ಗೆಲುವಿನ ಸಂಭ್ರಮದಲ್ಲಿ ಜರ್ಮನಿಯ ಲಾರಾ ಸೀಗೆಮಂಡ್
ಲಂಡನ್: ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಮತ್ತಷ್ಟು ಶ್ರೇಯಾಂಕಿತ ಆಟಗಾರರು ನಿರಾಸೆ ಅನುಭವಿಸಿದರು. ಪುರುಷರ ಸಿಂಗಲ್ಸ್‌ನಲ್ಲಿ ನಾಲ್ಕನೇ ಶ್ರೇಯಾಂಕದ ಜಾಕ್ ಡ್ರೇಪರ್ ಮತ್ತು ಮಹಿಳಾ ಸಿಂಗಲ್ಸ್‌ನಲ್ಲಿ ಆರನೇ ಶ್ರೇಯಾಂಕದ ಮ್ಯಾಡಿಸನ್ ಕೀಸ್ ಟೂರ್ನಿಯಿಂದ ಹೊರಬಿದ್ದರು.
ಜರ್ಮನಿಯ ಲಾರಾ ಸೀಗೆಮಂಡ್ 6-3, 6-3ರ ಸೆಟ್‌ಗಳಿಂದ ಆಸ್ಟ್ರೇಲಿಯಾ ಓಪನ್ ಚಾಂಪಿಯನ್ ಮ್ಯಾಡಿಸನ್ (ಅಮೆರಿಕ) ಅವರಿಗೆ ಆಘಾತ ನೀಡಿದರು. ಡಬಲ್ಸ್‌ನಲ್ಲಿ ಮೂರು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದಿರುವ ಲಾರಾ, ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಇದೇ ಮೊದಲ ಬಾರಿ ಸಿಂಗಲ್ಸ್‌ನಲ್ಲಿ ನಾಲ್ಕನೇ ಸುತ್ತು ತಲುಪಿದ್ದಾರೆ.
ಡ್ರೇಪರ್‌ಗೆ ಆಘಾತ: 2017ರ ರನ್ನರ್ ಅಪ್ ಮರಿನ್ ಸಿಲಿಕ್ ಅವರು ಪುರುಷರ ಸಿಂಗಲ್ಸ್‌ನ ಎರಡನೇ ಸುತ್ತಿನಲ್ಲಿ 6-4, 6-3, 1-6, 6-4 ರಿಂದ ಬ್ರಿಟನ್‌ನ ಜಾಕ್ ಡ್ರೇಪರ್ ಅವರನ್ನು ಹಿಮ್ಮೆಟ್ಟಿಸಿದರು. 2014ರಲ್ಲಿ ಅಮೆರಿಕ ಓಪನ್ ಪ್ರಶಸ್ತಿ ಗೆದ್ದಿರುವ ಕ್ರೊವೇಷ್ಯಾದ 36 ವರ್ಷ ವಯಸ್ಸಿನ ಸಿಲಿಕ್, ಈತನಕ ಮೂರು ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ಫೈನಲ್ ತಲುಪಿದ್ದಾರೆ. 2017ರ ವಿಂಬಲ್ಡನ್ ಮತ್ತು 2018ರ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ರೋಜರ್ ಫೆಡರರ್ ವಿರುದ್ಧ ಸೋತಿದ್ದರು.
ಪುರುಷರ ಸಿಂಗಲ್ಸ್‌ನಲ್ಲಿ ಒಟ್ಟು 30 ಶ್ರೇಯಾಂಕಿತರ ಪೈಕಿ 17 ಮಂದಿ ನಿರ್ಗಮಿಸಿದಂತಾಗಿದೆ. ಅಗ್ರ 10ರಲ್ಲಿ ನಾಲ್ಕು ಮಂದಿ ಮಾತ್ರ ಸ್ಪರ್ಧೆಯಲ್ಲಿ ಉಳಿದಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ 16 ಶ್ರೇಯಾಂಕಿತರು ಹೊರಬಿದ್ದಿದ್ದಾರೆ. ಅಗ್ರ 10ರ ಪೈಕಿ ನಾಲ್ಕು ಮಂದಿ ಮಾತ್ರ ಕಣದಲ್ಲಿದ್ದಾರೆ.
ಸಿನ್ನರ್‌ಗೆ ಗೆಲುವು: ವಿಶ್ವದ ಅಗ್ರಮಾನ್ಯ ಆಟಗಾರ ಯಾನಿಕ್ ಸಿನ್ನರ್ ಅವರು ನಿರಾಯಾಸವಾಗಿ ಮೂರನೇ ಸುತ್ತು ಪ್ರವೇಶಿಸಿದರು. ಇಟಲಿಯ 23 ವರ್ಷ ವಯಸ್ಸಿನ ಸಿನ್ನರ್ 6-1, 6-1, 6-3ರ ನೇರ ಸೆಟ್‌ಗಳಿಂದ ಆಸ್ಟ್ರೇಲಿಯಾದ ಅಲೆಕ್ಸಾಂಡರ್ ವುಕಿಕ್ ಅವರನ್ನು ಹಿಮ್ಮೆಟ್ಟಿಸಿದರು.
ಸೊನ್ಮೆಜ್ ದಾಖಲೆ: ಮಹಿಳೆಯರ ಸಿಂಗಲ್ಸ್‌ನಲ್ಲಿ ಝೆಯ್ನೆಪ್ ಸೊನ್ಮೆಜ್ ಅವರು 7-5, 7-5ರ ಸೆಟ್‌ಗಳಿಂದ ಕ್ಸಿನ್ಯು ವಾಂಗ್ (ಚೀನಾ) ಅವರನ್ನು ಸೋಲಿಸಿದರು. ಈ ಮೂಲಕ ಟೆನಿಸ್‌ನ ಓಪನ್ ಯುಗದಲ್ಲಿ ಯಾವುದೇ ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ಮೂರನೇ ಸುತ್ತು ತಲುಪಿದ ಟರ್ಕಿಯ ಮೊದಲ ಸ್ಪರ್ಧಿ ಎಂಬ ಹಿರಿಮೆಗೆ ಪಾತ್ರವಾದರು.
1968ರಲ್ಲಿ ಓಪನ್ ಯುಗ ಪ್ರಾರಂಭವಾದಾಗಿನಿಂದ ಟರ್ಕಿಯ ಯಾವುದೇ ಸ್ಪರ್ಧಿ ಪುರುಷರ ಅಥವಾ ಮಹಿಳೆಯರ ಸಿಂಗಲ್ಸ್‌ನಲ್ಲಿ ಮೂರನೇ ತಲುಪಿಲ್ಲ. 2016-17ರ ಅವಧಿಯಲ್ಲಿ ಕಾಗ್ಲಾ ಬುಯುಕಾಕ್ಕೆ ಮೂರು ಗ್ರ್ಯಾನ್‌ಸ್ಲಾಮ್‌ಗಳಲ್ಲಿ ಎರಡನೇ ಸುತ್ತು ತಲುಪಿದ್ದು ಈವರೆಗಿನ ದಾಖಲೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.