ವಾಲಿಬಾಲ್
ಬೆಂಗಳೂರು: ನಾಲ್ಕು ಬಾರಿಯ ಚಾಂಪಿಯನ್ ಬ್ರೆಜಿಲ್‌ನ ಸಡಾ ಕ್ರುಝೇರೊ ವೋಲಿ ಕ್ಲಬ್ ಎದುರು ಹೋರಾಟ ತೋರಿ ಸೋತರೂ, ಜಪಾನ್‌ನ ಸುಂಟೋರಿ ಸನ್‌ಬರ್ಡ್ಸ್ ತಂಡ, ಪುರುಷರ ವಾಲಿಬಾಲ್ ಕ್ಲಬ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌ಗೆ ಸ್ಥಾನ ಕಾದಿರಿಸಿದ ಮೊದಲ ತಂಡ ಎನಿಸಿತು. ಗುರುವಾರ ನಡೆದ ಈ ಪಂದ್ಯದಲ್ಲಿ ಬ್ರೆಜಿಲ್‌ನ ಕ್ಲಬ್ 3–2 ರಿಂದ ಜಯಗಳಿಸಿತು.
ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಬ್ರೆಜಿಲ್‌ನ ಕ್ಲಬ್ 25–21, 31–29, 28–30, 22–25, 15–12 ರಿಂದ ಜಪಾನ್‌ನ ಕ್ಲಬ್ ಮೇಲೆ ಜಯಗಳಿಸಿತು. ಜಪಾನ್‌ನ ಸುಂಟೋರಿ ಸನ್‌ಬರ್ಡ್ಸ್ ಕ್ಲಬ್ ತಂಡ ಇದೇ ಮೊದಲ ಬಾರಿ ಈ ಚಾಂಪಿಯನ್‌ಷಿಪ್‌ನಲ್ಲಿ ಆಡುತ್ತಿದೆ.
ಬುಧವಾರ ಮೊದಲ ಪಂದ್ಯದಲ್ಲಿ ಟರ್ಕಿಯ ಹಾಕ್‌ಬ್ಯಾಂಕ್ ಸ್ಪೋರ್ಟ್ಸ್ ಕ್ಲಬ್ ಮೇಲೆ ನೇರ ಸೆಟ್‌ಗಳಿಂದ ಗೆದ್ದು ಪೂರ್ಣ ಮೂರು ಪಾಯಿಂಟ್ ಗಳಿಸಿದ್ದ ಸನ್‌ಬರ್ಡ್ಸ್ ತಂಡ ಇಂದು ಸೋತರೂ ಒಂದು ಪಾಯಿಂಟ್ ಪಡೆಯುವಲ್ಲಿ ಯಶಸ್ವಿಯಾಯಿತು. ಟೂರ್ನಿಯ ನಿಯಮಾವಳಿಯಂತೆ ಪಂದ್ಯ 3–2 ಸೆಟ್‌ಗಳಲ್ಲಿ ಇತ್ಯರ್ಥಗೊಂಡರೆ ಗೆದ್ದ ತಂಡ ಮೂರು, ಸೋತ ತಂಡ ಹೋರಾಟಕ್ಕಾಗಿ ಒಂದು ಪಾಯಿಂಟ್ ಪಡೆಯುತ್ತದೆ.
ಸಕಾಲದಲ್ಲಿ ಸಾಂಘಿಕ ಪ್ರದರ್ಶನ ನೀಡಿದ ಬ್ರೆಜಿಲ್‌ನ ತಂಡ ಗುರುವಾರದ ಪಂದ್ಯದಲ್ಲಿ ಗೆಲುವಿಗಾಗಿ ಮೂರು ಅಮೂಲ್ಯ ಪಾಯಿಂಟ್ ಪಡೆದಿದ್ದು, ಸೆಮಿಫೈನಲ್ ರೇಸ್‌ನಲ್ಲಿ ಉಳಿದುಕೊಂಡಿದೆ. ನಾಲ್ಕರ ಘಟ್ಟ ತಲುಪಬೇಕಾದರೆ, ಬ್ರೆಜಿಲ್‌ನ ಕ್ಲಬ್ ಶುಕ್ರವಾರ ನಡೆಯುವ ಪಂದ್ಯದಲ್ಲಿ ಟರ್ಕಿಯ ಹಾಕ್‌ಬ್ಯಾಂಕ್ ಸ್ಪೋರ್ಟ್ ಕ್ಲಬ್ ಮೇಲೆ ಗೆಲ್ಲುವುದು ಅನಿವಾರ್ಯವಾಗಿದೆ.
ಬ್ರೆಜಿಲ್‌ನ ಕ್ಲಬ್ ತಂಡದ ಸ್ಮ್ಯಾಶ್, ಬ್ಲಾಕ್‌ಗಳು ಅತ್ಯುತ್ತಮ ಮಟ್ಟದಲ್ಲಿದ್ದು ತಂಡ ಮೊದಲ ಎರಡು ಸೆಟ್ ಗೆದ್ದು, ಮೂರನೇ ಸೆಟ್‌ನಲ್ಲಿ 14–10 ಮುನ್ನಡೆ ಸಾಧಿಸಿತ್ತು. ಆದರೆ ಜಪಾನ್‌ನ ಕ್ಲಬ್ ಸುಲಭವಾಗಿ ಮಣಿಯಲಿಲ್ಲ. ರಷ್ಯಾದ ದಿಮಿಟ್ರಿ ಮುಸೆರ್ಸ್‌ಕಿ ಅವರು ಎದುರಾಳಿ ಅಂಕಣದ ಖಾಲಿ ಸ್ಥಳಗಳನ್ನು ಗುರುತಿಸಿ ಚೆಂಡನ್ನು ಸ್ಮ್ಯಾಶ್ ಮಾಡಿದರು. ಉತ್ತಮ ಬ್ಲಾಕ್, ರಕ್ಷಣಾ ತಂತ್ರಗಳ ಮೂಲಕ ಮೂರನೇ ಸೆಟ್ ಪಡೆದ ನಂತರ, ಜಪಾನ್‌ನ ತಂಡ ಉತ್ತಮ ಹೋರಾಟದಿಂದ ಕೂಡಿದ ನಾಲ್ಕನೇ ಸೆಟ್ ಗೆಲ್ಲುವಲ್ಲಿ ಯಶಸ್ವಿಯಾಯಿತು. ಆ ಮೂಲಕ ಒಂದು ಪಾಯಿಂಟ್ ಖಚಿತಪಡಿಸಿತು. ಅಂತಿಮ ಸೆಟ್‌ನಲ್ಲಿ ಬ್ರೆಜಿಲ್ ಕ್ಲಬ್‌ನ ಕೈಮೇಲಾಯಿತು.
ಶುಕ್ರವಾರ, ಭಾರತದ ಅಹಮದಾಬಾದ್ ಡಿಫೆಂಡರ್ಸ್ ತಂಡ ‘ಎ’ ಗುಂಪಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್, ಇಟಲಿಯ ಸರ್ ಸಿಕೊಮಾ ಪೆರುಗಿಯಾ ತಂಡವನ್ನು ಎದುರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.