ADVERTISEMENT

ವಿಜೇಂದರ್ ಸಿಂಗ್‌ ಗೆಲುವಿನ ‘ಪಂಚ್‌’

ಪಿಟಿಐ
Published 15 ಜುಲೈ 2019, 17:35 IST
Last Updated 15 ಜುಲೈ 2019, 17:35 IST
ವಿಜೇಂದರ್ ಸಿಂಗ್
ವಿಜೇಂದರ್ ಸಿಂಗ್   

ನ್ಯೂವಾರ್ಕ್‌, ಅಮೆರಿಕ: ವೃತ್ತಿಪರ ಬಾಕ್ಸಿಂಗ್‌ನಲ್ಲಿ ಅಮೋಘ ಓಟ ಮುಂದುವರಿಸಿರುವ ಭಾರತದ ವಿಜೇಂದರ್ ಸಿಂಗ್ ಅಮೆರಿಕ ಸರ್ಕೀಟ್‌ನಲ್ಲಿ ಪದಾರ್ಪಣೆಯನ್ನು ಸ್ಮರಣೀಯವಾಗಿಸಿದ್ದಾರೆ. ಶನಿವಾರ ತಡರಾತ್ರಿ ನಡೆದ ಟೂರ್‌ನ ಚೊಚ್ಚಲ ಬೌಟ್‌ನಲ್ಲಿ ಅನುಭವಿ ಮೈಕ್ ಸ್ನೈಡರ್ ಅವರ ವಿರುದ್ಧ ವಿಜೇಂದರ್ ಗೆಲುವು ಸಾಧಿಸಿದರು.

ಸೂಪರ್‌ ಮಿಡಲ್‌ವೇಟ್‌ ವಿಭಾಗದ ಈ ಸ್ಪರ್ಧೆಯಲ್ಲಿ ಎಂಟು ಸುತ್ತುಗಳಿದ್ದವು. ಹರಿಯಾಣದ, 33 ವರ್ಷದ ವಿಜೇಂದರ್ ನಾಲ್ಕು ಸುತ್ತುಗಳಲ್ಲಿ ಮೇಲುಗೈ ಸಾಧಿಸಿ ಸತತ 11ನೇ ಜಯವನ್ನು ತಮ್ಮದಾಗಿಸಿಕೊಂಡರು.

ನಾಲ್ಕನೇ ಸುತ್ತಿನ ಎರಡನೇ ನಿಮಿಷದಲ್ಲಿ ವಿಜೇಂದರ್‌ ಪ್ರಬಲ ಪಂಚ್ ಪ್ರಯೋಗಿಸಿದರು. ಇದರಿಂದ ಕಂಗೆಟ್ಟ ಮೈಕ್ ಸ್ನೈಡರ್ ರಿಂಗ್‌ನಲ್ಲೇ ಕುಸಿದರು. ಹೀಗಾಗಿ ರೆಫರಿ ಸ್ಪರ್ಧೆಯನ್ನು ಸ್ಥಗಿತಗೊಳಿಸಿ ವಿಜೇಂದರ್ ಅವರನ್ನು ವಿಜಯಿ ಎಂದು ಘೋಷಿಸಿದರು. ಎದುರಾಳಿಯನ್ನು ನಾಕೌಟ್ ಮಾಡಿ ವಿಜೇಂದರ್ ಗೆದ್ದ ಎಂಟನೇ ಪ್ರಶಸ್ತಿ ಇದಾಗಿದೆ.

ADVERTISEMENT

ವಿಜೇಂದರ್ ಅವರಿಗಿಂತ ಐದು ವರ್ಷ ಹಿರಿಯರಾದ ಸ್ನೈಡರ್, ಬೌಟ್ ಉದ್ದಕ್ಕೂ ಭಾರತದ ಬಾಕ್ಸರ್‌ಗೆ ಎದಿರೇಟು ನೀಡಲು ವಿಫಲರಾದರು. ಒಂದು ವರ್ಷದ ನಂತರ ಕಣಕ್ಕೆ ಇಳಿದ ವಿಜೇಂದರ್ ಶಕ್ತಿಶಾಲಿ ಪಂಚ್‌ಗಳ ಮೂಲಕ ಮಿಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.