ADVERTISEMENT

ವಿಶ್ವ ಕೆಡೆಟ್ಸ್‌ ಚೆಸ್‌: ರಾಜ್ಯದ ಬಾಲಕಿ ಎ. ಚಾರ್ವಿಗೆ ಪ್ರಶಸ್ತಿ

8 ವರ್ಷದೊಳಗಿನ ವಿಭಾಗದಲ್ಲಿ ಸಾಧನೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 22:24 IST
Last Updated 27 ಸೆಪ್ಟೆಂಬರ್ 2022, 22:24 IST
ಎ.ಚಾರ್ವಿ
ಎ.ಚಾರ್ವಿ   

ಬೆಂಗಳೂರು: ಚತುರ ಆಟವಾಡಿದ ಕರ್ನಾಟಕದ ಎ.ಚಾರ್ವಿ ಅವರು ಜಾರ್ಜಿಯದ ಬಟುಮಿಯಲ್ಲಿ ಮಂಗಳ ವಾರ ಕೊನೆಗೊಂಡ ವಿಶ್ವ ಕೆಡೆಟ್ಸ್‌ ಚೆಸ್‌ ಚಾಂಪಿಯನ್‌ಷಿಪ್‌ನ ಬಾಲಕಿಯರ 8 ವರ್ಷದೊಳಗಿನವರ ವಿಭಾಗದಲ್ಲಿ ಪ್ರಶಸ್ತಿ ಗೆದ್ದರು.

ಚಾರ್ವಿ ಅವರು 11 ಸುತ್ತುಗಳಲ್ಲಿ 9.5 ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನ ಪಡೆದರು. ಇಂಗ್ಲೆಂಡ್‌ನ ಬೋಧನಾ ಶಿವಾನಂದನ್‌ ಕೂಡಾ 9.5 ಪಾಯಿಂಟ್ಸ್‌ ಕಲೆಹಾಕಿದ್ದರು. ಆದರೆ ಟೈಬ್ರೇಕರ್‌ ನಲ್ಲಿ ಚಾಂಪಿಯನ್‌ಪಟ್ಟ ಚಾರ್ವಿಗೆ ಒಲಿಯಿತು.

ಚಾರ್ವಿ 9 ಗೇಮ್‌ಗಳಲ್ಲಿ ಗೆಲುವು ಪಡೆದರೆ, ಒಂದನ್ನು ಡ್ರಾ ಮಾಡಿ ಕೊಂಡರು. ಒಂದರಲ್ಲಿ ಸೋತರು. ಎಂಟನೇ ಸುತ್ತಿನಲ್ಲಿ ಕಜಕಸ್ತಾನದ ಶೊಲ್ಪನ್‌ಬೆಕ್‌ ಜನ್ಸಯಾ ಎದುರು ಪರಾಭವಗೊಂಡರು.

ADVERTISEMENT

10 ಸುತ್ತುಗಳ ಬಳಿಕ ಅವರು ಎರಡನೇ ಸ್ಥಾನದಲ್ಲಿದ್ದರು. ಪ್ರಶಸ್ತಿ ಗೆಲ್ಲಲು ಕೊನೆಯ ಗೇಮ್‌ನಲ್ಲಿ ಗೆಲುವು ಅನಿವಾರ್ಯವಾಗಿತ್ತು. ಮಂಗಳವಾರ ನಡೆದ 11ನೇ ಸುತ್ತಿನಲ್ಲಿ ರಷ್ಯಾದ ಕುರ ಯೆವಾ ಸೋಫಿಯಾ ಎದುರು ಗೆದ್ದರು.

ಬೆಂಗಳೂರಿನಲ್ಲಿ ನೆಲೆಸಿರುವ ಶ್ರವಣಬೆಳಗೊಳದ ಸಾಫ್ಟ್‌ವೇರ್ ಎಂಜಿನಿಯರ್‌ಗಳಾದ ಅನಿಲ್‌ಕುಮಾರ್‌ ಮತ್ತು ಅಖಿಲಾ ಅವರ ಪುತ್ರಿ ಚಾರ್ವಿ, ಇಲ್ಲಿನ ಹೆಗ್ಡೆನಗರದಲ್ಲಿರುವ ಕ್ಯಾಪಿಟಲ್‌ ಪಬ್ಲಿಕ್‌ ಸ್ಕೂಲ್‌ನಲ್ಲಿ 3ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ.

‘ಮಗಳ ಸಾಧನೆ ಖುಷಿ ತಂದಿದೆ. 83 ಸ್ಪರ್ಧಿಗಳಿದ್ದ ಕಣದಲ್ಲಿ ಸಾಕಷ್ಟು ಪೈಪೋಟಿಯ ನಡುವೆಯೂ ಆಕೆ ಗೆದ್ದಿದ್ದಾಳೆ’ ಎಂದು ಅನಿಲ್‌ಕುಮಾರ್‌ ಜಾರ್ಜಿಯದಿಂದ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಮುಂದಿನ ತಿಂಗಳು ಇಂಡೊನೇಷ್ಯಾದಲ್ಲಿ ನಡೆಯಲಿರುವ ಏಷ್ಯನ್‌ ಯೂತ್‌ ಚಾಂಪಿಯನ್‌ಷಿಪ್‌ನಲ್ಲೂ ಆಕೆ ದೇಶವನ್ನು ಪ್ರತಿನಿಧಿಸುವಳು. ನವೆಂಬರ್‌ನಲ್ಲಿ ಶ್ರೀಲಂಕಾದಲ್ಲಿ ನಡೆ ಯಲಿರುವ ಕಾಮನ್‌ವೆಲ್ತ್ ಚೆಸ್‌ ಕೂಟದಲ್ಲೂ ಪಾಲ್ಗೊಳ್ಳಲಿದ್ದಾಳೆ’ ಎಂದು ಅವರು ಹೇಳಿದರು.

ಕಳೆದ ವರ್ಷ ಪಶ್ಚಿಮ ಏಷ್ಯನ್‌ ಆನ್‌ಲೈನ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದಿದ್ದ ಚಾರ್ವಿ, ಈ ವರ್ಷದ ಆರಂಭದಿಂದಲೇ ಉತ್ತಮ ಪ್ರದರ್ಶನದಿಂದ ಸುದ್ದಿಯಾಗಿದ್ದರು. ಕ್ರಮವಾಗಿ ವಿಜಯವಾಡ ಮತ್ತು ಜಮ್ಮುವಿನಲ್ಲಿ ನಡೆದ 8 ವರ್ಷದೊಳಗಿನವರ ಹಾಗೂ 10 ವರ್ಷದೊಳಗಿನವರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದರು. ಜೂನ್‌ ತಿಂಗಳಲ್ಲಿ ನಡೆದ ರಾಜ್ಯ ಮುಕ್ತ ಚೆಸ್‌ ಟೂರ್ನಿ ಯಲ್ಲೂ ಚಾಂಪಿಯನ್‌ ಆಗಿದ್ದರು.

ಕರ್ನಾಟಕದ ಪ್ರಣವ್‌ ಆನಂದ್‌ ಕೆಲದಿನಗಳ ಹಿಂದೆಯಷ್ಟೇ 16 ವರ್ಷದೊಳಗಿನವರ ವಿಶ್ವ ಚೆಸ್‌ ಚಾಂಪಿ ಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದು, ಗ್ರ್ಯಾಂಡ್‌ ಮಾಸ್ಟರ್‌ ಪದವಿ ಪಡೆದುಕೊಂಡಿದ್ದರು. ಇದೀಗ ಚಾರ್ವಿ ಅವರೂ ವಿಶ್ವ ಚಾಂಪಿ ಯನ್‌ಷಿಪ್‌ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿತ್ತಿದ್ದಾರೆ.

ಶುಭಿ ಚಾಂ‍ಪಿಯನ್‌: ಬಟುಮಿಯಲ್ಲಿ ನಡೆದ ಟೂರ್ನಿಯಲ್ಲಿ ಭಾರತದ ಶುಭಿ ಗುಪ್ತಾ ಅವರು 12 ವರ್ಷದೊಳಗಿನವರ ವಿಭಾಗದಲ್ಲಿ ಚಾಂಪಿಯನ್‌ ಆದರು. ಗಾಜಿಯಾಬಾದ್‌ನ ಶುಭಿ, 11 ಸುತ್ತುಗಳಲ್ಲಿ 8.5 ಪಾಯಿಂಟ್ಸ್‌ ಗಳಿಸಿದರು. ಕೇರಳದ ಸಫಿನ್‌ ಸಫರುಲ್ಲಾ ಖಾನ್‌ 8 ವರ್ಷದೊಳಗಿನ ಓಪನ್‌ ವಿಭಾಗದಲ್ಲಿ ಕಂಚು ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.