ADVERTISEMENT

ಎನ್‌ಡಿಟಿಎಲ್‌ ಮೇಲಿನ ಅಮಾನತು ವಾಪಸ್

ಪಿಟಿಐ
Published 23 ಡಿಸೆಂಬರ್ 2021, 13:35 IST
Last Updated 23 ಡಿಸೆಂಬರ್ 2021, 13:35 IST
ಡೋಪ್‌
ಡೋಪ್‌   

ನವದೆಹಲಿ: ಉದ್ದೀಪನ ಮದ್ದು ಪರೀಕ್ಷೆಯ ರಾಷ್ಟ್ರೀಯ ಪ್ರಯೋಗಾಲಯದ (ಎನ್‌ಡಿಟಿಎಲ್‌) ಮೇಲೆ ವಿಧಿಸಿದ್ದ ಅಮಾನತನ್ನು ವಿಶ್ವ ಉದ್ದೀಪನ ಮದ್ದು ತಡೆ ಘಟಕ (ವಾಡಾ) ತೆರವುಗೊಳಿಸಿದೆ.

ಜಾಗತಿಕ ಗುಣಮಟ್ಟ ಕಾಪಾಡಿಕೊಳ್ಳಲು ವಿಫಲವಾಗಿದೆ ಎಂದು 2019ರಲ್ಲಿ ಎನ್‌ಡಿಟಿಎಲ್‌ ಮಾನ್ಯತೆಯನ್ನು ಅಮಾನತಿನಲ್ಲಿಡಲಾಗಿತ್ತು. ಇದೀಗ ಪ್ರಯೋಗಾಲಯವು ಪರೀಕ್ಷೆಗೆ ಮುಕ್ತವಾಗಿದೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಗುರುವಾರ ಟ್ವೀಟ್ ಮಾಡಿದ್ದಾರೆ.

‘ಜಾಗತಿಕ ಮಾನದಂಡಗಳನ್ನು ಪಾಲಿಸಿಕೊಂಡು ಪ್ರಯೋಗಾಲಯದ ಕೊರತೆಗಳನ್ನು ನೀಗಿಸುವುದಕ್ಕಾಗಿ ಕೇಂದ್ರ ಸರ್ಕಾರ ಸತತ ಪ್ರಯತ್ನ ನಡೆಸಿತ್ತು. ಮತ್ತೆ ಮಾನ್ಯತೆ ಗಳಿಸಲು ಸಾಧ್ಯವಾದದ್ದರಿಂದ ಕ್ರೀಡಾಕ್ಷೇತ್ರದಲ್ಲಿ ಉನ್ನತ ಗುಣಮಟ್ಟ ಪಾಲಿಸಲು ಸಾಧ್ಯವಾಗಲಿದೆ‘ ಎಂದು ಠಾಕೂರ್ ಹೇಳಿದ್ದಾರೆ.

ADVERTISEMENT

ಉದ್ದೀಪನ ಮದ್ದು ಸೇವನೆ ನಿಯಮಗಳ ಉಲ್ಲಂಘನೆ ಮಾಡಿದ ಕ್ರೀಡಾಪಟುಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ರಷ್ಯಾ ಇದೆ.

ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಮಸೂದೆಯನ್ನು ಸಂಸತ್ತಿನಲ್ಲಿ ಕಳೆದ ವಾರ ಮಂಡಿಸಲಾಗಿದೆ. ಕ್ರೀಡಾ ಕ್ಷೇತ್ರದ ಪ್ರಬಲ ಶಕ್ತಿಯಾಗುವ ನಿಟ್ಟಿನಲ್ಲಿ ಇದು ದೇಶದ ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ’ ಎಂದು ಠಾಕೂರ್ ತಿಳಿಸಿದ್ದಾರೆ. ಉದ್ದೀಪನ ಮದ್ದು ಸೇವನೆ ನಿಯಮ ಉಲ್ಲಂಘಿಸಿದವರ ಮೇಲೆ ಕ್ರಮ ಕೈಗೊಳ್ಳಲು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕಕ್ಕೆ (ನಾಡಾ) ಸಂಸತ್ತು ಅಧಿಕಾರ ನೀಡಿದೆ.

ವಾಡಾದ ಅಮಾನತಿನಿಂದಾಗಿ ಮೂತ್ರ ಮತ್ತು ರಕ್ತದ ಮಾದರಿಗಳ ಪರೀಕ್ಷೆ ಸೇರಿದಂತೆ ಉದ್ದೀಪನ ಮದ್ದು ತಡೆಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗೂ ನಿರ್ಬಂಧ ಉಂಟಾಗಿತ್ತು. 2019ರ ಆಗಸ್ಟ್ ತಿಂಗಳಲ್ಲಿ ಮೊದಲ ಬಾರಿ ಅಮಾನತು ಮಾಡಿದ್ದ ವಾಡಾ ತಪಾಸಣೆಯ ನಂತರ ಮತ್ತೆ ಅಮಾನತು ಮುಂದುವರಿಸಿತ್ತು. ಹೀಗಾಗಿ ಟೋಕಿಯೊ ಒಲಿಂಪಿಕ್ಸ್ ಸಂದರ್ಭದಲ್ಲಿ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.