ಮ್ಯೂನಿಕ್: ಭಾರತದ ಶೂಟಿಂಗ್ ಕ್ರೀಡೆಯ ನವತಾರೆ ಸುರುಚಿ ಸಿಂಗ್ ಅವರು ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್‌ನಲ್ಲಿ ಚಿನ್ನದ ಪದಕ ಜಯಿಸಿದರು.
ಶುಕ್ರವಾರ ಇಲ್ಲಿ ನಡೆದ ಮಹಿಳೆಯರ ವಿಭಾಗದ 10 ಮೀಟರ್ಸ್ ಪಿಸ್ತೂಲ್ ಫೈನಲ್‌ನಲ್ಲಿ ಅವರು ಚಿನ್ನಕ್ಕೆ ಗುರಿಯಿಟ್ಟರು.
19 ವರ್ಷದ ಸುರುಚಿ ಅವರು ಸ್ಪರ್ಧಿಸುತ್ತಿರುವ ಮೂರನೇ ವಿಶ್ವಕಪ್ ಇದಾಗಿದೆ. ವೈಯಕ್ತಿಕ ವಿಭಾಗದಲ್ಲಿ ಹ್ಯಾಟ್ರಿಕ್ ಚಿನ್ನದ ಪದಕ ಸಾಧನೆಯನ್ನೂ ಅವರು ಮಾಡಿದರು. ಹೋದ ಏಪ್ರಿಲ್‌ನಲ್ಲಿ ಬ್ಯೂನಸ್ ಏರಿಸ್ ಮತ್ತು ಲೀಮಾನಲ್ಲಿ ನಡೆದಿದ್ದ ಸ್ಪರ್ಧೆಗಳಲ್ಲಿಯೂ ಅವರು ಬಂಗಾರ ಬೇಟೆಯಾಡಿದ್ದರು.
ಇಲ್ಲಿ ನಡೆದ ಫೈನಲ್‌ನಲ್ಲಿ ಅವರು 241.9 ಅಂಕಗಳನ್ನು ಗಳಿಸಿದರು. ಈ ಹಾದಿಯಲ್ಲಿ ಸುರುಚಿ ಅವರು ಫ್ರಾನ್ಸ್‌ನ ಕ್ಯಾಮಿಲಿ ಜೆದ್ರಾಜೆಜೆವಾಸ್ಕಿ (241.7) ಮತ್ತು ಚೀನಾದ ಕಿಂಶನ್ ಯಾವೊ (221.7) ಅವರನ್ನು ಹಿಂದಿಕ್ಕಿದರು. ಕ್ಯಾಮಿಲಿ ಬೆಳ್ಳಿ ಮತ್ತು ಯಾವೊ ಕಂಚು ಗೆದ್ದರು.
ಫ್ರಾನ್ಸ್ ಸ್ಪರ್ಧಿಯಿಂದ ನಿಕಟ ಪೈಪೋಟಿ ಎದುರಿಸಿದ ಸುರುಚಿ ಅವರು ತಮ್ಮ ಕೊನೆಯ ಅವಕಾಶದಲ್ಲಿ ಗುರಿ ಕಟ್ಟಿದಾಗ 9.5 ಅಂಕಗಳನ್ನು ಬುಟ್ಟಿಗೆ ಹಾಕಿಕೊಂಡರು.
ಅರ್ಹತಾ ಘಟ್ಟದಲ್ಲಿ ಸುರುಚಿ ಅವರು 588 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದರು. ಈ ಹಂತದಲ್ಲಿ ಭಾರತದ ಡಬಲ್ ಒಲಿಂಪಿಕ್ ಪದಕವಿಜೇತ ಶೂಟರ್ ಮನು ಭಾಕರ್ ಅವರು 574 ಅಂಕಗಳೊಂದಿಗೆ 25ನೇ ಸ್ಥಾನ ಪಡೆದರು.
ಫೈನಲ್‌ನಲ್ಲಿ ಕಾಮೆಂಟ್ರಿ ಮಾಡಿದ ಭಾಕರ್ ಅವರು ಯುವ ಶೂಟಿಂಗ್ ಪಟು ಸುರುಚಿಯವರ ಚಿನ್ನದ ಸಾಧನೆಯನ್ನು ಶ್ಲಾಘಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.