ADVERTISEMENT

ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ಗೆ ಅಮನ್‌ ಅರ್ಹತೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2023, 15:36 IST
Last Updated 26 ಆಗಸ್ಟ್ 2023, 15:36 IST
ಅಮನ್‌ ಸೆಹ್ರಾವತ್‌
ಅಮನ್‌ ಸೆಹ್ರಾವತ್‌   

ಪಟಿಯಾಲ: ಪುರುಷರ 57 ಕೆ.ಜಿ ಫ್ರೀಸ್ಟೈಲ್‌ ವಿಭಾಗದಲ್ಲಿ ತಮ್ಮ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ ಅಮನ್‌ ಸೆಹ್ರಾವತ್‌ ಅವರು ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಿಟ್ಟಿಕೊಂಡರು.

ಬೆಲ್‌ಗ್ರೇಡ್‌ನಲ್ಲಿ ಸೆ.16 ರಿಂದ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್‌ಗೆ ಭಾರತ ತಂಡದ ಆಯ್ಕೆಗೆ ನಡೆದ ಎರಡು ದಿನಗಳ ಟ್ರಯಲ್ಸ್‌ ಶನಿವಾರ ಕೊನೆಗೊಂಡಿತು. 57 ಕೆ.ಜಿ ವಿಭಾಗದ ಫೈನಲ್‌ನಲ್ಲಿ ಅಮನ್‌ ಅವರು ಅತಿಶ್‌ ತೋಡ್ಕರ್ ವಿರುದ್ಧ ಗೆದ್ದು ಅರ್ಹತೆ ಪಡೆದರು.

ಆಕಾಶ್‌ ದಹಿಯಾ ಅವರು 61 ಕೆ.ಜಿ. ವಿಭಾಗ ಮತ್ತು ಅನುಜ್‌ ಕುಮಾರ್‌ ಅವರು 65 ಕೆ.ಜಿ. ವಿಭಾಗದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ. 65 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸುವ ಬಜರಂಗ್ ಪೂನಿಯಾ ಅವರು ಏಷ್ಯನ್‌ ಗೇಮ್ಸ್‌ಗೆ ವಿದೇಶದಲ್ಲಿ ಸಿದ್ಧತೆ ನಡೆಸುವ ಉದ್ದೇಶದಿಂದ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದರು.

ADVERTISEMENT

ಏಷ್ಯನ್‌ ಗೇಮ್ಸ್‌ ಮತ್ತು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ದೇಶವನ್ನು ಪ್ರತಿನಿಧಿಸುವ ಅವಕಾಶ ಕಳೆದುಕೊಂಡ ವಿಶಾಲ್‌ ಕಾಲೀರಮನ್‌ ಅವರು ನಿರಾಸೆ ಅನುಭವಿಸಿದರು.

65 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸುವ ವಿಶಾಲ್‌, ಏಷ್ಯನ್‌ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಅಗ್ರಸ್ಥಾನ ಪಡೆದಿದ್ದರು. ಆದರೆ ಬಜರಂಗ್ ಅವರಿಗೆ ನೇರ ಪ್ರವೇಶ ನೀಡಿದ್ದರಿಂದ ವಿಶಾಲ್ ಅವರ ಏಷ್ಯನ್‌ ಗೇಮ್ಸ್‌ ಕನಸು ಭಗ್ನಗೊಂಡಿತ್ತು. ಇದೀಗ ವಿಶ್ವ ಚಾಂಪಿಯನ್‌ಷಿಪ್‌ಗೂ ಅರ್ಹತೆ ಗಳಿಸಲು ವಿಫಲರಾದರು.

ಹಿಂದೆ ಸರಿದ ದೀಪಕ್: ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಹಾಗೂ ಬರ್ಮಿಂಗ್‌ಹ್ಯಾಂ ಕಾಮನ್‌ವೆಲ್ತ್‌ ಕೂಟದಲ್ಲಿ ಚಿನ್ನ ಜಯಿಸಿದ್ದ ದೀಪಕ್ ಪೂನಿಯಾ ಅವರು ಪುರುಷರ 86 ಕೆ.ಜಿ. ವಿಭಾಗದ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಲಿಲ್ಲ. ಏಷ್ಯನ್‌ ಗೇಮ್ಸ್‌ಗೆ ಸಜ್ಜಾಗಲು ಅವರು ತರಬೇತಿಗಾಗಿ ವಿದೇಶಕ್ಕೆ ತೆರಳಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಈ ವಿಭಾಗದಲ್ಲಿ ಸಂದೀಪ್‌ ಸಿಂಗ್‌ ಅರ್ಹತೆ ಗಳಿಸಿದರು.

ಪೃಥ್ವಿರಾಜ್‌ ಪಾಟೀಲ್ (92 ಕೆ.ಜಿ), ಸಾಹಿಲ್ (97 ಕೆ.ಜಿ) ಮತ್ತು ಸುಮಿತ್ ಮಲಿಕ್ (125 ಕೆ.ಜಿ.) ಅವರು ವಿವಿಧ ವಿಭಾಗಗಳಲ್ಲಿ ಅರ್ಹತೆ ಪಡೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.