ADVERTISEMENT

ಟೋಕಿಯೊ: ಒಲಿಂಪಿಕ್ಸ್‌ನ ಮುಖ್ಯ ಕ್ರೀಡಾಂಗಣ ಶೇ 90ರಷ್ಟು ಪೂರ್ಣ

ಏಜೆನ್ಸೀಸ್
Published 3 ಜುಲೈ 2019, 18:30 IST
Last Updated 3 ಜುಲೈ 2019, 18:30 IST
ಮುಂದಿನ ವರ್ಷದ ಒಲಿಂಪಿಕ್ಸ್‌ ಕ್ರೀಡೆಗಳ ಉದ್ಘಾಟನಾ ಸಮಾರಂಭ ಮತ್ತು ಟ್ರ್ಯಾಕ್‌ ಅಂಡ್‌ ಫೀಲ್ಡ್‌ ಸ್ಪರ್ಧೆಗಳು ನಡೆಯುವ ನ್ಯಾಷನಲ್‌ ಕ್ರೀಡಾಂಗಣದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ರಾಯಿಟರ್ಸ್ ಚಿತ್ರ
ಮುಂದಿನ ವರ್ಷದ ಒಲಿಂಪಿಕ್ಸ್‌ ಕ್ರೀಡೆಗಳ ಉದ್ಘಾಟನಾ ಸಮಾರಂಭ ಮತ್ತು ಟ್ರ್ಯಾಕ್‌ ಅಂಡ್‌ ಫೀಲ್ಡ್‌ ಸ್ಪರ್ಧೆಗಳು ನಡೆಯುವ ನ್ಯಾಷನಲ್‌ ಕ್ರೀಡಾಂಗಣದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ರಾಯಿಟರ್ಸ್ ಚಿತ್ರ   

ಟೋಕಿಯೊ: ಒಲಿಂಪಿಕ್‌ ಕ್ರೀಡೆಗಳ ಉದ್ಘಾಟನೆಗೆ ಸುಮಾರು ಒಂದು ವರ್ಷ ಉಳಿದಿದ್ದು, ಈ ಕ್ರೀಡಾ ಮೇಳಕ್ಕಾಗಿ ಟೋಕಿಯೊದಲ್ಲಿ ನಿರ್ಮಾಣವಾಗುತ್ತಿರುವ ನ್ಯಾಷನಲ್‌ ಸ್ಟೇಡಿಯಂನ ಕಾಮಗಾರಿ ಶೇ 90ರಷ್ಟು ಪೂರ್ಣಗೊಂಡಿದೆ.

ಮಹಾನಗರದ ಕೇಂದ್ರಭಾಗದಲ್ಲಿ ಸುಮಾರು ₹ 8,750 ಕೋಟಿ (1.25 ಶತಕೋಟಿ ಡಾಲರ್‌) ವೆಚ್ಚದಲ್ಲಿ ಸಜ್ಜಾಗುತ್ತಿರುವ ಈ ಕ್ರೀಡಾಂಗಣದ ವೀಕ್ಷಣೆಗೆ ಬುಧವಾರ ಮಾಧ್ಯಮದವರಿಗೆ ಅವಕಾಶ ಕಲ್ಪಿಸಲಾಯಿತು. ಈ ಕ್ರೀಡಾಂಗಣದಲ್ಲಿ ‌ಒಲಿಂಪಿಕ್‌ ಕ್ರೀಡೆಗಳ ಉದ್ಘಾಟನಾ ಸಮಾರಂಭ 2020ರ ಜುಲೈ 24ರಂದು ನಿಗದಿಯಾಗಿದೆ.

ಟ್ರ್ಯಾಕ್‌ ಅಂಡ್‌ ಫೀಲ್ಡ್‌ ಮತ್ತು ಕೆಲವು ಫುಟ್‌ಬಾಲ್‌ ಪಂದ್ಯಗಳು ಈ ಕ್ರೀಡಾಂಗಣದಲ್ಲೇ ನಡೆಯಲಿವೆ. ಬರುವ ಡಿಸೆಂಬರ್‌ನಲ್ಲಿ ಈ ಕ್ರೀಡಾಂಗಣದ ಉದ್ಘಾಟನೆಗೆ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರುತಿಳಿಸಿದ್ದಾರೆ. ವಾಸ್ತು ಶಿಲ್ಪಿ ಕೆಂಗೊ ಕುಮಾ ಕ್ರೀಡಾಂಗಣದವನ್ನು ವಿನ್ಯಾಸಗೊಳಿಸಿದ್ದಾರೆ. ಬ್ರಿಟನ್‌ನ ಆರ್ಕಿಟೆಕ್ಟ್‌ ಝುಹಾ ಹದೀದ್‌ ಅವರಿಗೆ ಕ್ರೀಡಾಂಗಣ ವಿನ್ಯಾಸದ ಹೊಣೆಯನ್ನು ಮೊದಲು ವಹಿಸಿಕೊಡಲಾಗಿತ್ತು. ಆದರೆ ನಿರ್ಮಾಣ ವೆಚ್ಚ 2 ಶತಕೋಟಿ ಡಾಲರ್‌ ತಲುಪಿದ ಕಾರಣ ಸರ್ಕಾರ ಈ ವಿನ್ಯಾಸ ತಿರಸ್ಕರಿಸಿತು.

ADVERTISEMENT

45 ಸಾವಿರದಿಂದ 60 ಸಾವಿರ ಆಸನಗಳನ್ನು ಶಾಶ್ವತವಾಗಿ ಅಳವಡಿಸಲಾಗುತ್ತಿದೆ. ಹುಲ್ಲಿನ ಹಾಸು ಸಿದ್ಧವಾಗುತ್ತಿದೆ. ಸರ್ವ...ತು ಹೊಂದಿಕೆಯಾಗುವ ಟ್ರ್ಯಾಕ್‌ ಅನ್ನು ಆಗಸ್ಟ್‌ ಮತ್ತು ಸೆಪ್ಟೆಂಬರ್ ಅವಧಿಯಲ್ಲಿ ಸಿದ್ಧಪಡಿಸಲಾಗುವುದು ಎಂದು ಸಂಘಟಕವರು ವಿವರ ನೀಡಿದರು.

ಈ ಕ್ರೀಡಾಂಗಣ ಸೇರಿ ಟೋಕಿಯೊ ನಗರದಲ್ಲಿ ಒಲಿಂಪಿಕ್ಸ್‌ಗಾಗಿ ಎಂಟು ಹೊಸ ತಾಣಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇತರ 35 ಸ್ಥಳಗಳನ್ನು ‘ತಾತ್ಕಾಲಿಕ’ ನೆಲೆ ಅಥವಾ ಹಳೆಯ ಕಟ್ಟಡಗಳಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಕೋಟ್ಯಂತರ ಮೊತ್ತದ ಹಣ ಉಳಿಸಬಹುದು ಎನ್ನುತ್ತಾರೆ.

ಗೇಮ್ಸ್‌ನ ಇನ್ನೊಂದು ಆಕರ್ಷಣೆಯೆಂದರೆ 10 ಸಾವಿರ ಆಥ್ಲೀಟುಗಳಿಗೆ ಅವಕಾಶವಿರುವ ಒಲಿಂಪಿಕ್‌ ಗ್ರಾಮ. ಇದು ಟೋಕಿಯೊ ಬೇ ಅಂಚಿನಲ್ಲಿ ನಿರ್ಮಾಣವಾಗುತ್ತಿದೆ.

ಒಟ್ಟಾರೆ ಒಲಿಂಪಿಕ್ಸ್‌ಗಾಗಿ ಸಿದ್ಧತೆಗಾಗಿ 1.40 ಲಕ್ಷ ಕೋಟಿ ವೆಚ್ಚ ಆಗಲಿದೆ. ಶೇ 70ರಷ್ಟು ತೆರಿಗೆದಾರರ ಹಣ ಬಳಕೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.