ADVERTISEMENT

ಭಾರತದ ಸವಾಲು ಅಂತ್ಯ

ಸುದೀರ್‌ಮನ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿ: ಚೀನಾ ತಂಡಕ್ಕೆ ಗೆಲುವು

​ಪ್ರಜಾವಾಣಿ ವಾರ್ತೆ
Published 22 ಮೇ 2019, 17:06 IST
Last Updated 22 ಮೇ 2019, 17:06 IST
ಭಾರತದ ಸೈನಾ ನೆಹ್ವಾಲ್‌ ಷಟಲ್‌ ಹಿಂತಿರುಗಿಸಲು ಪ್ರಯತ್ನಿಸಿದರು –ಎಎಫ್‌ಪಿ ಚಿತ್ರ
ಭಾರತದ ಸೈನಾ ನೆಹ್ವಾಲ್‌ ಷಟಲ್‌ ಹಿಂತಿರುಗಿಸಲು ಪ್ರಯತ್ನಿಸಿದರು –ಎಎಫ್‌ಪಿ ಚಿತ್ರ   

ನ್ಯಾನಿಂಗ್‌, ಚೀನಾ: ಸುದೀರ್‌ಮನ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಗೆಲ್ಲುವ ಭಾರತದ ಕನಸು ಬುಧವಾರ ಭಗ್ನಗೊಂಡಿದೆ.

ತನ್ನ ಅಂತಿಮ ಹಣಾಹಣಿಯಲ್ಲಿ ಹತ್ತು ಬಾರಿಯ ಚಾಂಪಿಯನ್ ಚೀನಾ ಎದುರು 0–5ಯಿಂದ ಸೋತ ಭಾರತ ತಂಡ ಗುಂಪು ಹಂತದಲ್ಲೇ ಹೊರಬಿದ್ದಿದೆ. ಮಂಗಳವಾರ ನಡೆದಿದ್ದ ಮೊದಲ ಪಂದ್ಯದಲ್ಲಿ ತಂಡವು 2–3ಯಿಂದ ಮಲೇಷ್ಯಾ ಎದುರು ಆಘಾತ ಕಂಡಿತ್ತು.

ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವ ನಿಟ್ಟಿನಲ್ಲಿ ಚೀನಾ ಎದುರು ಗೆಲ್ಲಲೇಬೇಕಾದ ಒತ್ತಡದೊಂದಿಗೆ ಕಣಕ್ಕಿಳಿದಿದ್ದ ಭಾರತವು ಸಂಪೂರ್ಣವಾಗಿ ಮಂಕಾಯಿತು.

ADVERTISEMENT

ಮೊದಲ ಹಣಾಹಣಿಯಲ್ಲೇ ಭಾರತಕ್ಕೆ ನಿರಾಸೆ ಕಾಡಿತು. ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಸ್ಪರ್ಧಿಸಿದ್ದ ಪ್ರಣವ್‌ ಜೆರಿ ಚೋಪ್ರಾ ಮತ್ತು ಎನ್‌.ಸಿಕ್ಕಿ ರೆಡ್ಡಿ 5–21, 11–21 ನೇರ ಗೇಮ್‌ಗಳಿಂದ ವಾಂಗ್‌ ಯಿಲ್ಯು ಮತ್ತು ಹುವಾಂಗ್‌ ಡೊಂಗ್‌ಪಿಂಗ್‌ ಎದುರು ಸೋತರು.

ಪ್ರಮುಖ ಆಟಗಾರ ಕಿದಂಬಿ ಶ್ರೀಕಾಂತ್‌ ಅಭ್ಯಾಸದ ವೇಳೆ ಗಾಯಗೊಂಡಿದ್ದರಿಂದ ಸಮೀರ್‌ ವರ್ಮಾ ಪುರುಷರ ಸಿಂಗಲ್ಸ್‌ನಲ್ಲಿ ಕಣಕ್ಕಿಳಿದಿದ್ದರು.

ಒಂದು ಗಂಟೆ 11 ನಿಮಿಷ ನಡೆದ ಪೈ‍ಪೋಟಿಯಲ್ಲಿ ಸಮೀರ್‌ 17–21, 20–22ರಲ್ಲಿ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿರುವ ಚೆನ್‌ ಲಾಂಗ್‌ ವಿರುದ್ಧ ಪರಾಭವಗೊಂಡರು. ಹೀಗಾಗಿ ಭಾರತ 0–2ಯಿಂದ ಹಿನ್ನಡೆ ಕಂಡಿತು.

ಮೊದಲ ಎರಡು ಹಣಾಹಣಿಗಳಲ್ಲಿ ಸೋತಿದ್ದ ಭಾರತವು ಪುರುಷರ ಡಬಲ್ಸ್‌ನಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿತ್ತು.

ಸಾತ್ವಿಕ್‌ ಸಾಯಿರಾಜ್‌ ರಂಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ನಿರೀಕ್ಷೆ ಹುಸಿಗೊಳಿಸಿದರು. ಭಾರತದ ಜೋಡಿಯು 21–18, 15–21, 17–21ರಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ ಏಳನೇ ಸ್ಥಾನದಲ್ಲಿರುವ ಹಾನ್ ಚೆಂಗ್‌ಕಾಯ್‌ ಮತ್ತು ಜೊವು ಹಾವೊಡೊಂಗ್‌ ಎದುರು ಮಣಿಯಿತು. ಈ ಸೋಲಿನಿಂದಾಗಿ ಭಾರತದ ಎಂಟರ ಘಟ್ಟದ ಕನಸು ಕಮರಿತು.

ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಸ್ಪರ್ಧಿಸಿದ್ದ ಸೈನಾ ನೆಹ್ವಾಲ್‌ ಕೂಡಾ ಪರಿಣಾಮಕಾರಿ ಸಾಮರ್ಥ್ಯ ತೋರಲು ವಿಫಲರಾದರು. ಆಲ್‌ ಇಂಗ್ಲೆಂಡ್‌ ಓಪನ್‌ನಲ್ಲಿ ಪ್ರಶಸ್ತಿ ಜಯಿಸಿದ್ದ ಚೆನ್‌ ಯೂಫಿ 21–12, 21–17 ನೇರ ಗೇಮ್‌ಗಳಿಂದ ಭಾರತದ ಆಟಗಾರ್ತಿಯ ಎದುರು ಜಯಿಸಿ ಚೀನಾ ತಂಡಕ್ಕೆ 4–0 ಮುನ್ನಡೆ ತಂದುಕೊಟ್ಟರು.

ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಸಾಧನೆ ಮಾಡಿರುವ ಸೈನಾ, ಕೇವಲ 33 ನಿಮಿಷಗಳಲ್ಲಿ ಸೋಲೊಪ್ಪಿಕೊಂಡರು.

ಮಹಿಳಾ ಡಬಲ್ಸ್‌ ವಿಭಾಗದಲ್ಲಿ ಭಾರತದ ಸವಾಲು ಎತ್ತಿ ಹಿಡಿದಿದ್ದ ಅಶ್ವಿನಿ ಪೊನ್ನಪ್ಪ ಮತ್ತು ಸಿಕ್ಕಿ ರೆಡ್ಡಿ 12–21, 15–21ರಲ್ಲಿ ಚೆನ್‌ ಕ್ವಿಂಗ್‌ಚೆನ್‌ ಮತ್ತು ಜಿಯಾ ಯಿಫಾನ್‌ ಎದುರು ಶರಣಾದರು.ಭಾರತ ತಂಡವು 2011 ಮತ್ತು 2017ರಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.