ADVERTISEMENT

ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌: ಪಾಯಿಂಟ್‌ ಹಂಚಿಕೊಂಡ ಗುಕೇಶ್–ಲಿರೆನ್‌

ಸತತ ಮೂರನೇ ಡ್ರಾ

ಪಿಟಿಐ
Published 1 ಡಿಸೆಂಬರ್ 2024, 15:53 IST
Last Updated 1 ಡಿಸೆಂಬರ್ 2024, 15:53 IST
ಪಂದ್ಯಾನಂತರದ ಪತ್ರಿಕಾಗೋಷ್ಠಿಯಲ್ಲಿ ಎದುರಾದ ಸ್ವಾರಸ್ಯಕರ ಪ್ರಶ್ನೆಗೆ ಲಿರೆನ್‌– ಗುಕೇಶ್‌ ನಸುನಕ್ಕರು.
‌ಫಿಡೆ ವೆಬ್‌ಸೈಟ್‌ ಚಿತ್ರ
ಪಂದ್ಯಾನಂತರದ ಪತ್ರಿಕಾಗೋಷ್ಠಿಯಲ್ಲಿ ಎದುರಾದ ಸ್ವಾರಸ್ಯಕರ ಪ್ರಶ್ನೆಗೆ ಲಿರೆನ್‌– ಗುಕೇಶ್‌ ನಸುನಕ್ಕರು. ‌ಫಿಡೆ ವೆಬ್‌ಸೈಟ್‌ ಚಿತ್ರ   

ಸಿಂಗಪುರ: ಕಪ್ಪು ಕಾಯಿಗಳೊಂದಿಗೆ ಆಡಿದ ಚಾಲೆಂಜರ್ ಗುಕೇಶ್ ದೊಮ್ಮರಾಜು, ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌ ಫೈನಲ್‌ನ ಆರನೇ ಪಂದ್ಯವನ್ನು ಹಾಲಿ ಚಾಂಪಿಯನ್ ಡಿಂಗ್ ಲಿರೆನ್ ಜೊತೆ ಭಾನುವಾರ ಡ್ರಾ ಮಾಡಿಕೊಂಡರು. ಇದು ಸತತ ಮೂರನೇ ಡ್ರಾ ಆಗಿದ್ದು, ಸದ್ಯ ಇಬ್ಬರೂ ತಲಾ ಮೂರು ಪಾಯಿಂಟ್‌ ಹೊಂದಿದ್ದಾರೆ.

ಮೊದಲು 7.5 ಪಾಯಿಂಟ್ಸ್ ತಲುಪಿದವರು ಚಾಂಪಿಯನ್ ಪಟ್ಟಕ್ಕೇರಲಿದ್ದಾರೆ. ಇನ್ನೂ ಎಂಟು ಪಂದ್ಯಗಳು ಉಳಿದಿದ್ದು ಒಂದು ವೇಳೆ  ಸ್ಕೋರ್ 7–7 ಸಮನಾದಲ್ಲಿ ಅಲ್ಪಾವಧಿಯ ಟೈಬ್ರೇಕ್ ಪಂದ್ಯಗಳ ಮೂಲಕ ವಿಜೇತರನ್ನು ನಿರ್ಧರಿಸಲಾಗುತ್ತದೆ.‌

ಭಾನುವಾರ ಚಾಂಪಿಯನ್‌ಷಿಪ್‌ಗೆ ಎರಡನೇ ವಿಶ್ರಾಂತಿ ದಿನವಾಗಿದ್ದು, ಸೋಮವಾರ ಏಳನೇ ಪಂದ್ಯದೊಡನೆ ಸೆಣಸಾಟ ಮುಂದುವರಿಯಲಿದೆ.

ADVERTISEMENT

32 ವರ್ಷ ವಯಸ್ಸಿನ ಲಿರೆನ್‌ ಮೊದಲ ಪಂದ್ಯವನ್ನು, 18 ವರ್ಷ ವಯಸ್ಸಿನ ಗುಕೇಶ್‌ ಮೂರನೇ ಪಂದ್ಯವನ್ನು ಗೆದ್ದುಕೊಂಡಿದ್ದರು. ಉಳಿದ ನಾಲ್ಕು (2, 4,5,6) ಪಂದ್ಯಗಳಲ್ಲಿ ಇಬ್ಬರೂ ಪಾಯಿಂಟ್‌ ಹಂಚಿಕೊಂಡಿದ್ದರೆ.

ಆರನೇ ಪಂದ್ಯದಲ್ಲಿ 46 ನಡೆಗಳ ಬಳಿಕ ಇಬ್ಬರೂ ‘ಡ್ರಾ’ಕ್ಕೆ ಒಲವು ತೋರಿದರು. 14 ಪಂದ್ಯಗಳ ಫೈನಲ್ ಈಗ ಅರ್ಧಹಾದಿಯತ್ತ ಕಾಲಿಟ್ಟಿದೆ. ಆಟಗಾರರು ಈ ಹಂತದಲ್ಲಿ ಯಾವ ತಂತ್ರಕ್ಕೆ ಹೋಗುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ.

ಚಾಂಪಿಯನ್‌ಷಿಪ್‌ಗೆ ಮೊದಲು ‘ಉತ್ತಮ ಫಾರ್ಮ್‌ನಲ್ಲಿರುವ ಗುಕೇಶ್‌ ಪ್ರಶಸ್ತಿಗೆ ನೆಚ್ಚಿನ ಆಟಗಾರ. ಲಿರೆನ್‌ ಈಗ ಹಿಂದಿನ ಲಯದಲ್ಲಿಲ್ಲ’ ಎಂದು ಹಿರಿಯ ಆಟಗಾರರು ವಿಶ್ಲೇಷಿಸಿದ್ದರು. ಆದರೆ ಈಗ ಲಿರೆನ್ ಕೂಡ ವಿಶ್ವಾಸ ಹೆಚ್ಚಿಸುತ್ತ ಸಾಗಿದ್ದಾರೆ.

ಬಿಳಿ ಕಾಯಿಗಳೊಂದಿಗೆ ಆಡಿದ ಲಿರೆನ್‌, ಆರಂಭದಲ್ಲಿ ಎದುರಾಗಬಹುದಾದ ಸಮಸ್ಯೆಗಳಿಗೆ ಬೇಗ ಮದ್ದು  ಕಂಡುಕೊಂಡರು. ಮೊದಲ 20 ನಡೆಗಳನ್ನು ಕೇವಲ ಏಳು ನಿಮಿಷಗಳಲ್ಲಿ ಇಟ್ಟರು. ನೈಟ್‌, ಬಿಷಪ್‌ಗಳು ಬೋರ್ಡ್‌ನಿಂದ ಹೊರಬಿದ್ದವು. ಕೊನೆಗೆ ಇಬ್ಬರ ಬಳಿಯೂ ಜೋಡಿ ರೂಕ್‌ಗಳ ಜೊತೆಗೆ ತಲಾ ನಾಲ್ಕು ಕಾಲಾಳುಗಳು ಉಳಿದಿದ್ದವು. ಹೀಗಾಗಿ ಪಂದ್ಯ ಡ್ರಾ ಹಾದಿಹಿಡಿಯುವುದು ನಿಶ್ಚಿತವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.