ADVERTISEMENT

ಏಷ್ಯನ್‌ ವಯೋವರ್ಗ ಈಜು ಚಾಂಪಿಯನ್‌ಷಿಪ್‌: ಭಾರತಕ್ಕೆ ಸಾಧನೆ ಸುಧಾರಿಸುವ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2019, 19:54 IST
Last Updated 23 ಸೆಪ್ಟೆಂಬರ್ 2019, 19:54 IST
ವಿವಿಧ ರಾಷ್ಟ್ರಗಳ ಈಜುಸ್ಪರ್ಧಿಗಳು, ಚಾಂಪಿಯನ್‌ಷಿಪ್‌ನ ಮುನ್ನಾದಿನವಾದ ಸೋಮವಾರ ಬೆಂಗಳೂರು ಜಾಲ ಹೋಬಳಿಯ ಪಡುಕೋಣೆ–ದ್ರಾವಿಡ್‌ ಕ್ರೀಡಾ ಶ್ರೇಷ್ಠತಾ ಕೇಂದ್ರದಲ್ಲಿ ಅಭ್ಯಾಸದಲ್ಲಿ ತೊಡಗಿದ್ದರು.– ಪ್ರಜಾವಾಣಿ ಚಿತ್ರ/ ಆರ್‌. ಶ್ರೀಕಂಠ ಶರ್ಮಾ
ವಿವಿಧ ರಾಷ್ಟ್ರಗಳ ಈಜುಸ್ಪರ್ಧಿಗಳು, ಚಾಂಪಿಯನ್‌ಷಿಪ್‌ನ ಮುನ್ನಾದಿನವಾದ ಸೋಮವಾರ ಬೆಂಗಳೂರು ಜಾಲ ಹೋಬಳಿಯ ಪಡುಕೋಣೆ–ದ್ರಾವಿಡ್‌ ಕ್ರೀಡಾ ಶ್ರೇಷ್ಠತಾ ಕೇಂದ್ರದಲ್ಲಿ ಅಭ್ಯಾಸದಲ್ಲಿ ತೊಡಗಿದ್ದರು.– ಪ್ರಜಾವಾಣಿ ಚಿತ್ರ/ ಆರ್‌. ಶ್ರೀಕಂಠ ಶರ್ಮಾ   

ಬೆಂಗಳೂರು: ಜಿಟಿಜಿಟಿ ಮಳೆಯ ನಡುವೆಯೇ ಸುಸಜ್ಜಿತ ಪಡುಕೋಣೆ– ದ್ರಾವಿಡ್‌ ಕ್ರೀಡಾ ಶ್ರೇಷ್ಠತಾ ಕೇಂದ್ರದ ಈಜುಕೊಳದಲ್ಲಿ ಸೋಮವಾರವಿವಿಧ ದೇಶಗಳ ಈಜುಪಟುಗಳು ಅಭ್ಯಾಸ ನಡೆಸಿದರು. ಮಂಗಳವಾರ ಏಷ್ಯನ್‌ ವಯೋವರ್ಗ 10ನೇ ಈಜು ಚಾಂಪಿಯನ್‌ಷಿಪ್ ಇಲ್ಲಿ ಆರಂಭವಾಗಲಿದ್ದು, 28 ರಾಷ್ಟ್ರಗಳ ಈಜುಪಟುಗಳು ಭಾಗವಹಿಸಲಿದ್ದಾರೆ.

ಈಜು ಸ್ಪರ್ಧೆ 24 ರಿಂದ 27ರವರೆಗೆ ನಡೆಯಲಿದೆ.ಕೆಂಗೇರಿಯ ಭಾರತ ಕ್ರೀಡಾ ಪ್ರಾಧಿಕಾರದ ಕೇಂದ್ರದಲ್ಲಿ 24 ರಿಂದ 30ರವರೆಗೆ ವಾಟರ್‌ಪೊಲೊ ಸ್ಪರ್ಧೆಗಳು ಮತ್ತು 29 ರಿಂದ ಅಕ್ಟೋಬರ್‌ 2ರವರೆಗೆ ಡೈವಿಂಗ್‌ ಸ್ಪರ್ಧೆಗಳು ನಡೆಯಲಿವೆ. ಹಲಸೂರಿನ ಕೆನ್ಸಿಂಗ್‌ಟನ್‌ ಈಜುಕೊಳದಲ್ಲಿ ಕಲಾತ್ಮಕ ಈಜು (ಆರ್ಟಿಸ್ಟಿಕ್‌ ಸ್ವಿಮಿಂಗ್‌) ಸ್ಪರ್ಧೆಗಳು ನಡೆಯಲಿವೆ.

ಒಟ್ಟಾರೆ 600 ಮಂದಿ ಈಜು ಸ್ಪರ್ಧಿಗಳು, 200 ಮಂದಿ ವಾಟರ್‌ಪೊಲೊ ಸ್ಪರ್ಧಿಗಳು, 200 ಮಂದಿ ಡೈವಿಂಗ್ ಸ್ಪರ್ಧಿಗಳು ಮತ್ತು 150 ಮಂದಿ ಕಲಾತ್ಮಕ ಈಜುಸ್ಪರ್ಧಿಗಳು ಕೊಳಕ್ಕಿಳಿಯಲಿದ್ದಾರೆ ಎಂದು ಸಂಘಟನಾ ಸಮಿತಿ ಅಧ್ಯಕ್ಷ ಗೋಪಾಲ್‌ ಬಿ.ಹೊಸೂರು ವಿವರ ನೀಡಿದರು. ಭಾರತ ತಂಡದಿಂದ ವಿವಿಧ ವಯೋವರ್ಗಗಳಲ್ಲಿ ಒಟ್ಟು 86 ಮಂದಿ ಕಣಕ್ಕಿಳಿಯಲಿದ್ದಾರೆ.

ADVERTISEMENT

ಜಮ್ಮು– ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ತೆಗೆದುಹಾಕಿದ ಸಂಬಂಧ ರಾಯಭಾರ ಸಂಬಂಧ ಹದಗೆಟ್ಟಿರುವ ಕಾರಣ ಪಾಕಿಸ್ತಾನ ಸ್ಪರ್ಧಿಗಳು ಭಾಗವಹಿಸುತ್ತಿಲ್ಲ. ಇರಾಕ್‌ ಕೂಡ ತಂಡವನ್ನು ಕಳುಹಿಸಿಲ್ಲ. ಉಳಿದ ತಂಡಗಳ ಸ್ಪರ್ಧಿಗಳು ಬಂದಿದ್ದಾರೆ.

‘ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ಸ್‌ ಅರ್ಹತೆಗೆ ಈ ಚಾಂಪಿಯನ್‌ಷಿಪ್ ಕೂಡ ಪರಿಗಣಿಸುತ್ತಿರುವುದರಿಂದ ಹೆಚ್ಚಿನ ಮಹತ್ವ ಪಡೆದಿದೆ. ಭಾರತದ ಸ್ಪರ್ಧಿಗಳು 2017ರ ತಾಷ್ಕೆಂಟ್‌ (‌ಉಜ್ಬೇಕಿಸ್ತಾನ)ನಲ್ಲಿ ತೋರಿದ್ದಕ್ಕಿಂತ ಹೆಚ್ಚಿನ ಸಾಧನೆಯನ್ನು ಇಲ್ಲಿ ತೋರಲಿದ್ದಾರೆ’ ಎಂದು ಗೋಪಾಲ್‌ ಹೊಸೂರು ವಿಶ್ವಾಸ ವ್ಯಕ್ತಪಡಿಸಿದರು. ತಾಷ್ಕೆಂಟ್‌ನಲ್ಲಿ ಭಾರತ ಈಜಿನಲ್ಲಿ ಐದು ಚಿನ್ನ, 13 ಬೆಳ್ಳಿ ಮತ್ತು 22 ಕಂಚಿನ ಪದಕಗಳನ್ನು ಗೆದ್ದುಕೊಂಡಿತ್ತು.

ಡೈವಿಂಗ್‌ನಲ್ಲಿ ಮೂರು ಚಿನ್ನ, ಎರಡು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳು ಭಾರತದ ಸ್ಪರ್ಧಿಗಳ ಪಾಲಾಗಿದ್ದವು.12 ರಿಂದ 14 ವರ್ಷ, 15 ರಿಂದ 17 ವರ್ಷ ಹಾಗೂ ಓಪನ್‌ (18 ವರ್ಷ ಮೇಲ್ಪಟ್ಟವರ) ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. 800 ಮೀ. ಮತ್ತು 1,500 ಮೀ. ದೂರದ ಸ್ಪರ್ಧೆಗಳಿಗೆ ಫೈನಲ್‌ ಮೊದಲು ಟೈಮ್‌ ಟ್ರಯಲ್ಸ್‌ ಇರುತ್ತದೆ. ಉಳಿದವುಗಳಿಗೆ ಹೀಟ್ಸ್ ಮತ್ತು ಫೈನಲ್‌ ನಡೆಯಲಿದೆ ಎಂದರು.

ಎರಡನೇ ಬಾರಿ: ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಚಾಂಪಿಯನ್‌ಷಿಪ್‌ ಈ ಹಿಂದೆ 1999ರಲ್ಲಿ ದೆಹಲಿಯಲ್ಲಿ ನಡೆದಿತ್ತು. ಈಗ ಎರಡನೇ ಬಾರಿ ಭಾರತ ಆತಿಥ್ಯ ವಹಿಸುತ್ತಿದೆ. ಹೈದರಾಬಾದ್‌ನಲ್ಲಿ ನಿಗದಿಯಾಗಿತ್ತು.

ಆದರೆ ಕೆಲವು ಕಾರಣಗಳಿಂದ ಬೆಂಗಳೂರಿಗೆ ಆತಿಥ್ಯ ವಹಿಸಲಾಯಿತು ಎಂದು ಎಸ್‌ಎಫ್‌ಐ ಆಜೀವ ಅಧ್ಯಕ್ಷ ದಿಗಂಬರ ಕಾಮತ್‌ ಹೇಳಿದರು. ಅಥ್ಲೆಟಿಕ್ಸ್ ನಂತರ ಒಲಿಂಪಿಕ್ಸ್‌ನಲ್ಲಿ ಹೆಚ್ಚು ಪದಕಗಳಿರುವುದು ಈಜಿನಲ್ಲಿ. ಹೀಗಾಗಿ ಸ್ಪರ್ಧಿಗಳು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದರು.

ಬೆಳಿಗ್ಗೆ 9 ಗಂಟೆಯಿಂದ 12 ಗಂಟೆಯವರೆಗೆ ಈಜು ಸ್ಪರ್ಧೆಗಳ ಹೀಟ್ಸ್‌ ನಡೆಯಲಿದೆ. ಸಂಜೆ 5 ಗಂಟೆಯಿಂದ 8 ಗಂಟೆಯವರೆಗೆ ಫೈನಲ್ಸ್‌ ನಡೆಯಲಿದೆ ಎಂದು ಸಂಘಟನಾ ಕಾರ್ಯದರ್ಶಿ ಸತೀಶ್‌ ಮಾಹಿತಿ ನೀಡಿದರು.

ಖಾಡೆ, ಸಾಜನ್‌, ಶ್ರೀಹರಿಗೆ ಒಲಿಂಪಿಕ್‌ ಅರ್ಹತೆಯ ಗುರಿ

ಒಲಿಂಪಿಯನ್‌ ಈಜುಪಟು ವೀರಧವಳ ಖಾಡೆ ಅವರು ಮೂರು ವಿಭಾಗಗಳಲ್ಲಿ (50 ಮತ್ತು 100 ಮೀ. ಫ್ರೀಸ್ಟೈಲ್‌, 50 ಮೀ. ಬಟರ್‌ಫ್ಲೈ) ಪಾಲ್ಗೊಳ್ಳುತ್ತಿದ್ದಾರೆ. 50 ಮೀ. ಫ್ರೀಸ್ಟೈಲ್‌ನಲ್ಲಿ ತಮ್ಮ ವೈಯಕ್ತಿಕ ಸಾಧನೆಯನ್ನು ಸುಧಾರಿಸುವ ವಿಶ್ವಾಸದಲ್ಲಿದ್ದಾರೆ.

ಈ ಮೂರೂ ವಿಭಾಗಗಳಲ್ಲಿ ರಾಷ್ಟ್ರೀಯ ದಾಖಲೆ 28 ವರ್ಷದ ಖಾಡೆ ಹೆಸರಿನಲ್ಲಿದೆ. ‘50 ಮೀ. ಫ್ರೀಸ್ಟೈಲ್‌ನಲ್ಲಿ ನನ್ನ ವೈಯಕ್ತಿಕ ಸಾಧನೆಸುಧಾರಿಸುವ ಗುರಿಹೊಂದಿದ್ದೇನೆ’ ಎಂದು ಹೇಳಿದರು. ಈ ತಿಂಗಳ ಆರಂಭದಲ್ಲಿ ಭೋಪಾಲ್‌ನಲ್ಲಿ ನಡೆದ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಖಾಡೆ 22.44 ಸೆಕೆಂಡುಗಳಲ್ಲಿ ಗುರಿತಲುಪಿದ್ದರು. ಅಂದು ಬೆಳಿಗ್ಗೆ ಹೀಟ್ಸ್‌ನಲ್ಲಿ 22.70 ಸೆ.ಗಳ ದಾಖಲೆಯನ್ನು ಸುಧಾರಿಸಿದ್ದರು.ಅವರು 0.4 ಸೆಕೆಂಡು ಸುಧಾರಿಸಿದರೆ ಒಲಿಂಪಿಕ್ಸ್‌ಗೆ ಅರ್ಹತಾ ಮಟ್ಟ ತಲುಪಬಹುದು.ಕಳೆದ ತಿಂಗಳು ಕೊಲ್ಲಾಪುರದಲ್ಲಿ ಮಹಾಪ್ರವಾಹದ ವೇಳೆ ಶವ್‌ಪುರಿಯಲ್ಲಿ ಅವರ ಮನೆಗೆ ನೀರು ನುಗ್ಗಿತ್ತು. ‘ಸೇನಾಪಡೆ ಸಿಬ್ಬಂದಿ ತಂದೆ– ತಾಯಿಯನ್ನು ರಕ್ಷಿಸಿದ್ದರು’ ಎಂದು ಅವರು ಹೇಳಿದರು.

ಬ್ಯಾಕ್‌ಸ್ಟ್ರೋಕ್‌ ಪರಿಣತ ಶ್ರೀಹರಿ ನಟರಾಜ್‌, 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಒಲಿಂಪಿಕ್‌ ಅರ್ಹತಾ ಮಟ್ಟದ ಸನಿಹದಲ್ಲಿದ್ದಾರೆ. ಆವರು ಕಳೆದ ತಿಂಗಳ ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ‘ಬಿ’ ಅರ್ಹತಾ ಮಟ್ಟ ತಲುಪಿದ್ದರು.

ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಸಾಜನ್‌ ಪ್ರಕಾಶ್‌ 200 ಮೀ. ಬಟರ್‌ಫ್ಲೈನಲ್ಲಿ ಇಂಥಹದ್ದೇ ನಿರೀಕ್ಷೆಯಲ್ಲಿದ್ದಾರೆ. ಈ ಮೂವರ ಜೊತೆ ಭಾರತದ ಇತರ ಈಜುಪಟುಗಳೂ ಉತ್ತಮ ಸಾಧನೆ ತೋರಲಿದ್ದಾರೆ ಎಂದು ತಂಡದ ಕೋಚ್‌ ಪ್ರದೀಪ್‌ ಕುಮಾರ್‌ ಆಶಾವಾದ ವ್ಯಕ್ತಪಡಿಸಿದರು. ‘ಮಳೆಯಂಥ ಪ್ರತಿಕೂಲ ಹವಾಮಾನ ಇಲ್ಲದಿದ್ದರೆ ಈಜುಪಟುಗಳಿಂದ ಹೆಚ್ಚಿನ ಸಾಧನೆ
ನಿರೀಕ್ಷಿಸಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.