ADVERTISEMENT

ಭರವಸೆಯ ನಿಹಾರಿಕಾ

ಪೃಥ್ವಿರಾಜ್ ಎಂ ಎಚ್
Published 18 ನವೆಂಬರ್ 2018, 19:48 IST
Last Updated 18 ನವೆಂಬರ್ 2018, 19:48 IST
ಎ. ನಿಹಾರಿಕಾ
ಎ. ನಿಹಾರಿಕಾ   

ಯುಕೆಜಿಯಲ್ಲಿ ಓದುವ ಮಗು ಹೆಚ್ಚೆಂದರೆ ಒಂದೊ, ಎರಡೊ ಪುಸ್ತಕಗಳನ್ನು ಹೊತ್ತುಕೊಂಡು ಶಾಲೆಗೆ ಹೋಗಿ ಬಂದರೆ ಹೆಚ್ಚು. ಆದರೆ ಟೇಬಲ್‌ ಟೆನಿಸ್‌ ಜೂನಿಯರ್‌ ವಿಭಾಗದ ರಾಜ್ಯ ಮಟ್ಟದ ಅಗ್ರ ಶ್ರೇಯಾಂಕಿತ ಆಟಗಾರ್ತಿ ನಿಹಾರಿಕಾ, ವರ್ಣಮಾಲೆ ಕಲಿಯುವ ವಯಸ್ಸಿನಲ್ಲೇ ಟೇಬಲ್‌ಟೆನಿಸ್ ಬ್ಯಾಟ್ ಹಿಡಿದಳು.

ಚಿಕ್ಕಂದಿನಿಂದಲೇ ಈ ಆಟದ ಕಡೆಗೆ ಒಲವು ಬೆಳೆಸಿಕೊಂಡ ಈ ಮಗು, ಈವರೆಗೆ 14ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾಳೆ.

ಈಚೆಗಷ್ಟೆ ಹೊಸಪೇಟೆಯಲ್ಲಿ ನಡೆದ ಸಿ.ವಿ.ಎಲ್. ಶಾಸ್ತ್ರಿ ಸ್ಮರಣಾರ್ಥ ರಾಜ್ಯಮಟ್ಟದ ಟೇಬಲ್ ಟೆನಿಸ್‌ ಚಾಂಪಿಯನ್‌ಷಿಪ್‌ನ ಕೆಡೆಟ್‌ ವಿಭಾಗದಲ್ಲಿ ಪ್ರಶಸ್ತಿ ಗೆದ್ದು ಭರವಸೆಯ ಆಟಗಾರ್ತಿಯಾಗಿ ಗಮನ ಸೆಳೆದಿದ್ದಾಳೆ.

ADVERTISEMENT

‘ನನ್ನ ದೃಷ್ಟಿಯಲ್ಲಿ ಟೇಬಲ್‌ ಟೆನಿಸ್‌ ಎಂದರೆ ಏಕಾಗ್ರತೆಗೆ ಮತ್ತೊಂದು ಹೆಸರು’ ಎಂದು ಹೇಳುವ ಈ ಬಾಲಕಿ, ಈ ಕ್ರೀಡೆಯಲ್ಲಿ ಸಾಧನೆ ಮಾಡಬೇಕಿದ್ದರೆ, ಗಮನಕೊಟ್ಟು ಆಡುವುದರ ಜತೆಗೆ ಚುರುಕುತನವೂ ಇರಬೇಕು’ ಎಂಬುದು ನಿಹಾರಿಕಾ ಅನುಭವದ ಮಾತು.

‘ಈ ಆಟದ ಮೇಲೆ ನನಗೆ ಆಸಕ್ತಿ ಮೂಡಲು ಕಾರಣ ನನ್ನ ಅಣ್ಣ. ಅವನು ರ‍್ಯಾಕೆಟ್‌ ಹಿಡಿದು ಆಡಲು ಹೋಗುತ್ತಿದ್ದ, ನನಗೂ ಆಡಬೇಕು ಎನಿಸಿ ಅವನನ್ನೇ ಹಿಂಬಾಲಿಸಿದೆ. ಈಗ ಇದರಲ್ಲೇ ಮಹತ್ತರ ಸಾಧನೆ ಮಾಡಿ ರಾಷ್ಟ್ರವನ್ನು ಪ್ರತಿನಿಧಿಸಬೇಕು ಎಂಬ ಆಸೆ ಇದೆ’ ಎಂದು ಹೇಳಿದಳು.

ಬೆಂಗಳೂರಿನ ಜೆ.ಅನಂತ ಕುಮಾರ್‌ ಮತ್ತು ರಶ್ಮಿ ಅವರ ಪುತ್ರಿ ನಿಹಾರಿಕಾ. ಮಲ್ಲೇಶ್ವರಂನಲ್ಲಿರುವ ಬಿ.ಪಿ. ಇಂಡಿಯನ್‌ ಪಬ್ಲಿಕ್ ಸ್ಕೂಲ್‌ನಲ್ಲಿ ಆರನೇ ತರಗತಿಯಲ್ಲಿ ಓದುತ್ತಿರುವ ಈಕೆ, ಎಂ.ಎಸ್‌.ಟಿ.ಟಿ.ಎ. ಕ್ಲಬ್‌ ಪ್ರತಿನಿಧಿಸಿ ಈ ವರೆಗೆ 30ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾಳೆ.

‘ಆಟ ಎಂದ ಮೇಲೆ ಫಿಟ್‌ನೆಸ್‌ ಮುಖ್ಯ. ಆದ್ದರಿಂದ ಬೆಳಿಗ್ಗೆ, ಸಂಜೆ ವ್ಯಾಯಾಮ ತಪ್ಪಿಸುವುದಿಲ್ಲ. ಆಟದಲ್ಲಿ ಛಾಪು ಮೂಡಿಸಬೇಕೆಂದರೆ, ತರಬೇತಿ ಕಡೆಗೆ ಹೆಚ್ಚು ಗಮನ ಕೊಡ ಬೇಕು, ಹೀಗಾಗಿ ನಿತ್ಯ ಐದು ತಾಸು ಅಭ್ಯಾಸಕ್ಕಾಗಿಯೇ ಮೀಸಲಿಡುತ್ತೇನೆ’ ಎಂದಳು, ನಿಹಾರಿಕಾ.

‘ಆಟವಷ್ಟೇ ಅಲ್ಲ, ಓದಿನ ಕಡೆಗೂ ಗಮನ ಕೊಡುತ್ತೇನೆ. ಇದಕ್ಕಾಗಿ ವಾರಂತ್ಯದಲ್ಲಿ ಬಿಡುವು ಸಿಗುವುದರಿಂದ ಹೋಮ್‌ ವರ್ಕ್‌, ಪ್ರಾಜೆಕ್ಟ್‌ ವರ್ಕ್‌ಗಳನ್ನು ಮುಗಿಸುತ್ತೇನೆ. ಆಯಾ ದಿನದ ಪಾಠ ಅಂದೇ ಓದಬೇಕು ಹೀಗಾಗಿ, ಕೋರ್ಟ್‌ನಲ್ಲಿ ಅಭ್ಯಾಸ ಮುಗಿಸಿಕೊಂಡು ಮನೆಗೆ ಹೋದ ಮೇಲೆ ಪುಸ್ತಕ ಹಿಡಿಯುತ್ತೇನೆ. ಹೀಗೆ ಆಟ ಮತ್ತು ಓದು ಎರಡನ್ನೂ ಸರಿದೂಗಿಸಿಕೊಂಡು ಹೋಗಲು ಸಾಧ್ಯವಾಗುತ್ತಿದೆ’ ಎಂದಳು.

‘ಅಂತರರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸುತ್ತಿರುವ ಮಣಿಕಾ ಭಾತ್ರಾ, ಅರ್ಚನಾ ಕಾಮತ್‌ ಅವರೇ ನನಗೇ ಆದರ್ಶ. ಅರ್ಚನಾ ಅವರು ನಾನು ಅಭ್ಯಾಸ ಮಾಡುತ್ತಿರುವ ಕೋರ್ಟ್‌ನಲ್ಲಿ ತರಬೇತಿ ಪಡೆದವರು. ಇಲ್ಲಿಗೆ ಬಂದಾಗಲೆಲ್ಲಾ ನನಗೆ ಸಲಹೆ ನೀಡುತ್ತಾರೆ. ನನಗೆ ಆಗ ಹೆಚ್ಚು ಖುಷಿಯಾಗುತ್ತದೆ’ ಎಂದು ನಗುತ್ತಾ ಹೇಳಿದಳು.

‘ನನ್ನ ಸಹಪಾಠಿಗಳು ತುಂಬಾ ಸಹಕಾರ ನೀಡುತ್ತಾರೆ. ನಾನು ಗೈರು ಹಾಜರಾದ ದಿನಗಳಲ್ಲಿ ನಡೆದ ಪಾಠಗಳ ಬಗ್ಗೆ ತಿಳಿಸಿಕೊಡುತ್ತಾರೆ. ನನ್ನ ಶಿಕ್ಷಕರೂ ಅಷ್ಟೇ, ಆಟದಲ್ಲಿ ಸಾಧನೆ ಮಾಡುವಂತೆ ಪ್ರೊತ್ಸಾಹ ತುಂಬುತ್ತಾರೆ. ಇನ್ನು ನನ್ನ ಅಪ್ಪ–ಅಮ್ಮನ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ನನ್ನ ಓದು ಮತ್ತು ಆಟದ ಬಗ್ಗೆ ನನಗಿಂತ ಅವರೇ ಹೆಚ್ಚು ಕಾಳಜಿ ತೋರಿಸುತ್ತಾರೆ. ಹೀಗಾಗಿ ನನಗೆ ಕಷ್ಟ ಎನಿಸುತ್ತಿಲ್ಲ’ ಎನ್ನುತ್ತಾಳೆ ನಿಹಾರಿಕಾ.

‘ನನಗೆ ತರಬೇತಿ ನೀಡುತ್ತಿರುವ ಕೋಚ್‌ಗಳು ಕೂಡ ಹೆಚ್ಚು ಕಾಳಜಿ ವಹಿಸುತ್ತಾರೆ. ಸ್ಪರ್ಧೆಯಲ್ಲಿ ಭಾಗವಹಿಸಲು ಅವರೇ ಸಹಾಯ ಮಾಡುತ್ತಾರೆ. ಎಲ್ಲೇ ಸ್ಪರ್ಧೆ ನಡೆದರೂ ನನ್ನೊಂದಿಗೆ ಇರುತ್ತಾರೆ, ಎಲ್ಲವನ್ನೂ ತಿಳಿಸಿಕೊಡುತ್ತಾರೆ, ಹೀಗಾಗಿ ನನಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಸುಲಭವಾಗುತ್ತಿದೆ’ ಕೋಚ್‌ಗಳ ಮಾರ್ಗದರ್ಶನವನ್ನೂ ನೆನೆಯುತ್ತಾಳೆ.

’ಮುಂದಿನ ತಿಂಗಳು ಚಂಡೀಗಡದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ತರಬೇತಿ ನಡೆಸುತ್ತಿದ್ದೇನೆ. ಸ್ಪರ್ಧೆ ಗೆಲ್ಲುವ ವಿಶ್ವಾಸವೂ ಇದೆ’ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.