ADVERTISEMENT

ವಿಶ್ವ ಜೂನಿಯರ್‌ ಟೇಬಲ್‌ ಟೆನಿಸ್‌: ಕ್ವಾರ್ಟರ್‌ ಫೈನಲ್‌ಗೆ ಮಾನವ್‌

ಪಿಟಿಐ
Published 8 ಡಿಸೆಂಬರ್ 2018, 16:51 IST
Last Updated 8 ಡಿಸೆಂಬರ್ 2018, 16:51 IST
ಮಾನವ್‌ ಠಕ್ಕರ್‌
ಮಾನವ್‌ ಠಕ್ಕರ್‌   

ನವದೆಹಲಿ: ಅಪೂರ್ವ ಆಟ ಆಡಿದ ಭಾರತದ ಮಾನವ್‌ ಠಕ್ಕರ್‌, ಆಸ್ಟ್ರೇಲಿಯಾದ ಬೆಂಡಿಗೊದಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಶನಿವಾರ ನಡೆದ ಬಾಲಕರ ಸಿಂಗಲ್ಸ್‌ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ ಹೋರಾಟದಲ್ಲಿ ಮಾನವ್‌ 11–7, 8–11, 11–4, 9–11, 14–12, 11–1ರಲ್ಲಿ ಚೀನಾ ತೈಪೆಯ ಫೆಂಗ್‌ ಯಿ ಹ್ಸಿನ್‌ ಅವರನ್ನು ಪರಾಭವಗೊಳಿಸಿದರು.

ಇದಕ್ಕೂ ಮೊದಲು ನಡೆದಿದ್ದ ಹಣಾಹಣಿಯಲ್ಲಿ ಮಾನವ್‌ 11–9, 11–6, 11–3, 11–5ರಲ್ಲಿ ಕೆನಡಾದ ಜೆರೆಮಿ ಹಾಜಿನ್‌ ಅವರನ್ನು ಸೋಲಿಸಿದ್ದರು.

ADVERTISEMENT

ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಶ್ರೇಯಾಂಕ ಹೊಂದಿರುವ ಮಾನವ್‌, ಮೊದಲ ನಾಲ್ಕು ಗೇಮ್‌ಗಳಲ್ಲಿ ಫೆಂಗ್‌ ಅವರಿಂದ ತೀವ್ರ ಸ್ಪರ್ಧೆ ಎದುರಿಸಿದರು. ಹೀಗಾಗಿ 2–2 ಸಮಬಲ ಕಂಡುಬಂತು. ಐದನೇ ಗೇಮ್‌ನಲ್ಲೂ ಉಭಯ ಆಟಗಾರರು ಜಿದ್ದಾಜಿದ್ದಿನ ಪೈಪೋಟಿ ನಡೆಸಿದರು. ರೋಚಕ ಘಟ್ಟದಲ್ಲಿ ದಿಟ್ಟತನದಿಂದ ಹೋರಾಡಿದ ಮಾನವ್‌, ಗೇಮ್‌ ಜಯಿಸಿ 3–2 ಮುನ್ನಡೆ ಗಳಿಸಿದರು. ಆರನೇ ಗೇಮ್‌ನಲ್ಲೂ ಭಾರತದ ಆಟಗಾರ ಮೋಡಿ ಮಾಡಿದರು. ಚುರುಕಿನ ಸರ್ವ್‌ ಮತ್ತು ಟಾಪ್‌ ಸ್ಪಿನ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದ ಭಾರತದ ಆಟಗಾರ ನಿರಾಯಾಸವಾಗಿ ಗೆಲುವಿನ ತೋರಣ ಕಟ್ಟಿದರು.

ಕ್ವಾರ್ಟರ್‌ ಫೈನಲ್‌ನಲ್ಲಿ ಮಾನವ್‌, ಚೀನಾದ ಕ್ಸಿಯಾಂಗ್‌ ಪೆಂಗ್‌ ಎದುರು ಸೆಣಸಲಿದ್ದಾರೆ.

ಬಾಲಕರ ಡಬಲ್ಸ್‌ ವಿಭಾಗದಲ್ಲಿ ಮಾನವ್‌ ಮತ್ತು ಮಾನುಷ್‌ ಶಾ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟರು.

ಹದಿನಾರರ ಘಟ್ಟದ ಹಣಾಹಣಿಯಲ್ಲಿ ಆರನೇ ಶ್ರೇಯಾಂಕದ ಜೋಡಿ ಮಾನವ್‌ ಮತ್ತು ಮಾನುಷ್‌ 12–14, 11–8, 11–6, 11–13, 11–7ರಲ್ಲಿ ಅರ್ಜೆಂಟೀನಾದ ಮಾರ್ಟಿನ್‌ ಬೆಂಟಾಂಕೋರ್‌ ಮತ್ತು ಸ್ಯಾಂಟಿಯಾಗೊ ಲೋರೆಂಜ್‌ ಅವರನ್ನು ಮಣಿಸಿತು.

ಮುಂದಿನ ಸುತ್ತಿನಲ್ಲಿ ಭಾರತದ ಜೋಡಿ, ಚೀನಾ ತೈಪೆಯ ಫೆಂಗ್‌ ಯಿ ಹ್ಸಿನ್‌ ಮತ್ತು ಲಿ ಹ್ಸಿನ್‌ ಯಾಂಗ್ ವಿರುದ್ಧ ಹೋರಾಡಲಿದೆ.

ಈ ವಿಭಾಗದಲ್ಲಿ ಕಣದಲ್ಲಿದ್ದ ಜೀತ್‌ ಚಂದ್ರ ಮತ್ತು ಸ್ನೇಹಿತ್‌ ಸುರವಜ್ಜುಲ ಅವರು ಎರಡನೇ ಸುತ್ತಿನಲ್ಲಿ ಸೋತರು.

ರುಮೇನಿಯಾದ ಎರಡನೇ ಶ್ರೇಯಾಂಕದ ಆಟಗಾರರಾದ ಕ್ರಿಸ್ಟಿಯನ್‌ ಪ್ಲೆಟಾ ಮತ್ತು ರೇರ್ಸ್‌ ಸಿಪೋಸ್‌ 11–7, 11–3, 9–11, 9–11, 12–10ರಲ್ಲಿ ಜೀತ್‌ ಮತ್ತು ಸ್ನೇಹಿತ್‌ ಎದುರು ಗೆದ್ದರು.

ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಪಂದ್ಯಗಳಲ್ಲಿ ಮಾನುಷ್‌ ಮತ್ತು ಜೀತ್ ಚಂದ್ರ ನಿರಾಸೆ ಕಂಡರು.

ಜೀತ್‌ 8–11, 5–11, 8–11, 8–11ರಲ್ಲಿ ರುಮೇನಿಯಾದ ಕ್ರಿಸ್ಟಿಯನ್‌ ಪ್ಲೆಟಾ ಎದುರೂ, ಮಾನುಷ್‌ 11–6, 9–11, 11–4, 5–11, 4–11, 7–11ರಲ್ಲಿ ಸಿಂಗಪುರದ ಪೆಂಗ್ ಯೀವ್‌ ಎನ್‌ ಕೊಯೆನ್‌ ವಿರುದ್ಧವೂ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.