್ಷದೊಳಗಿನವರ ವಿಭಾಗದ ಸಿಂಗಲ್ಸ್‌ ಪ್ರಶಸ್ತಿಗಾಗಿ ಶೈನಾ ಅವರು ಅಗ್ರ ಶ್ರೇಯಾಂಕದ ದಿಯಾ ಭೀಮಯ್ಯ ಅವರನ್ನು ಎದುರಿಸಲಿದ್ದಾರೆ. ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ದಿಯಾ 26–24, 21–8 ರಿಂದ ಮೂರನೇ ಶ್ರೇಯಾಂಕದ ನವ್ಯಾ ಕೊಲ್ಲೂರಿ ಅವರನ್ನು ಹಿಮ್ಮೆಟ್ಟಿಸಿದರು. ಆರನೇ ಶ್ರೇಯಾಂಕದ ಶೈನಾ ನಾಲ್ಕರ ಘಟ್ಟದ ಪಂದ್ಯದಲ್ಲಿ 21–15, 21–13 ರಿಂದ ಪ್ರಾಪ್ತಿ ಕುಮಾರ್ ವಿರುದ್ಧ ನೇರ ಗೇಮ್‌ಗಳಲ್ಲಿ ಗೆಲುವು ಪಡೆದರು.

ADVERTISEMENT

ಫೈನಲ್‌ಗೆ ನಿಕೋಲಸ್‌:

ಎದುರಾಳಿಗಳ ವಿರುದ್ಧ ಮೂರು ಗೇಮ್‌ಗಳ ಹೋರಾಟದಲ್ಲಿ ಜಯಗಳಿಸಿದ ಮೂರನೇ ಶ್ರೇಯಾಂಕದ ನಿಕೋಲಸ್‌ ರಾಜ್‌ ಮತ್ತು ನಾಲ್ಕನೇ ಶ್ರೇಯಾಂಕದ ತುಷಾರ್ ಸುವೀರ್ ಅವರು ಪುರುಷರ ಸಿಂಗಲ್ಸ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಲಿದ್ದಾರೆ.

ನಿಕೋಲಸ್‌ 22–20, 15–21. 21–6 ರಿಂದ ಎರಡನೇ ಶ್ರೇಯಾಂಕದ ನರೇನ್‌ ಎಸ್‌.ಅಯ್ಯರ್ ಅವರನ್ನು ಸೋಲಿಸಿದರೆ, ತುಷಾರ್ ಸುವೀರ್‌ 18–21, 21–18, 21–13 ರಿಂದ ಅಗ್ರ ಶ್ರೇಯಾಂಕದ ಅಭಿನವ್‌ ಗರ್ಗ್‌ ಅವರನ್ನು ಮಣಿಸಿದರು.

ಆದರೆ 19 ವರ್ಷದೊಳಗಿನವರ ವಿಭಾಗದ ಸಿಂಗಲ್ಸ್‌ನಲ್ಲಿ ಅಗ್ರ ಶ್ರೇಯಾಂಕದ ಅಭಿನವ್‌  ಫೈನಲ್ ತಲುಪಿದ್ದು, ಪ್ರಶಸ್ತಿಗಾಗಿ ಎರಡನೇ ಶ್ರೇಯಾಂಕದ ಓಂ ಮಾಕಾ ಅವರನ್ನು ಎದುರಿಸಲಿದ್ದಾರೆ. ಸೆಮಿಫೈನಲ್ ಪಂದ್ಯಗಳಲ್ಲಿ ಅಭಿನವ್‌ 21–19, 21–13 ರಿಂದ ಏಳನೇ ಶ್ರೇಯಾಂಕದ ಹಾರ್ದಿಕ್‌ ದಿವ್ಯಾನ್ಶ್‌ ಅವರನ್ನು ಸೋಲಿಸಿದರೆ, ಮಾಕಾ 19–21, 21–14, 21–12 ರಿಂದ ಆರನೇ ಶ್ರೇಯಾಂಕದ ಪ್ರಣವ್ ಎಂ. ಅವರನ್ನು ಹಿಮ್ಮೆಟ್ಟಿಸಿದರು.

ಡಬಲ್ಸ್‌: ಅಗ್ರ ಶ್ರೇಯಾಂಕದ ಇಶಿಕಾ ಬರೂವ ಕಶ್ಯಪ್‌– ತನಿಕಾ ಮೋಹನ್ ಜೋಡಿ 19 ವರ್ಷದೊಳಗಿನ ಬಾಲಕಿಯರ ಡಬಲ್ಸ್‌ ಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಅಶ್ವತಿ ವರ್ಗೀಸ್‌– ಲಕ್ಷ್ಯಾ ರಾಜೇಶ್‌ ಜೋಡಿಯನ್ನು ಎದುರಿಸಲಿದೆ

19 ವರ್ಷದೊಳಗಿನ ಬಾಲಕರ ಡಬಲ್ಸ್‌ನಲ್ಲಿ ಅಗ್ರ ಶ್ರೆಯಾಂಕದ ಕ್ರಿಸ್‌ ಬ್ಯಾಪ್ಟಿಸ್ಟ್‌– ಸುಮಿತ್ ಎ.ಆರ್‌. ಜೋಡಿ ಫೈನಲ್‌ನಲ್ಲಿ ಮೂರನೇ ಶ್ರೇಯಾಂಕದ ಅಮಿತ್‌ ರಾಜ್ ನಟರಾಜ್‌– ಹಾರ್ದಿಕ್ ದಿವ್ಯಾನ್ಶ್‌ ಜೋಡಿಯನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.