ಸಾವು
(ಪ್ರಾತಿನಿಧಿಕ ಚಿತ್ರ)
ಬುಲಂದ್‌ಶಹರ್ (ಉತ್ತರಪ್ರದೇಶ): ಇಲ್ಲಿನ ರಾಜ್ಯ ಮಟ್ಟದ ಕಬಡ್ಡಿ ಆಟಗಾರ, 22 ವರ್ಷ ವಯಸ್ಸಿನ ಬ್ರಿಜೇಶ್ ಸೋಲಂಕಿ ಅವರು ನಾಯಿ ಕಚ್ಚಿದ್ದ ಪರಿಣಾಮ ರೇಬಿಸ್‌ನಿಂದ ಬುಧವಾರ ಮೃತಪಟ್ಟಿದ್ದಾರೆ.
ಮಾರ್ಚ್‌ನಲ್ಲಿ ಅವರು ಇಲ್ಲಿನ ಫರಾನಾ ಗ್ರಾಮದ ಚರಂಡಿಯಲ್ಲಿ ಬಿದ್ದಿದ್ದ ನಾಯಿ ಮರಿಯನ್ನು ರಕ್ಷಿಸಲು ಹೋದ ವೇಳೆ ಅದು ಅವರ ಕೈಗೆ ಕಚ್ಚಿತ್ತು. ಆದರೆ ಇದನ್ನು ಸಣ್ಣ ಗಾಯವೆಂದು ನಿರ್ಲಕ್ಷಿಸಿ ಅವರು ರೇಬಿಸ್ ಲಸಿಕೆ ತೆಗೆದುಕೊಂಡಿರಲಿಲ್ಲ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.
‘ಕೈನೋವು ಕಾಣಿಸಿಕೊಂಡರೂ ಅದು ಕಬಡ್ಡಿ ಆಟದಿಂದ ಆಗಿರಬಹುದು ಎಂದು ಅವರು ಭಾವಿಸಿದ್ದರು’ ಎಂದು ಅವರ ಕೋಚ್ ಪ್ರವೀಣ್ ಕುಮಾರ್ ತಿಳಿಸಿದ್ದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ಜೂನ್ 28ರಂದು ಅವರ ಆರೋಗ್ಯ ಬಿಗಡಾಯಿಸಿತ್ತು. ನೊಯ್ಡಾದ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ ಬುಧವಾರ ಮೃತಪಟ್ಟಿದ್ದಾರೆ. ಮೂವರು ಸೋದರರಲ್ಲಿ ಅವರು ಕಿರಿಯವರಾಗಿದ್ದರು.
ಮುಂಜಾಗ್ರತೆ ಕ್ರಮವಾಗಿ ಆರೋಗ್ಯ ಇಲಾಖೆ, ಗ್ರಾಮದ 29 ಮಂದಿಗೆ ರೇಬಿಸ್ ನಿರೋಧಕ ಲಸಿಕೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.