
ವಡೋದರಾ: ಕರ್ನಾಟಕದ ಉದಯೋನ್ಮುಖ ಆಟಗಾರರಾದ ಶಾರ್ವಿಲ್ ಕಂಬ್ಳೇಕರ್ ಹಾಗೂ ಸಾಕ್ಷ್ಯಾ ಸಂತೋಷ್ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಟೇಬಲ್ ಟೆನಿಸ್ ಯೂತ್ ಕಂಟೆಂಡರ್‌ನಲ್ಲಿ ಕ್ರಮವಾಗಿ 11 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಸಿಂಗಲ್ಸ್ ರನ್ನರ್–ಅಪ್ ಪ್ರಶಸ್ತಿ ಗೆದ್ದುಕೊಂಡರು.
ಸೋಮವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸಾಕ್ಷ್ಯಾ 13–15, 8–11, 10–12 ರಿಂದ ಮಹಾರಾಷ್ಟ್ರದ ಆದ್ಯಾ ಬಿ. ಎದುರು ಸೋಲನುಭವಿಸಿದರು. ಶಾರ್ವಿಲ್ 8–11, 6–11, 13–11, 4–11ರಿಂದ ರಾಜ್‌ದೀಪ್ ಬಿಸ್ವಾಸ್ (ಪಶ್ಚಿಮ ಬಂಗಾಳ) ಎದುರು ಮಣಿದರು.
15 ವರ್ಷದೊಳಗಿನ ಮಿಶ್ರ ಡಬಲ್ಸ್‌ನಲ್ಲಿ ರೇಯಾನ್ಶ್ ಜಲಾನ್ ಹಾಗೂ ತನಿಷ್ಕಾ ಕಪಿಲ್ ಕಾಲಭೈರವ ಜೋಡಿ ರನ್ನರ್–ಅಪ್ ಆಯಿತು. ಕರ್ನಾಟಕದ ಈ ಜೋಡಿ, ಫೈನಲ್ ಹಣಾಹಣಿಯಲ್ಲಿ 8–11, 8–11, 3–11ರಿಂದ ವಿವಾನ್ ಡಿ. ಹಾಗೂ ನೈಶಾ ಆರ್. (ಗುಜರಾತ್–ಮಹಾರಾಷ್ಟ್ರ) ವಿರುದ್ಧ ಪರಾಭವಗೊಂಡಿತು.
15 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ವಿವಾನ್ 9–11, 11–9, 11–6, 11–3ರಿಂದ ರಿಶಾನ್ ಚಟ್ಟೋಪಾಧ್ಯಾಯ ಅವರನ್ನು ಮಣಿಸಿ, ಕ್ವಾರ್ಟರ್‌ಫೈನಲ್‌ಗೆ ಮುನ್ನಡೆದರು. ಬಾಲಕಿಯರ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ಆಟಗಾರ್ತಿ ಅಂಕೊಲಿಕಾ ಚಕ್ರವರ್ತಿ, ಎರಡನೇ ಶ್ರೇಯಾಂಕದ ಆಟಗಾರ್ತಿ ನೈಶಾ ಹಾಗೂ ಕನ್ನಡತಿ ತನಿಷ್ಕಾ ಅವರು ತಮ್ಮ ತಮ್ಮ ಪಂದ್ಯಗಳಲ್ಲಿ ಗೆಲುವಿನೊಂದಿಗೆ ಎಂಟರ ಘಟ್ಟ ಪ್ರವೇಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.