ADVERTISEMENT

ಎರಡನೇ ಚಿನ್ನದ ಮೇಲೆ ಪಂಗಲ್‌ ಕಣ್ಣು

ಇಂದಿನಿಂದ ಸ್ಟ್ರಾಂಜಾ ಸ್ಮಾರಕ ಬಾಕ್ಸಿಂಗ್‌ ಟೂರ್ನಿ

ಪಿಟಿಐ
Published 13 ಫೆಬ್ರುವರಿ 2019, 19:35 IST
Last Updated 13 ಫೆಬ್ರುವರಿ 2019, 19:35 IST
ಅಮಿತ್ ಪಂಗಲ್‌
ಅಮಿತ್ ಪಂಗಲ್‌   

ನವದೆಹಲಿ : ಭಾರತದ ಅಮಿತ್‌ ಪಂಗಲ್‌, ಬಲ್ಗೇರಿಯಾದ ಸೋಫಿಯಾದಲ್ಲಿ ಗುರುವಾರದಿಂದ ನಡೆಯುವ ಸ್ಟ್ರಾಂಜಾ ಸ್ಮಾರಕ ಬಾಕ್ಸಿಂಗ್‌ ಟೂರ್ನಿಯಲ್ಲಿ ಸತತ ಎರಡನೇ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದಾರೆ.

49 ಕೆ.ಜಿ. ವಿಭಾಗದಲ್ಲಿ ಕಣಕ್ಕಿಳಿಯಲಿರುವ ಪಂಗಲ್‌, ಹಿಂದಿನ ವರ್ಷ ಚಿನ್ನದ ಸಾಧನೆ ಮಾಡಿದ್ದರು.

ಈ ಬಾರಿ ಭಾರತದ 19 ಮಂದಿ ಭಾಗವಹಿಸಲಿದ್ದಾರೆ. ಇದರಲ್ಲಿ 10 ಮಂದಿ ಮಹಿಳೆಯರು ಇದ್ದಾರೆ.

ADVERTISEMENT

ಅಮಿತ್‌ ಅವರು ಇಂಡೊನೇಷ್ಯಾದ ಜಕಾರ್ತದಲ್ಲಿ ನಡೆದಿದ್ದ ಏಷ್ಯನ್‌ ಕ್ರೀಡಾಕೂಟದಲ್ಲೂ ಚಿನ್ನದ ಸಾಧನೆ ಮಾಡಿದ್ದರು. ಅನಂತರ ಯಾವುದೇ ಟೂರ್ನಿಗಳಲ್ಲಿ ಪಾಲ್ಗೊಂಡಿರಲಿಲ್ಲ.

52 ಕೆ.ಜಿ. ವಿಭಾಗದಲ್ಲಿ ರಿಂಗ್‌ಗೆ ಇಳಿಯಲಿರುವ ಗೌರವ್‌ ಸೋಲಂಕಿ ಕೂಡಾ ಚಿನ್ನದ ಪದಕ ಜಯಿಸುವ ಗುರಿ ಹೊಂದಿದ್ದಾರೆ. ಅವರು ಹೋದ ವರ್ಷ ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದ್ದರು.

2017ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಸಾಧನೆ ಮಾಡಿದ್ದ ಗೌರವ್‌ ಬಿಧುರಿ (56 ಕೆ.ಜಿ) ಕೂಡಾ ಚಿನ್ನದತ್ತ ಚಿತ್ತ ನೆಟ್ಟಿದ್ದಾರೆ. ಅಂಕುಶ್‌ ದಹಿಯಾ (60 ಕೆ.ಜಿ), ಆಶಿಶ್‌ (64 ಕೆ.ಜಿ), ಮನದೀಪ್‌ ಜಾಂಗ್ರಾ (69 ಕೆ.ಜಿ), ಆಶಿಶ್‌ ಕುಮಾರ್‌ (75 ಕೆ.ಜಿ), ಹರ್ಷ ಲಾಕ್ರಾ (81 ಕೆ.ಜಿ) ಮತ್ತು ನಮನ್‌ ತನ್ವರ್‌ (91 ಕೆ.ಜಿ) ಅವರ ಮೇಲೂ ಭರವಸೆ ಇಡಬಹುದಾಗಿದೆ.

ಮಹಿಳಾ ವಿಭಾಗದಲ್ಲಿ ಸೋನಿಯಾ ಲಾಥರ್‌, ಭಾರತದ ಭರವಸೆಯಾಗಿದ್ದಾರೆ. 57 ಕೆ.ಜಿ. ವಿಭಾಗದಲ್ಲಿ ಆಡುವ ಅವರು ಪದಕ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿದ್ದ ಪಿಂಕಿ ರಾಣಿ (51 ಕೆ.ಜಿ), ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕದ ಸಾಧನೆ ಮಾಡಿದ್ದ ಲವ್ಲಿನಾ ಬೊರ್ಗೊಹೇನ್‌ (69 ಕೆ.ಜಿ), ಮಂಜು ರಾಣಿ (48 ಕೆ.ಜಿ), ನಿಖಾತ್‌ ಜರೀನಾ (51 ಕೆ.ಜಿ), ಮೀನಾ ಕುಮಾರಿ ದೇವಿ (54 ಕೆ.ಜಿ), ಪ್ವಿಲಾವೊ ಬಸುಮತರಿ (64 ಕೆ.ಜಿ), ನೀರಜಾ (60 ಕೆ.ಜಿ), ನೀತು (75 ಕೆ.ಜಿ) ಮತ್ತು ನೂಪುರ್‌ (75 ಕೆ.ಜಿ) ಕೂಡಾ ಪದಕದ ಭರವಸೆಯಲ್ಲಿದ್ದಾರೆ. ಅನುಭವಿ ಬಾಕ್ಸರ್‌ ಎಂ.ಸಿ. ಮೇರಿ ಕೋಮ್‌, ಈ ಟೂರ್ನಿಯಲ್ಲಿ ಭಾಗವಹಿಸುತ್ತಿಲ್ಲ. ಅವರು ಹಿಂದಿನ ಆವೃತ್ತಿಯಲ್ಲಿ (48 ಕೆ.ಜಿ) ಬೆಳ್ಳಿಯ ಪದಕ ಜಯಿಸಿದ್ದರು.

ಭಾರತ ತಂಡ ಹಿಂದಿನ ಆವೃತ್ತಿಯಲ್ಲಿ ಒಟ್ಟು 11 ಪದಕಗಳನ್ನು ಗೆದ್ದು ದಾಖಲೆ ನಿರ್ಮಿಸಿತ್ತು. ಈ ಬಾರಿಯೂ ತಂಡದ ಖಾತೆಗೆ ಹೆಚ್ಚಿನ ಪದಕಗಳು ಸೇರ್ಪಡೆಯಾಗುವ ನಿರೀಕ್ಷೆ ಇದೆ.

ಈ ಟೂರ್ನಿಯ ಬಳಿಕ ಭಾರತ ತಂಡದವರು ಫೆಬ್ರುವರಿ 22ರಿಂದ 28ರವರೆಗೆ ಇರಾನ್‌ನಲ್ಲಿ ನಿಗದಿಯಾಗಿರುವ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.