ADVERTISEMENT

ತೈಪಿ ಓಪನ್: ಎರಡನೇ ಸುತ್ತಿಗೆ ಶ್ರೀಕಾಂತ್‌, ತರುಣ್‌

​ಪ್ರಜಾವಾಣಿ ವಾರ್ತೆ
Published 7 ಮೇ 2025, 12:49 IST
Last Updated 7 ಮೇ 2025, 12:49 IST
ಕಿದಂಬಿ ಶ್ರೀಕಾಂತ್ ಆಟದ ವೈಖರಿ–ರಾಯಿಟರ್ಸ್ ಚಿತ್ರ
ಕಿದಂಬಿ ಶ್ರೀಕಾಂತ್ ಆಟದ ವೈಖರಿ–ರಾಯಿಟರ್ಸ್ ಚಿತ್ರ   

ತೈಪಿ (ಪಿಟಿಐ): ಭಾರತದ ಕಿದಂಬಿ ಶ್ರೀಕಾಂತ್ ಮತ್ತು ಇತರ ಯುವ ಬ್ಯಾಡ್ಮಿಂಟನ್ ತಾರೆಯರು, ತೈಪಿ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬುಧವಾರ ಎರಡನೇ ಸುತ್ತನ್ನು ತಲುಪಿದರು.

ಪದೇ ಪದೇ ಹಿನ್ನಡೆ ಕಂಡು ವಿಶ್ವ ಕ್ರಮಾಂಕದಲ್ಲಿ 61ನೇ ಸ್ಥಾನಕ್ಕೆ ಸರಿದಿರುವ ಶ್ರೀಕಾಂತ್‌ 21–16, 21–15 ರಿಂದ ಸ್ವದೇಶದ ಶಂಕರ್‌ ಸುಬ್ರಮಣಿಯನ್ ಅವರನ್ನು ಹಿಮ್ಮೆಟ್ಟಿಸಿದರು.

32 ವರ್ಷ ವಯಸ್ಸಿನ ಶ್ರೀಕಾಂತ್‌ ಎರಡನೇ ಸುತ್ತಿನಲ್ಲಿ ಭಾರತದ ಇನ್ನೊಬ್ಬ ಆಟಗಾರ ಆಯುಷ್‌ ಶೆಟ್ಟಿ ಅವರನ್ನು ಎದುರಿಸಲಿದ್ದಾರೆ. 2023ರ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ನ ಕಂಚಿನ ಪದಕ ವಿಜೇತರಾದ ಆಯುಷ್‌ ಅವರು ಇನ್ನೊಂದು ಪಂದ್ಯದಲ್ಲಿ ಅಮೋಘ ಆಟವಾಡಿ  ಮೂರನೇ ಶ್ರೇಯಾಂಕದ ಆಟಗಾರ ಹಾಗೂ ವಿಶ್ವ ಕ್ರಮಾಂಕದಲ್ಲಿ 13ನೇ ಸ್ಥಾನದಲ್ಲಿರುವ ಚಿಯಾ ಹಾವೋ (ಚೀನಾ ತೈಪಿ) ಅವರಿಗೆ 21–17, 21–18 ರಿಂದ ಆಘಾತ ನೀಡಿದರು. ಆಯುಷ್‌ ಗೆಲುವಿಗೆ 50 ನಿಮಿಷ ತೆಗೆದುಕೊಂಡರು.

ADVERTISEMENT

2023ರ ರಾಷ್ಟ್ರೀಯ ಕ್ರೀಡೆಗಳ ಚಿನ್ನ ವಿಜೇತ ತರುಣ್ ಮನ್ನೇಪಲ್ಲಿ ಸುದೀರ್ಘ ಪಂದ್ಯದಲ್ಲಿ ಜಪಾನ್‌ನ ಶೋಗೊ ಒಗಾವಾ ಅವರನ್ನು 21–17, 19–21, 21–12 ರಿಂದ ಸೋಲಿಸಿದರು. ಈ ಪಂದ್ಯ 70 ನಿಮಿಷ ನಡೆಯಿತು. ತರುಣ್ ಅವರ ಮುಂದಿನ ಎದುರಾಳಿ ಇಂಡೊನೇಷ್ಯಾದ ಮೊಹಮ್ಮದ್ ಝಕಿ ಉಬೇದುಲ್ಲಾ.

ಮೀರಬಾ ಲುವಾಂಗ್‌ ಮೈಸ್ನಂ ಮಾತ್ರ ನಿರಾಸೆ ಅನುಭವಿಸಿದರು. ಅವರು 21–23, 12–21 ರಲ್ಲಿ ಕೆನಡಾದ ಬ್ರಿಯಾನ್ ಯಂಗ್ ಅವರಿಗೆ ಸೋತರು.

ಮಹಿಳೆಯರ ಸಿಂಗಲ್ಸ್‌ನಲ್ಲಿ ಉನ್ನತಿ ಹೂಡಾ 21–13, 21–17 ರಿಂದ ಸ್ವದೇಶದ ಅನುಪಮಾ ಉಪಾಧ್ಯಾಯ ಅವರನ್ನು ನೇರ ಗೇಮ್‌ಗಳಿಂದ ಸೋಲಿಸಿ ಎರಡನೇ ಸುತ್ತನ್ನು ತಲುಪಿದರು. ಅಲ್ಲಿ ಅವರ ಎದುರಾಳಿ ತೈಪಿಯ ಲಿನ್‌ ಸಿಹ್ ಯುನ್.

ಆಕರ್ಷಿ ಕಶ್ಯಪ್ ಮೊದಲ ಸುತ್ತಿನಲ್ಲೇ ಸೋಲನುಭವಿಸಿದರು. ಅವರು ಏಕಪಕ್ಷೀಯ ಪಂದ್ಯದಲ್ಲಿ 9–21, 12–21 ರಲ್ಲಿ ತೈಪಿಯ ಹುಂಗ್‌ ಯಿ–ಟಿಂಗ್ ಅವರಿಗೆ ಮಣಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.