ದೋಹಾ: ಭಾರತದ ತಾರೆಯರಾದ ಮಾನವ್ ಠಕ್ಕರ್, ಮಣಿಕಾ ಬಾತ್ರಾ ಮತ್ತು ದಿಯಾ ಚಿತಳೆ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಹೊರಬಿದ್ದರು. ಈ ಮೂಲಕ ಸಿಂಗಲ್ಸ್ ಸ್ಪರ್ಧೆಯಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.
ವಿಶ್ವದ 48ನೇ ಕ್ರಮಾಂಕದ ಮಾನವ್ 64ನೇ ಘಟ್ಟದ ಪಂದ್ಯದಲ್ಲಿ 11-13, 3-11, 11-9, 6-11, 11-9, 3-11 (2–4)ರಿಂದ ವಿಶ್ವದ 4ನೇ ರ‍್ಯಾಂಕ್‌ನ ಹರಿಮೊಟೊ ಟೊಮೊಕಾಜು ಅವರಿಗೆ ಪ್ರಬಲ ಪೈಪೋಟಿ ನೀಡಿ ಸೋಲೊಪ್ಪಿಕೊಂಡರು.
ಜಪಾನ್ ಆಟಗಾರ ಒಂದು ಹಂತದಲ್ಲಿ 2–0 ಗೇಮ್‌ಗಳ ಮುನ್ನಡೆ ಪಡೆದಿದ್ದರು. ಆದರೆ, ಮೂರನೇ ಮತ್ತು ಐದನೇ ಗೇಮ್‌ನಲ್ಲಿ 25 ವರ್ಷ ವಯಸ್ಸಿನ ಠಕ್ಕರ್ ಪಾರಮ್ಯ ಮೆರೆದು, ವಿರೋಚಿತ ಹೋರಾಟ ತೋರಿದರು.
ಅನುಭವಿ ಆಟಗಾರ್ತಿ ಮಣಿಕಾ ಮಹಿಳೆಯರ ಸಿಂಗಲ್ಸ್‌ನ ಪಂದ್ಯದಲ್ಲಿ ತನಗಿಂತ ಕೆಳ ಕ್ರಮಾಂಕದ ಆಟಗಾರ್ತಿಯ ಎದುರು ಮುಗ್ಗರಿಸಿದರು. 46ನೇ ಕ್ರಮಾಂಕದ ಮಣಿಕಾ 8-11, 7-11, 5-11, 8-11 (0–4)ರಿಂದ 130ನೇ ರ‍್ಯಾಂಕ್‌ನ ಪಾರ್ಕ್ ಗಹಿಯೋನ್ ಅವರಿಗೆ ಮಣಿದರು. ಮಣಿಕಾ ಅವರ ಬ್ಯಾಕ್‌ಹ್ಯಾಂಡ್ ಹೊಡೆತವನ್ನು ಸಲೀಸಾಗಿ ಎದುರಿಸಿದ ದಕ್ಷಿಣ ಕೊರಿಯಾ ಆಟಗಾರ್ತಿ ಗೆದ್ದು, 32ರ ಘಟ್ಟಕ್ಕೆ ಮುನ್ನಡೆದರು.
ಭಾರತದ ಮತ್ತೊಬ್ಬ ಆಟಗಾರ್ತಿ, 88ನೇ ರ‍್ಯಾಂಕ್‌ನ ದಿಯಾ 3-11, 7-11, 6-11, 11-6, 5-11 (1–4)ರಿಂದ ಚೀನಾ ತೈಪೆಯ ಚೆಂಗ್ ಐ ಚಿಂಗ್ ಅವರಿಗೆ ಶರಣಾದರು.
ಮಹಿಳೆಯರ ಡಬಲ್ಸ್‌ನಲ್ಲಿ ಕರ್ನಾಟಕದ ಯಶಸ್ವಿನಿ ಘೋರ್ಪಡೆ ಮತ್ತು ದಿಯಾ ಚಿತಳೆ ಪ್ರಿ ಕ್ವಾರ್ಟರ್ ಫೈನಲ್ ತಲುಪಿದ್ದು, ಟೂರ್ನಿಯಲ್ಲಿರುವ ಭಾರತದ ಕೊನೆಯ ಭರವಸೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.