ADVERTISEMENT

ಬಾಕ್ಸಿಂಗ್‌: ಅಮಿತ್‌ಗೆ ‘ಬೈ’

ಪಿಟಿಐ
Published 14 ಫೆಬ್ರುವರಿ 2019, 16:57 IST
Last Updated 14 ಫೆಬ್ರುವರಿ 2019, 16:57 IST
ಗೌರವ್‌ ಬಿಧುರಿ
ಗೌರವ್‌ ಬಿಧುರಿ   

ನವದೆಹಲಿ : ಭಾರತದ ಅಮಿತ್‌ ಪಂಗಲ್‌ಗೆ ಬಲ್ಗೇರಿಯಾದ ಸೋಫಿಯಾದಲ್ಲಿ ಗುರುವಾರ ಆರಂಭವಾದ ಸ್ಟ್ರಾಂಜಾ ಸ್ಮಾರಕ ಬಾಕ್ಸಿಂಗ್‌ ಟೂರ್ನಿಯ ಮೊದಲ ಸುತ್ತಿನಲ್ಲಿ ‘ಬೈ’ ಲಭಿಸಿದೆ.

ಹೀಗಾಗಿ ಅಮಿತ್‌, ಒಂದೂ ಪಂದ್ಯ ಆಡದೆ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಭಾನುವಾರ ನಡೆಯುವ 49 ಕೆ.ಜಿ. ವಿಭಾಗದ ಎಂಟರ ಘಟ್ಟದ ಪೈಪೋಟಿಯಲ್ಲಿ ಅಮಿತ್‌, ಉಕ್ರೇನ್‌ನ ನಜಾರ್‌ ಕುರೊಟ್‌ಚಿನ್‌ ಎದುರು ಸೆಣಸಲಿದ್ದಾರೆ. ಹೋದ ವರ್ಷ ಚಿನ್ನದ ಪದಕ ಜಯಿಸಿದ್ದ ಭಾರತದ ಬಾಕ್ಸರ್‌, ಈ ಪಂದ್ಯದಲ್ಲಿ ಸುಲಭವಾಗಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.

ADVERTISEMENT

‌ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿರುವ ನಮನ್‌ ತನ್ವರ್‌ (91 ಕೆ.ಜಿ) ಅವರಿಗೂ ಮೊದಲ ಸುತ್ತಿನಲ್ಲಿ ‘ಬೈ’ ಸಿಕ್ಕಿದ್ದು, ಅವರು ಪ್ರೀ ಕ್ವಾರ್ಟರ್‌ಗೆ ಅರ್ಹತೆ ಗಳಿಸಿದ್ದಾರೆ. ಶನಿವಾರ ನಡೆಯುವ ಹಣಾಹಣಿಯಲ್ಲಿ ನಮನ್‌, ಪೋಲೆಂಡ್‌ನ ಮೈಕಲ್‌ ಸೋಜಿನ್‌ಸ್ಕಿ ವಿರುದ್ಧ ಆಡಲಿದ್ದಾರೆ.

ಮಹಿಳೆಯರ 54 ಕೆ.ಜಿ.ವಿಭಾಗದಲ್ಲಿ ಮೀನಾ ಕುಮಾರಿ ದೇವಿ ಕ್ವಾರ್ಟರ್‌ ಫೈನಲ್‌ಗೆ ನೇರ ಅರ್ಹತೆ ಗಳಿಸಿದ್ದಾರೆ. ನೀರಜಾ (60 ಕೆ.ಜಿ) ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆಯುವ ‍ಪುರುಷರ 56 ಕೆ.ಜಿ. ವಿಭಾಗದ ಮೊದಲ ಸುತ್ತಿನ ಪೈಪೋಟಿಯಲ್ಲಿ ಗೌರವ್‌ ಬಿಧುರಿ, ಬಲ್ಗೇರಿಯಾದ ಎಮಾನುಯೆಲ್‌ ಬೊಗೋವ್‌ ಎದುರು ಸೆಣಸಲಿದ್ದಾರೆ.

ಗೌರವ್‌ ಸೋಲಂಕಿಗೆ (52 ಕೆ.ಜಿ) ಮೊದಲ ಸುತ್ತಿನಲ್ಲಿ ಅಮೆರಿಕದ ಅಬ್ರಾಹಂ ಪೆರೇಜ್‌ ಸವಾಲು ಎದುರಾಗಲಿದೆ. ಅಂಕುಶ್‌ ದಹಿಯಾ (60 ಕೆ.ಜಿ) ಅವರು ಅಜರ್‌ಬೈಜಾನ್‌ನ ಸರ್‌ಖಾನ್‌ ಅಲಿಯೆವ್‌ ಎದುರು ಆಡುವ ಮೂಲಕ ಅಭಿಯಾನ ಆರಂಭಿಸಲಿದ್ದಾರೆ. ಮನದೀಪ್‌ ಜಾಂಗ್ರಾ, ಉಕ್ರೇನ್‌ನ ವಿಕ್ಟರ್‌ ಪೆಟ್ರೋವ್‌ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.

ಸೋನಿಯಾ ಲಾಥರ್‌ ಅವರು 57 ಕೆ.ಜಿ. ವಿಭಾಗದ ಮೊದಲ ಸುತ್ತಿನ ಹೋರಾಟದಲ್ಲಿ ಸರ್ಬಿಯಾದ ಜೆಲೆನಾ ಜೆಕಿವ್‌ ಸವಾಲು ಎದುರಿಸಲಿದ್ದಾರೆ. ಪಿಂಕಿ ರಾಣಿ (51 ಕೆ.ಜಿ), ಫಿಲಿಪ್ಪೀನ್ಸ್‌ನ ಇರಿಸ್‌ ಮ್ಯಾಗ್ನೊ ವಿರುದ್ಧ ಹೋರಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.