ಚಾಂಗ್‌ಝೌ (ಚೀನಾ): ಉದಯೋನ್ಮುಖ ತಾರೆ ಉನ್ನತಿ ಹೂಡಾ ಅವರು ಶುಕ್ರವಾರ ಚೀನಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಹೊರಬಿದ್ದರು. ಇದರೊಂದಿಗೆ ಸಿಂಗಲ್ಸ್ ಸ್ಪರ್ಧೆಯಲ್ಲಿ ಭಾರತದ ಅಭಿಯಾನವೂ ಅಂತ್ಯಗೊಂಡಿತು.
17 ವರ್ಷದ ಹೂಡಾ, ಮಹಿಳೆಯರ ಸಿಂಗಲ್ಸ್‌ನ ಮೂರನೇ ಸುತ್ತಿನಲ್ಲಿ 16-21, 12-21ರಿಂದ ವಿಶ್ವದ ನಾಲ್ಕನೇ ಕ್ರಮಾಂಕದ ಆಟಗಾರ್ತಿ ಅಕಾನೆ ಯಮಗುಚಿ ಅವರಿಗೆ ಮಣಿದರು. ಜಪಾನ್‌ನ ಆಟಗಾರ್ತಿ ಕೇವಲ 33 ನಿಮಿಷಗಳಲ್ಲಿ ನೇರ ಗೇಮ್‌ಗಳಲ್ಲಿ ಗೆದ್ದು ಸೆಮಿಫೈನಲ್ ಪ್ರವೇಶಿಸಿದರು.
ಹರಿಯಾಣದ ಆಟಗಾರ್ತಿಯು ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ 21-16, 19-21, 21-13ರಿಂದ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ, ಸ್ವದೇಶದ ಪಿ.ವಿ. ಸಿಂಧು ಅವರಿಗೆ ಆಘಾತ ನೀಡಿ ಗಮನ ಸೆಳೆದಿದ್ದರು.
ಮೊದಲ ಗೇಮ್‌ನ ಆರಂಭದಲ್ಲಿ ಯಮಗುಚಿ ಅವರಿಗೆ ಸರಿಸಾಟಿಯಾಗಿ ಹೋರಾಟ ನಡೆಸಿದ ಹೂಡಾ, ಕೊನೆಯವರೆಗೆ ಅದೇ ಲಯವನ್ನು ಕಾಯ್ದುಕೊಳ್ಳಲು ವಿಫಲವಾದರು. ಜಪಾನ್‌ನ ತಾರೆ ಒಂದು ಹಂತದಲ್ಲಿ ಸತತ ಐದು ಅಂಕ ಗಳಿಸಿ ಆರಂಭಿಕ ಗೇಮ್ ಗೆದ್ದರು. ಎರಡನೇ ಗೇಮ್‌ನ ಆರಂಭದಲ್ಲೂ ಹೂಡಾ ಪ್ರತಿರೋಧ ತೋರಿದರು. ಆದರೆ, ಯಮಗುಚಿ ಅವರ ನಿಖರವಾದ ಆಟದ ಮುಂದೆ ಮಂಡಿಯೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.