ADVERTISEMENT

ಸೆಮಿಫೈನಲ್‌ಗೆ ಸ್ವಾತಿ, ಅನನ್ಯಾ

ಕರ್ನಾಟಕ ಕುಸ್ತಿ ಹಬ್ಬ: ಬಾಲಕಿಶೋರಿ ಪಟ್ಟಕ್ಕಾಗಿ ಕುತೂಹಲದ ಪೈಪೋಟಿ

ಪ್ರಮೋದ್
Published 23 ಫೆಬ್ರುವರಿ 2020, 19:49 IST
Last Updated 23 ಫೆಬ್ರುವರಿ 2020, 19:49 IST
ಧಾರವಾಡದಲ್ಲಿ ನಡೆಯುತ್ತಿರುವ ಕರ್ನಾಟಕ ಕುಸ್ತಿ ಹಬ್ಬದಲ್ಲಿ ಭಾನುವಾರ ಐಶ್ವರ್ಯಾ ಕರಿಗಾರ ಎದುರು (ನೀಲಿ ಪೋಷಾಕು) ಗೆಲುವು ಪಡೆದ ಗದುಗಿನ ಪ್ರೇಮಾ ಹುಚ್ಚಣ್ಣನವರ ಸೆಣಸಾಟದ ನೋಟ –ಪ್ರಜಾವಾಣಿ ಚಿತ್ರ/ಬಿ.ಎಂ. ಕೇದಾರನಾಥ
ಧಾರವಾಡದಲ್ಲಿ ನಡೆಯುತ್ತಿರುವ ಕರ್ನಾಟಕ ಕುಸ್ತಿ ಹಬ್ಬದಲ್ಲಿ ಭಾನುವಾರ ಐಶ್ವರ್ಯಾ ಕರಿಗಾರ ಎದುರು (ನೀಲಿ ಪೋಷಾಕು) ಗೆಲುವು ಪಡೆದ ಗದುಗಿನ ಪ್ರೇಮಾ ಹುಚ್ಚಣ್ಣನವರ ಸೆಣಸಾಟದ ನೋಟ –ಪ್ರಜಾವಾಣಿ ಚಿತ್ರ/ಬಿ.ಎಂ. ಕೇದಾರನಾಥ   

ಧಾರವಾಡ: ಕ್ಷಣಕ್ಷಣಕ್ಕೂ ಕುತೂಹಲ, ಫಲಿತಾಂಶ ಏನಾಗಲಿದೆಯೋ ಎನ್ನುವ ಕಾತರ, ಜನರ ಅಭಿಮಾನದ ಚಪ್ಪಾಳೆಯ ನಡುವೆ ನಡೆಯುತ್ತಿರುವ ಕರ್ನಾಟಕ ಕುಸ್ತಿ ಹಬ್ಬದಲ್ಲಿ ಬೆಳಗಾವಿಯ ಸ್ವಾತಿ ಪಾಟೀಲ, ದಕ್ಷಿಣ ಕನ್ನಡದ ಅನ್ಯು ಎ. ಶೆಟ್ಟಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಎಸ್‌.ಎ. ಶ್ವೇತಾ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಕರ್ನಾಟಕ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಹಬ್ಬದಲ್ಲಿ ಭಾನುವಾರ 14 ವರ್ಷದ ಒಳಗಿನವರ (46 ಕೆ.ಜಿ. ಒಳಗಿನವರು) ವಿಭಾಗದಲ್ಲಿ ಯುವ ಪೈಲ್ವಾನರು ಈ ಸಾಧನೆ ಮಾಡಿದರು.

ಕ್ವಾರ್ಟರ್‌ ಫೈನಲ್‌ ಪಂದ್ಯಗಳಲ್ಲಿ ಸ್ವಾತಿ ಅವರು ಪ್ರಣೀಲ್ ಪವಾರ್‌ ಮೇಲೂ, ಅನ್ಯು ಶೆಟ್ಟಿ ಬಾಗಲಕೋಟೆಯ ಮೇಹಾ ಎ.ಎಸ್‌. ವಿರುದ್ಧವೂ, ಶ್ವೇತಾ ಅವರು ಆಲ್ಮಾ ಲತೀಶಾ ಪಿಂಟೊ ಎದುರೂ ಗೆಲುವು ಪಡೆದರು.

ADVERTISEMENT

ಇದೇ ವಯೋಮಾನದ39 ಕೆ.ಜಿ.ಬಾಲಕಿಯರ ವಿಭಾಗದಲ್ಲಿ ಬಾಗಲಕೋಟೆಯ ಭಾಗ್ಯಶ್ರೀ, ಕಲ್ಪನಾ ಕೆಂಪಣ್ಣವರ, ಬೆಳಗಾವಿಯ ಸನಿಕಾ ಪಾಟೀಲ, ಶೃತಿಕಾ ಸಿ.ಡಿ. ಹಾಗೂ 33 ಕೆ.ಜಿ.ವಿಭಾಗದಲ್ಲಿ ಗದಗಿನ ತ್ರಿವೇಣಿ ಮುರ್ಕಾಡಿ ನಾಲ್ಕರ ಘಟ್ಟ ಪ್ರವೇಶಿಸಿದ್ದಾರೆ. ಮಹಿಳೆಯರ 50 ಕೆ.ಜಿ. ವಿಭಾಗ ದಲ್ಲಿ ಸೋನಿಯಾ ಜಾಧವ್ ಗೆಲುವಿನ ನಗು ಬೀರಿದರು. ಭರವಸೆಯ ಸೋನಿಯಾ 6–1 ಪಾಯಿಂಟ್‌ಗಳಿಂದ ಮಮತಾ ಕೇಲೋಜಿ ಎದುರು ಜಯ ಸಾಧಿಸಿದರು. ಮಹಿಳೆಯರ 53 ಕೆ.ಜಿ. ವಿಭಾಗದಲ್ಲಿ ಗದುಗಿನ ಪ್ರೇಮಾ
ಹುಚ್ಚಣ್ಣನವರ, ಐಶ್ವರ್ಯಾ ಕರಿಗಾರ ವಿರುದ್ಧ ಗೆಲುವು ಪಡೆದರು. ಮಹಿಳಾ ಕೇಸರಿ ಪ್ರಶಸ್ತಿಗಾಗಿ 50 ಕೆ.ಜಿ. ವಿಭಾಗದ ಲೀಗ್‌ ಹಂತದ ಪೈಪೋಟಿಯಲ್ಲಿಉತ್ತರ ಕನ್ನಡದ ಆತ್ಮಶ್ರೀ ವಿರುದ್ಧ ಗದುಗಿನ ಶ್ವೇತಾ ಜಯ ಗಳಿಸಿದರು.

17 ವರ್ಷದ ಒಳಗಿನವರ ಬಾಲಕಿಯರ ‘ಎ’ ಗುಂಪಿನ ಪಂದ್ಯದಲ್ಲಿ ಜಾಹ್ನವಿ ಮಸಳೆ 5–0ರಲ್ಲಿ ಮೇಘನಾ ಜೈನ್‌ ಮೇಲೂ, ಅರ್ಚನಾ ಪಟ್ಟೇದಾರ 5–0ರಲ್ಲಿ ಬಿ.ಎನ್‌. ಪ್ರತೀಕ್ಷಾ ವಿರು ದ್ಧವೂ, ಇದೇ ವಯೋಮಾನದ ಬಾಲಕರ 38 ಕೆ.ಜಿ. ಒಳಗಿನವರ ವಿಭಾಗ ದಲ್ಲಿ ಧಾರವಾಡದ ಮಲ್ಲಪ್ಪ ಯಲ್ಲಟ್ಟಿ 10–0ರಲ್ಲಿ ಆಕಾಶ್‌ ಎದುರೂ ಗೆದ್ದರು.

ಇನ್ನು ಎರಡು ದಿನ ನಡೆಯಲಿರುವ ಸ್ಪರ್ಧೆಗಳಲ್ಲಿ ಕರ್ನಾಟಕ ಕೇಸರಿ, ಮಹಿಳಾ ಕರ್ನಾಟಕ ಕೇಸರಿ, ಕರ್ನಾಟಕ ಕಿಶೋರ, ಕರ್ನಾಟಕ ಕಿಶೋರಿ, ಬಾಲಕ ಮತ್ತು ಬಾಲಕಿಯರಿಗಾಗಿ ಪ್ರತ್ಯೇಕವಾಗಿ ಬಾಲಕೇಸರಿ ಪ್ರಶಸ್ತಿಗಳಿಗಾಗಿ ಹಣಾಹಣಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.