ADVERTISEMENT

ಥಾಯ್ಲೆಂಡ್‌ ಓಪನ್ ಬ್ಯಾಡ್ಮಿಂಟನ್‌ ಟೂರ್ನಿ: ಸಿಂಧು, ಪ್ರಣೀತ್‌ಗೆ ಆಘಾತ

ಪಿಟಿಐ
Published 12 ಜನವರಿ 2021, 12:32 IST
Last Updated 12 ಜನವರಿ 2021, 12:32 IST
ಪಿ.ವಿ.ಸಿಂಧು–ಎಎಫ್‌ಪಿ ಚಿತ್ರ
ಪಿ.ವಿ.ಸಿಂಧು–ಎಎಫ್‌ಪಿ ಚಿತ್ರ   

ಬ್ಯಾಂಕಾಕ್: ವಿಶ್ವ ಚಾಂಪಿಯನ್‌ ಆಟಗಾರ್ತಿ ಭಾರತದ ಪಿ.ವಿ.ಸಿಂಧು ಅವರು ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನಲ್ಲೇ ಆಘಾತ ಅನುಭವಿಸಿದ್ದಾರೆ. ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಟೂರ್ನಿಗಳು ಸ್ಥಗಿತಗೊಂಡು ಥಾಯ್ಲೆಂಡ್ ಓಪನ್ ಮೂಲಕ ಪುನರಾರಂಭಗೊಂಡಿವೆ. ಸಿಂಧು ಅವರು ಮಂಗಳವಾರ ಡೆನ್ಮಾರ್ಕ್‌ನ ಮಿಯಾ ಬ್ಲಿಚ್‌ಫೆಲ್ಟ್ ಎದುರು 21–16, 24–26, 13–21ರಿಂದ ಸೋತರು.

ಆರನೇ ಶ್ರೇಯಾಂಕ ಪಡೆದಿದ್ದ ಸಿಂಧು ಅವರನ್ನು ಮಣಿಸಲು ವಿಶ್ವ ಕ್ರಮಾಂಕದಲ್ಲಿ 18ನೇ ಸ್ಥಾನದಲ್ಲಿರುವ ಬ್ಲಿಚ್‌ಫೆಲ್ಟ್ ಅವರಿಗೆ 74 ನಿಮಿಷಗಳು ಸಾಕಾದವು.

ಸಿಂಧು ಅವರ ಸೋಲಿನೊಂದಿಗೆ ಮಹಿಳಾ ಸಿಂಗಲ್ಸ್‌ನಲ್ಲಿ ಭಾರತದ ಅಭಿಯಾನ ಅಂತ್ಯವಾಗಿದೆ. ಇನ್ನೊಬ್ಬ ಆಟಗಾರ್ತಿ ಸೈನಾ ನೆಹ್ವಾಲ್ ಅವರಿಗೆ ಕೋವಿಡ್–19 ದೃಢಪಟ್ಟಿರುವ ಕಾರಣ ಟೂರ್ನಿಯಿಂದ ಹಿಂದೆ ಸರಿಯಬೇಕಾಗಿದೆ.

ADVERTISEMENT

ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಬಿ.ಸಾಯಿ ಪ್ರಣೀತ್ ಅವರು 16–21, 10–21ರಿಂದ ಥಾಯ್ಲೆಂಡ್‌ನ ಕಾಂತಫೋನ್‌ ವಾಂಗ್‌ಚರೊನ್ ಎದುರು ಪರಾಭವಗೊಂಡರು.

ಮಿಶ್ರ ಡಬಲ್ಸ್ ವಿಭಾಗದಲ್ಲಿ ಮಾತ್ರ ಭಾರತಕ್ಕೆ ಫಲ ಲಭಿಸಿತು. ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಹಾಗೂ ಕನ್ನಡತಿ ಅಶ್ವಿನಿ ಪೊನ್ನಪ್ಪ ಅವರ ಜೋಡಿಯು 21–11, 27–29, 21–16ರಿಂದ ಇಂಡೊನೇಷ್ಯಾದ ಹಫೀಜ್ ಫೈಜಲ್–ಗ್ಲೋರಿಯಾ ವಿದಜಾಜ ಜೋಡಿಯನ್ನು ಮಣಿಸಿತು.

ಮಹಿಳಾ ಡಬಲ್ಸ್ ವಿಭಾಗದಲ್ಲಿ ಅಶ್ವಿನಿ ಹಾಗೂ ಎನ್‌.ಸಿಕ್ಕಿರೆಡ್ಡಿ ಜೋಡಿಗೆ ಮೊದಲ ತಡೆ ದಾಟಲಾಗಲಿಲ್ಲ. ಈ ಜೋಡಿಯು 16–21, 7–21ರಿಂದ ಕೊರಿಯಾದ ಕಿಮ್‌ ಸೋ ಯೊಂಗ್‌–ಕಾಂಗ್ ಹೀ ಯಾಂಗ್ ಎದುರು ಪರಾಭವಗೊಂಡರು.

ಕೋಚ್‌, ವ್ಯವಸ್ಥಾಪಕರಿಗೆ ಅವಕಾಶ ನಿರಾಕರಣೆ: ಸೈನಾ ಹಾಗೂ ಎಚ್‌.ಎಸ್‌ ಪ್ರಣಯ್ ಅವರಲ್ಲಿ ಕೋವಿಡ್‌ ದೃಢಪಟ್ಟ ಹಿನ್ನೆಲೆಯಲ್ಲಿ ಭಾರತದ ಆಟಗಾರರ ಪಂದ್ಯಗಳಿಗೆ ಕೋಚ್‌ಗಳು ಹಾಗೂ ತಂಡದ ವ್ಯವಸ್ಥಾಪಕರಿಗೆ ಪಾಲ್ಗೊಳ್ಳಲು ಅವಕಾಶ ನೀಡಿಲ್ಲ.

ಗೊಂದಲ ಸೃಷ್ಟಿಸಿದ ಸೈನಾ ಟ್ವೀಟ್: ‘ಸೋಮವಾರ ನಾನು ಕೋವಿಡ್–19 ಪರೀಕ್ಷೆಗೆ ಒಳಗಾಗಿದ್ದು, ಇನ್ನೂ ಅದರ ವರದಿ ಬಂದಿಲ್ಲ. ಇದು ಬಹಳ ಗೊಂದಲಕಾರಿಯಾಗಿದೆ. ಪಂದ್ಯಕ್ಕಾಗಿ ತಾಲೀಮು ನಡೆಸುವ ಸಂದರ್ಭದಲ್ಲಿ ಬ್ಯಾಂಕಾಕ್ ಆಸ್ಪತ್ರೆಗೆ ದಾಖಲಾಗುವಂತೆ ನನಗೆ ಸೂಚಿಸಲಾಯಿತು. ನನಗೆ ಕೋವಿಡ್ ದೃಢಪಟ್ಟಿದೆ ಎಂದು ಸಂಘಟಕರು ಹೇಳುತ್ತಾರೆ.ನಿಯಮಗಳ ಪ್ರಕಾರ ಕೋವಿಡ್ ಪರೀಕ್ಷೆಯ ವರದಿ ಐದು ತಾಸುಗಳ ಬಳಿಕ ಬರಬೇಕಾಗಿತ್ತು‘ ಎಂದು ಸೈನಾ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.