ADVERTISEMENT

ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಷಿಪ್‌ ಇಂದಿನಿಂದ: ಸಿಂಧು,ಸೇನ್‌ ಮೇಲೆ ನಿರೀಕ್ಷೆ

ಪಿಟಿಐ
Published 7 ಏಪ್ರಿಲ್ 2025, 23:30 IST
Last Updated 7 ಏಪ್ರಿಲ್ 2025, 23:30 IST
ಪಿ.ವಿ.ಸಿಂಧು
ಪಿ.ವಿ.ಸಿಂಧು   

ನಿಂಗ್ಬೊ, ಚೀನಾ: ಭಾರತದ ತಾರೆಯರಾದ ಲಕ್ಷ್ಯ ಸೇನ್‌, ಎಚ್‌.ಎಸ್‌. ಪ್ರಣಯ್‌ ಮತ್ತು ಪಿ.ವಿ. ಸಿಂಧು ಅವರು ಮಂಗಳವಾರ ಆರಂಭವಾಗುವ ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಷಿಪ್‌ನಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಈ ಋತುವಿನಲ್ಲಿ ಸತತ ವೈಫಲ್ಯ ಅನುಭವಿಸಿರುವ ಅವರು ಇಲ್ಲಿ ಲಯ ಕಂಡುಕೊಳ್ಳುವ ವಿಶ್ವಾಸದಲ್ಲಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಕ್ರಮವಾಗಿ 17 ಮತ್ತು 18ನೇ ಸ್ಥಾನದಲ್ಲಿರುವ ಪ್ರಣಯ್‌ ಮತ್ತು ಸೇನ್‌ ಅವರೊಂದಿಗೆ ಕಿರಣ್‌ ಜಾರ್ಜ್‌ (34ನೇ ರ‍್ಯಾಂಕ್‌), ಪ್ರಿಯಾಂಶು ರಾಜಾವತ್‌ (35ನೇ) ಅವರು ಪುರುಷರ ಸಿಂಗಲ್ಸ್‌ ಸ್ಪರ್ಧೆಯಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ.

ಒಲಿಂಪಿಕ್‌ ಡಬಲ್‌ ಪದಕ ವಿಜೇತೆ ಸಿಂಧು (17ನೇ ರ‍್ಯಾಂಕ್‌) ಅವರೊಂದಿಗೆ ಯುವ ಆಟಗಾರ್ತಿಯರಾದ ಮಾಳವಿಕಾ ಬನ್ಸೋಡ್‌ (23ನೇ), ಅನುಪಮಾ ಉಪಾಧ್ಯಾಯ (43ನೇ) ಮತ್ತು ಆಕರ್ಷಿ ಕಶ್ಯಪ್‌ (48ನೇ) ಅವರು ಮಹಿಳೆಯರ ಸಿಂಗಲ್ಸ್‌ನಲ್ಲಿ ಸುಧಾರಿತ ಪ್ರದರ್ಶನದ ಒತ್ತಡದಲ್ಲಿದ್ದಾರೆ.

ADVERTISEMENT

2021ರ ವಿಶ್ವ ಚಾಂಪಿಯನ್‌ಷಿಪ್‌ನ ಕಂಚಿನ ಪದಕ ವಿಜೇತ, 23 ವರ್ಷ ವಯಸ್ಸಿನ ಸೇನ್ ಅವರು ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನ ಹಾಲಿ ರನ್ನರ್‌ ಅಪ್‌ ಚೀನಾ ತೈಪೆಯ ಲೀ ಚಿಯಾ ಹಾವೊ ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ.

ಏಷ್ಯನ್‌ ಗೇಮ್ಸ್‌ನ ಕಂಚಿನ ಪದಕ ವಿಜೇತ, 31 ವರ್ಷ ವಯಸ್ಸಿನ ಪ್ರಣಯ್‌, ಮೊದಲ ಸುತ್ತಿನಲ್ಲಿ ಚೀನಾದ ಗುವಾಂಗ್ ಜು ಲು ಅವರನ್ನು ಎದುರಿಸಲಿದ್ದಾರೆ. ಪ್ರಿಯಾಂಶು ಅವರಿಗೆ ಥಾಯ್ಲೆಂಡ್‌ನ ಕಾಂಟಾಫೋನ್ ವಾಂಗ್‌ಚರೋಯೆನ್ ಎದುರಾಳಿಯಾಗಿದ್ದಾರೆ. ಕಿರಣ್ ಜಾರ್ಜ್ ಕ್ವಾಲಿಫೈಯರ್‌ ಆಟಗಾರನನ್ನು ಎದುರಿಸಲಿದ್ದಾರೆ.

29 ವರ್ಷ ವಯಸ್ಸಿನ ಸಿಂಧು ತನ್ನ ಅಭಿಯಾನವನ್ನು ವಿಶ್ವದ 34ನೇ ರ‍್ಯಾಂಕ್‌ನ ಇಂಡೊನೇಷ್ಯಾದ ಎಸ್ಟರ್ ನುರುಮಿ ಟ್ರೈ ವಾರ್ಡೊಯೊ ವಿರುದ್ಧ ಆರಂಭಿಸುವರು. ಅನುಪಮಾ ಅವರಿಗೆ ಎಂಟನೇ ಶ್ರೇಯಾಂಕದ ಮಾಜಿ ವಿಶ್ವ ಚಾಂಪಿಯನ್ ರಚನೋಕ್ ಇಂಟನಾನ್ (ಥಾಯ್ಲೆಂಡ್‌) ಎದುರಾಳಿ. ಮಾಳವಿಕಾ ಮತ್ತು ಆಕರ್ಷಿ ಕ್ರಮವಾಗಿ ಚೀನಾದ ಫಾಂಗ್ ಜೀ ಗಾವೊ ಮತ್ತು ಎರಡನೇ ಶ್ರೇಯಾಂಕದ ಯು ಹಾನ್ ಅವರನ್ನು ಎದುರಿಸುವರು.

ಮಹಿಳಾ ಡಬಲ್ಸ್‌ನಲ್ಲಿ ಒಂಬತ್ತನೇ ರ‍್ಯಾಂಕ್‌ನ ಭಾರತದ ಜೋಡಿ ಟ್ರೀಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್ ಅವರು ತಮ್ಮ ಆರಂಭಿಕ ಪಂದ್ಯದಲ್ಲಿ ಅರ್ಹತಾ ಸುತ್ತಿನ ಆಟಗಾರ್ತಿಯನ್ನು ಎದುರಿಸಲಿದ್ದಾರೆ. ಒಟ್ಟು ₹4.29 ಕೋಟಿ ಬಹುಮಾನ ಮೊತ್ತವನ್ನು ಒಳಗೊಂಡಿರುವ ಈ ಟೂರ್ನಿಯು ಇದೇ 13ರವರೆಗೆ ನಡೆಯಲಿವೆ.

ಲಕ್ಷ್ಯ ಸೇನ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.