ನವದೆಹಲಿ: ಮರುಜೀವ ಪಡೆದುಕೊಂಡಿರುವ ಹಾಕಿ ಇಂಡಿಯಾ ಲೀಗ್‌ಗೆ ಮೂರು ತಿಂಗಳ ನೋಂದಣಿ ಪ್ರಕ್ರಿಯೆ ಸೋಮವಾರ ಆರಂಭವಾಗಿದೆ. ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ದೇಶ–ವಿದೇಶಗಳ ಸಾವಿರಕ್ಕೂ ಹೆಚ್ಚು ಮಂದಿ ನೋಂದಾಯಿಕೊಳ್ಳುವ ನಿರೀಕ್ಷೆಯಿದೆ.
ಏಳು ವರ್ಷ ಸ್ಥಗಿತಗೊಂಡಿದ್ದ ಹಾಕಿ ಲೀಗ್ 2024ರಲ್ಲಿ ಪುನರಾರಂಭ ಗೊಂಡಿತ್ತು. ಕೊನೆಯ ಬಾರಿ ಲೀಗ್ ನಡೆದಾಗ ಶ್ರಾಚಿ ರರ್ ಬೆಂಗಾಲ್ ಟೈಗರ್ಸ್ ತಂಡವು ಪುರುಷರ ವಿಭಾಗದಲ್ಲಿ ಚಾಂಪಿಯನ್ ಆಗಿತ್ತು. ಮಹಿಳೆಯರ ವಿಭಾಗದಲ್ಲಿ ಒಡಿಶಾ ವಾರಿಯರ್ಸ್ ಪ್ರಶಸ್ತಿ ಗೆದ್ದುಕೊಂಡಿತ್ತು.
ಪುರುಷರ ವಿಭಾಗದಲ್ಲಿ ಆತಿಥೇಯ ಭಾರತದ ಜೊತೆಗೆ ನೆದರ್ಲೆಂಡ್ಸ್, ಬೆಲ್ಜಿಯಂ, ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್, ಆಸ್ಟ್ರೇಲಿಯಾ, ಸ್ಪೇನ್, ಅರ್ಜೆಂಟೀನಾ, ಐರ್ಲೆಂಡ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಮಲೇಷ್ಯಾ ಮತ್ತು ದಕ್ಷಿಣ ಕೊರಿಯಾ ದೇಶಗಳ ಆಟಗಾರರು ಲೀಗ್‌ನಲ್ಲಿ ಪ್ರವೇಶಕ್ಕೆ ಯತ್ನಿಸಲಿದ್ದಾರೆ.
ಮಹಿಳೆಯರ ವಿಭಾಗದಲ್ಲೂ ಭಾರತ ಮಾತ್ರವಲ್ಲ, ನೆದರ್ಲೆಂಡ್ಸ್, ಆರ್ಜೆಂಟೀನಾ, ಬೆಲ್ಜಿಯಂ, ಸ್ಪೇನ್, ಇಂಗ್ಲೆಂಡ್, ಚಿಲಿ, ಜಪಾನ್, ಅಮೆರಿಕ, ಸ್ಕಾಟ್ಲೆಂಡ್ ದೇಶಗಳ ಆಟಗಾರ್ತಿಯರು ನೋಂದಣಿಗೆ ಆರ್ಹರಾಗಿದ್ದಾರೆ.
ಆಟಗಾರರ ನೋಂದಣಿ ಪ್ರಕ್ರಿಯೆ ಆಗಸ್ಟ್ 20ಕ್ಕೆ ಕೊನೆಗೊಳ್ಳಲಿದೆ.
‘ಕಳೆದ ಬಾರಿ 1000ಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದರು. ಹೀಗಾಗಿ ಲೀಗ್ ಜಾಗತಿಕ ಸ್ವರೂಪ ಪಡೆದುಕೊಂಡಿತು. ಉದಯೋನ್ಮುಖ ಆಟಗಾರರಿಗೆ ಸಾಮರ್ಥ್ಯ ಪ್ರದರ್ಶನಕ್ಕೆ ಇದು ವೇದಿಕೆಯಾಗಿದೆ’ ಎಂದು ಹಾಕಿ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.