ADVERTISEMENT

ವಿಶ್ವ ಜೂನಿಯರ್ ಕುಸ್ತಿ ಚಾಂಪಿಯನ್‌ಷಿಪ್‌: ಸೆಮಿಫೈನಲ್‌ಗೆ ರವಿಂದರ್‌

ಪಿಟಿಐ
Published 17 ಆಗಸ್ಟ್ 2021, 11:34 IST
Last Updated 17 ಆಗಸ್ಟ್ 2021, 11:34 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಯುಫಾ, ರಷ್ಯಾ: ಅದ್ಭುತ ರಕ್ಷಣಾ ತಂತ್ರಗಳನ್ನು ತೋರಿದ ರವಿಂದರ್ ಸಿಂಗ್ ಅವರು ವಿಶ್ವ ಜೂನಿಯರ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಸೋಮವಾರ ತಡರಾತ್ರಿ ನಡೆದ ಕ್ವಾರ್ಟರ್‌ಫೈನಲ್‌ ಬೌಟ್‌ನಲ್ಲಿ ಅವರು ಬಹರೇನ್‌ನ ಅಲಿಬೆಗ್‌ ಅಲಿಬೆಗೊವ್ ಅವರನ್ನು ಪರಾಭವಗೊಳಿಸಿದರು.

61 ಕೆಜಿ ವಿಭಾಗದ ಎಂಟರಘಟ್ಟದ ಹಣಾಹಣಿ ಜಿದ್ದಾಜಿದ್ದಿನಿಂದ ಕೂಡಿತ್ತು. ಅತ್ಯುತ್ತಮ ಕೌಶಲಗಳು ರವಿಂದರ್ ಅವರಿಗೆ ನೆರವಾದವು. ಅಲಿಬೆಗ್ ಒಂದು ಹಂತದಲ್ಲಿ ರವಿಂದರ್‌ ಅವರ ಎರಡೂ ಕಾಲುಗಳನ್ನು ಹಿಡಿತಕ್ಕೆ ಪಡೆದಿದ್ದರು. ಆದರೆ ಶಕ್ತಿ ಮತ್ತು ಯುಕ್ತಿಗಳನ್ನು ಪ್ರಯೋಗಿಸಿದ ಭಾರತದ ಕುಸ್ತಿಪಟು ಎದುರಾಳಿಯನ್ನು 6–0ಯಿಂದ ಮಣಿಸುವಲ್ಲಿ ಯಶಸ್ವಿಯಾದರು.

ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಬೆಲಾರಸ್‌ನ ಇವಾನ್‌ ರಮಿಕಾ ಅವರನ್ನು 5–2ರಿಂದ ಭಾರತದ ಪೈಲ್ವಾನ ಚಿತ್ ಮಾಡಿದ್ದರು.

ADVERTISEMENT

ನಾಲ್ಕರ ಘಟ್ಟದ ಬೌಟ್‌ನಲ್ಲಿ ರವಿಂದರ್‌ ಅವರು ಅರ್ಮೇನಿಯಾದ ಲೆವಿಕ್‌ ಮಿಕಾಯೆಲ್ಯಾನ್‌ ಅವರನ್ನು ಎದುರಿಸುವರು. 2019ರಲ್ಲಿ ನಡೆದ 23 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ರವಿಂದರ್‌ ಬೆಳ್ಳಿ ಪದಕ ಗೆದ್ದುಕೊಂಡಿದ್ದರು.

ಈ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಿರುವ ಭಾರತದ ಯಶ್‌ (74 ಕೆಜಿ ವಿಭಾಗ) ಅವರು ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಮುಗ್ಗರಿಸಿದರೆ, ವೆಟಲ್‌ ಶೆಲ್ಕಲೆ (86 ಕೆಜಿ), ಪೃಥ್ವಿರಾಜ್ ಪಾಟೀಲ್‌ (92 ಕೆಜಿ), ಅನಿರುದ್ಧ (125 ಕೆಜಿ) ಅವರು ಎಂಟರಘಟ್ಟದ ಹಣಾಹಣಿಗಳಲ್ಲಿ ಎಡವಿದರು.

ಶುಭಮ್‌ (57 ಕೆಜಿ) ಮತ್ತು ರೋಹಿತ್‌ (65 ಕೆಜಿ) ಅವರು ರಿಪೇಚ್‌ ಸುತ್ತಿನಲ್ಲಿ ಸೋಲನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.