ADVERTISEMENT

ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಚೊಚ್ಚಲ ಚಿನ್ನ ಗೆದ್ದ ಲವ್ಲಿನಾ

ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ನಿಖತ್‌ ಜರೀನ್‌ಗೆೆ ಸತತ 2ನೇ ಕಿರೀಟ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2023, 19:31 IST
Last Updated 26 ಮಾರ್ಚ್ 2023, 19:31 IST
ಗೆಲುವಿನ ಸಂಭ್ರಮದಲ್ಲಿ ಲವ್ಲಿನಾ ಬೊರ್ಗೊಹೈನ್‌ (ಎಡ) ಮತ್ತು ನಿಖತ್‌ ಜರೀನ್‌ –ಪಿಟಿಐ ಚಿತ್ರಗಳು
ಗೆಲುವಿನ ಸಂಭ್ರಮದಲ್ಲಿ ಲವ್ಲಿನಾ ಬೊರ್ಗೊಹೈನ್‌ (ಎಡ) ಮತ್ತು ನಿಖತ್‌ ಜರೀನ್‌ –ಪಿಟಿಐ ಚಿತ್ರಗಳು   

ನವದೆಹಲಿ (ಪಿಟಿಐ): ರೆಫರಿಯು ಲವ್ಲಿನಾ ಬೊರ್ಗೊಹೈನ್‌ ಅವರ ಕೈಯನ್ನು ಎತ್ತಿಹಿಡಿದು ವಿಜೇತೆ ಎಂದು ಘೋಷಿಸುತ್ತಿದ್ದಂತೆಯೇ, ಅಸ್ಸಾಂನ ಈ ಬಾಕ್ಸರ್‌ ಗೆಲುವಿನ ಕೇಕೆ ಹಾಕಿ ಸಂಭ್ರಮಿಸಿದರು. ಕೆ.ಡಿ.ಜಾಧವ್‌ ಒಳಾಂಗಣ ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರು ಎದ್ದುನಿಂತು ಚಪ್ಪಾಳೆ ಮೂಲಕ ಅಭಿನಂದಿಸಿದರು.

ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆಲ್ಲಬೇಕೆಂಬ ಲವ್ಲಿನಾ ಅವರ ಕನಸು ಭಾನುವಾರ ಕೈಗೂಡಿತು. 25 ವರ್ಷದ ಅವರು ಈ ಹಿಂದೆ ಎರಡು ಸಲ ಕಂಚು ಗೆದ್ದಿದ್ದರು. ಇದೀಗ ನಾಲ್ಕನೇ ಪ್ರಯತ್ನದಲ್ಲಿ ಚಾಂಪಿಯನ್ ಆದರು. 75 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಅವರು ಆಸ್ಟ್ರೇಲಿಯಾದ ಕೈಟ್ಲಿನ್‌ ಪಾರ್ಕರ್‌ ವಿರುದ್ಧ ಗೆದ್ದರು.

‘ಚಿನ್ನ ಗೆದ್ದು ದೇಶಕ್ಕೆ ಹೆಮ್ಮೆ ತಂದಿರುವುದು ಸಂತಸ ಉಂಟುಮಾಡಿದೆ’ ಎಂದು ಲವ್ಲಿನಾ ಫೈನಲ್‌ ಬಳಿಕ ಭಾವುಕರಾಗಿ ನುಡಿದರು. ‘ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಹಾಗೂ ಒಲಿಂಪಿಕ್ಸ್‌ನಲ್ಲಿ ಒಂದು ಕಂಚು ಗೆದ್ದಿದ್ದೇನೆ. ಚಿನ್ನ ಗೆಲ್ಲಲು ಕಠಿಣ ಪ್ರಯತ್ನ ನಡೆಸಿದ್ದೆ. ನನ್ನ ಗುರಿ ಈಡೇರಿದೆ’ ಎಂದರು.

ADVERTISEMENT

2021ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಬಳಿಕ ಲವ್ಲಿನಾ ಅವರು ವೃತ್ತಿಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. 2022ರ ಕಾಮನ್‌ವೆಲ್ತ್‌ ಕೂಟದಲ್ಲಿ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದರು. ‘ನನ್ನ ಕೋಚ್‌ಗಳಿಗೆ ನಿರಂತರ ಕಿರುಕುಳ ನೀಡ ಲಾಗುತ್ತಿದೆ. ಇದರಿಂದ ಕಾಮನ್‌ವೆಲ್ತ್‌ ಕೂಟಕ್ಕೆ ಸರಿಯಾಗಿ ಸಿದ್ಧತೆ ನಡೆಸಲು ಆಗಿಲ್ಲ’ ಎಂದು ಆರೋಪಿಸಿದ್ದರು. ಇದು ವಿವಾದಕ್ಕೂ ಕಾರಣವಾಗಿತ್ತು.

ಈ ಹಿಂದೆ 69 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದು ಲವ್ಲಿನಾ, ತೂಕ ಹೆಚ್ಚಿಸಿಕೊಂಡು 75 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಲು ತೀರ್ಮಾನಿಸಿದ್ದರು.

ಎರಡನೇ ಪ್ರಶಸ್ತಿಯ ಸಂಭ್ರಮ: ನಿಖತ್‌ ಅವರು 52 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ವಿಯೆಟ್ನಾಂನ ಗುಯೆನ್ ಥಿ ಟಾಮ್ ವಿರುದ್ಧ ಗೆದ್ದು ಸತತ ಎರಡನೇ ಬಾರಿ ಚಾಂಪಿಯನ್‌ ಆದರು.

‘ಎರಡನೇ ಸಲ ವಿಶ್ವ ಚಾಂಪಿ ಯನ್‌ ಎನಿಸಿಕೊಂಡದ್ದು ಸಂತಸ ಉಂಟುಮಾಡಿದೆ. ಒಲಿಂಪಿಕ್‌ ಕೂಟದಲ್ಲಿರುವ ತೂಕ ವಿಭಾಗದಲ್ಲಿ ಈ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ’ ಎಂದು ನಿಖತ್‌ ಫೈನಲ್‌ ಬಳಿಕ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.