ಪಡುಬಿದ್ರಿ: ಬೆಂಗಳೂರಿನ ಆದಿತ್ಯ ರಂಜನ್ ಸಾಹು ಮತ್ತು ಮಂಗಳೂರಿನ ಆರುಷಿ ಸೆವೆರಿನ್ ಹೆಲೆನ್ ಡಿಸಿಲ್ವ ಅವರು ಇಲ್ಲಿನ ಕಾಪುವಿನಲ್ಲಿ ನಡೆದ 15 ವರ್ಷದೊಳಗಿನವರ ಫಿಡೆ ರೇಟೆಡ್ ರಾಜ್ಯ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಮುಕ್ತ ಮತ್ತು ಬಾಲಕಿಯರ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಅಖಿಲ ಭಾರತ ಚೆಸ್ ಫೆಡರೇಷನ್, ಕರ್ನಾಟಕ ರಾಜ್ಯ ಚೆಸ್ ಸಂಸ್ಥೆ ಮತ್ತು ಉಡುಪಿ ಜಿಲ್ಲಾ ಚೆಸ್ ಸಂಸ್ಥೆಯ ಸಹಯೋಗದಲ್ಲಿ ಶ್ರೀ ನಾರಾಯಣಗುರು ಸ್ಕೂಲ್ ಆಫ್ ಚೆಸ್ ಆಯೋಜಿಸಿದ್ದ ಚಾಂಪಿಯನ್‌ಷಿಪ್‌ನಲ್ಲಿ ಆದಿತ್ಯ ರಂಜನ್ 7.5 ಪಾಯಿಂಟ್ ಗಳಿಸಿದರೆ ಆರುಷಿ 8.5 ಪಾಯಿಂಟ್ ಕಲೆ ಹಾಕಿದರು. ಇಬ್ಬರೂ ತಲಾ ₹ 6 ಸಾವಿರ ನಗದು ಮತ್ತು ಟ್ರೋಫಿ ತಮ್ಮದಾಗಿಸಿಕೊಂಡರು.
ಮುಕ್ತ ವಿಭಾಗದಲ್ಲಿ ಬೆಂಗಳೂರಿನ ಅಜಯ್ ಹಿಪ್ಪರಗಿ ಮತ್ತು ಯುವನೇಶ್ ಎ ಕೂಡ 7.5 ಪಾಯಿಂಟ್ ಗಳಿಸಿದ್ದರು. ಉತ್ತಮ ಟೈ ಬ್ರೇಕರ್ ಆಧಾರದಲ್ಲಿ ಆದಿತ್ಯ ಅವರನ್ನು ಚಾಂಪಿಯನ್ ಎಂದು ಘೋಷಿಸಲಾಯಿತು. ಅಜಯ್ ಮತ್ತು ಯುವನೇಶ್ ಕ್ರಮವಾಗಿ 2 ಮತ್ತು 3ನೇ ಸ್ಥಾನದೊಂದಿಗೆ ₹ 4 ಸಾವಿರ ಮತ್ತು ₹ 3 ಸಾವಿರ ನಗದು ಪಡೆದುಕೊಂಡರು.
ಬೆಂಗಳೂರಿನ ವಿಹಾನ್ ಸಚ್‌ದೇವ್, ಮೈಸೂರಿನ ನಿವಾನ್ ರಾಘವೇಂದ್ರ, ಬೆಂಗಳೂರಿನ ಪ್ರಥಮೇಶ್ ಶಶಿಕಾಂತ್ ದೇಶ್‌ಮುಖ್, ಮೈಸೂರಿನ ಈಶ್ವರ್ ವೀರಪ್ಪನ್ನ ಅಯ್ಯಪ್ಪನ್, ದಕ್ಷಿಣ ಕನ್ನಡದ ಆರಾಧ್ಯೊ ಭಟ್ಟಾಚಾರ್ಯ ಹಾಗೂ ಬೆಂಗಳೂರಿನ ಅದ್ರಿತ್ ದಾಸ್ ತಲಾ 7 ಪಾಯಿಂಟ್ ಗಳಿಸಿದರು. ಇವರು ಕ್ರಮವಾಗಿ 4ರಿಂದ 9ರ ವರೆಗಿನ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡರು.
ಬಾಲಕಿಯರ ವಿಭಾಗದಲ್ಲಿ ಆರುಷಿ 8.5 ಪಾಯಿಂಟ್ ಗಳಿಸಿದ ಏಕೈಕ ಆಟಗಾರ್ತಿ ಎನಿಸಿಕೊಂಡರು. ಉತ್ತರ ಕನ್ನಡದ ಅಕ್ಷಯ ಸಾಥಿ 7.5 ಪಾಯಿಂಟ್‌ಗಳೊಂದಿಗೆ ರನ್ನರ್ ಅಪ್ ಆದರು. ಅವರಿಗೆ ₹ 4 ಸಾವಿರ ನಗದು ಲಭಿಸಿತು. ಬೆಂಗಳೂರಿನ ಪ್ರತೀತಿ ಬೊರ್ಡೋಲಿ ಮತ್ತು ಶ್ರೇಯಾ ರಾಜೇಶ್ ತಲಾ 7 ಪಾಯಿಂಟ್ ಗಳಿಸಿದರು. ಉತ್ತಮ ಟೈಬ್ರೇಕರ್ ಆಧಾರದಲ್ಲಿ ಪ್ರತೀತಿ 3 ಮತ್ತು ಶ್ರೇಯಾ 4ನೇ ಸ್ಥಾನ ಗಳಿಸಿದರು. ಇವರಿಗೆ ಕ್ರಮವಾಗಿ ₹ 3 ಸಾವಿರ ಮತ್ತು ₹ 2.5 ಸಾವಿರ ನೀಡಲಾಯಿತು. ಬೆಂಗಳೂರಿನ ಕೃಪಾ ಉಕ್ಕಲಿ, ಇಂದುಶೀತಲ, ಉತ್ತರ ಕನ್ನಡದ ಅನ್ವಿತಾ ಸಾಥಿ, ಬೆಂಗಳೂರಿನ ಧನುಷ್ಕಾ, ದಿವ್ಯಶ್ರೀ ಮತ್ತು ನ್ಯಾನ್ಸಿ ತಲಾ 6.5 ಪಾಯಿಂಟ್‌ಗಳೊಂದಿಗೆ ಕ್ರಮವಾಗಿ 5ರಿಂದ 10ರ ವರೆಗಿನ ಸ್ಥಾನ ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.