ವೀಸಾ (ಪ್ರಾತಿನಿಧಿಕ ಚಿತ್ರ)
ನವದೆಹಲಿ: ಜುಲೈ 28ರಂದು ಅಥೆನ್ಸ್‌ನಲ್ಲಿ ಆರಂಭವಾಗುವ ಪ್ರತಿಷ್ಠಿತ 17 ವರ್ಷದೊಳಗಿನವರ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್ ಈಗ ಭಾರತದ ಪೈಲ್ವಾನರಿಗೆ ತಪ್ಪಿಹೋಗುವ ಆತಂಕ ಎದುರಾಗಿದೆ. ಕೂಟ ಆರಂಭಕ್ಕೆ ನಾಲ್ಕೇ ದಿನಗಳಿದ್ದು, 47 ಮಂದಿಯ ಕೆಡೆಟ್ ತಂಡಕ್ಕೆ ವೀಸಾ ಸಮಸ್ಯೆ ಎದುರಾಗಿದೆ.
ಜುಲೈ 10ರಂದೇ ವೀಸಾ ಕೋರಿ ಗ್ರೀಸ್ ರಾಯಭಾರ ಕಚೇರಿಗೆ ಭಾರತ ಕುಸ್ತಿ ಫೆಡರೇಷನ್ ಸಮಯ ಕೇಳಿತ್ತು. ಆದರೆ 12 ದಿನ ಕಳೆದರೂ ಮನವಿಗೆ ಸಕಾರಾತ್ಮಕ ಸ್ಪಂದನೆ ದೊರೆಯದಿರುವುದು ತಂಡಕ್ಕೆ ಕಳವಳ ಮೂಡಿಸಿದೆ.
ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡುವಂತೆ ಫೆಡರೇಷನ್ ಜುಲೈ 16ರಂದು ವಿದೇಶಾಂಗ ವ್ಯವಹಾರ ಸಚಿವಾಲಯದ ಮೊರೆಹೋಗಿದೆ.
47 ಮಂದಿಯ ತಂಡದಲ್ಲಿ 30 ಕುಸ್ತಿಪಟುಗಳಿದ್ದಾರೆ. ಜುಲೈ 7 ಮತ್ತು 8 ರಂದು ಕ್ರಮವಾಗಿ ದೆಹಲಿ ಮತ್ತು ಲಖನೌದಲ್ಲಿ ಆಯ್ಕೆ ಟ್ರಯಲ್ಸ್ ನಡೆಸಿ ಕುಸ್ತಿಪಟುಗಳ ಆಯ್ಕೆ ಮಾಡಲಾಗಿತ್ತು. ತಂಡ ನಿಗದಿಯಂತೆ ಶನಿವಾರ ನಿರ್ಗಮಿಸಬೇಕಾಗಿದೆ.
‘ಗ್ರೀಸ್ ರಾಯಭಾರ ಕಚೇರಿಗೆ ಪದೇ ಪದೇ ವಿನಂತಿ ಮಾಡಿದರೂ, ಅವರಿಂದ ಪೂರಕ ಪ್ರತಿಕ್ರಿಯೆ ಬರದ ಕಾರಣ ಮಧ್ಯಪ್ರವೇಶ ಮಾಡುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಗೃಹ ಸಚಿವಾಲಯಕ್ಕೆ ಮನವಿ ಮಾಡಲಾಯಿತು’ ಎಂದು ಫೆಡರೇಷನ್ ಅಧ್ಯಕ್ಷ ಸಂಜಯ್ ಸಿಂಗ್ ಪಿಟಿಐಗೆ ತಿಳಿಸಿದರು.
‘ಆಟಗಾರರ, ತರಬೇತುದಾರರ ಪ್ರಯಾಣದ ಟಿಕೆಟ್‌ಗಳು ಸಿದ್ಧ ಇವೆ. ಅನುಭವ ಪಡೆಯುವ ದೃಷ್ವಿಯಿಂದ ಈ ಕೂಟವು ಯುವ ಕುಸ್ತಿಪಟುಗಳಿಗೆ ಮಹತ್ವದ್ದಾಗಿದೆ. ಅವರು ವಿಶ್ವ ಚಾಂಪಿಯನ್‌ಷಿಪ್ ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶ ನಮ್ಮದು’ ಎಂದರು.
ಈ ಹಿಂದೆ ಗ್ರೀಸ್ ರಾಯಭಾರ ಕಚೇರಿಯಿಂದ ನಾಲ್ಕೇ ದಿನಗಳಲ್ಲಿ ವೀಸಾ ನೀಡಲಾಗಿತ್ತು. ಈ ಬಾರಿ ವಿಳಂಬವಾಗಿದೆ. ಇತ್ತೀಚೆಗೆ ಕುಸ್ತಿ ಸ್ಪರ್ಧಿ ಹರ್ಷಿತಾ ಅವರಿಗೆ ಹಂಗೆರಿ ಎಂಬಸಿಯಿಂದ ಒಂದೇ ದಿನದಲ್ಲಿ ವೀಸಾ ದೊರಕಿತ್ತು. ಈ ಬಾರಿ ವಿಳಂಬಕ್ಕೆ ಕಾರಣ ತಿಳಿಯುತ್ತಿಲ್ಲ’ ಎಂದು ಇನ್ನೊಬ್ಬ ಅಧಿಕಾರಿ ತಿಳಿಸಿದರು.
ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ರಚನಾ ಪರಮಾರ್ (43 ಕೆ.ಜಿ), ಮೋನಿ (57 ಕೆ.ಜಿ), ಅಶ್ವಿನಿ ವೈಷ್ಣೋ (65 ಕೆ.ಜಿ), ಮನಿಷಾ (69 ಕೆ.ಜಿ) ಮೊದಲಾದವರು ತಂಡದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.