ADVERTISEMENT

ಕ್ವಾರ್ಟರ್‌ಫೈನಲ್‌ಗೆ ಅರುಂಧತಿ, ಚಾನು

ವಿಶ್ ಯೂತ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಭಾರತದ ಮೂವರಿಗೆ ಮುನ್ನಡೆ

ಪಿಟಿಐ
Published 16 ಏಪ್ರಿಲ್ 2021, 13:48 IST
Last Updated 16 ಏಪ್ರಿಲ್ 2021, 13:48 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಖೇಲೊ ಇಂಡಿಯಾ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆ ಅರುಂಧತಿ ಚೌಧರಿ (69 ಕೆಜಿ ವಿಭಾಗ) ಹಾಗೂ ಬೇಬಿರೋಜಿಸನಾ ಚಾನು (51 ಕೆಜಿ) ಅವರು ಅವರು ಪೋಲೆಂಡ್‌ನ ಕಿಯೆಲ್ಸೆಯಲ್ಲಿ ನಡೆಯುತ್ತಿರುವ ವಿಶ್ವ ಯೂತ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೆ ಕಾಲಿಟ್ಟರು.

ಶುಕ್ರವಾರ ನಡೆದ ಇತರ ಬೌಟ್‌ಗಳಲ್ಲಿ ಭಾರತದ ಆಕಾಶ್‌ ಗೂರ್ಖಾ (ಪುರುಷರ 60 ಕೆಜಿ ವಿಭಾಗ), ಸುಮಿತ್‌ (69 ಕೆಜಿ) ಹಾಗೂ ಗೀತಿಕಾ (ಮಹಿಳೆಯರ 48 ಕೆಜಿ ವಿಭಾಗ) ಗೆದ್ದು ಎರಡನೇ ಸುತ್ತು ತಲುಪಿದರು. ಆದರೆ ವಿಕಾಸ್‌ (ಪುರುಷರ 52 ಕೆಜಿ) ಹಾಗೂ ಆರ್ಷಿ ಖಾನಂ (ಮಹಿಳೆಯರ 54 ಕೆಜಿ) ಅವರ ಅಭಿಯಾನ ಎರಡನೇ ಸುತ್ತುಗಳಲ್ಲೇ ಅಂತ್ಯವಾಯಿತು.

ಖೇಲೊ ಇಂಡಿಯಾ ಕ್ರೀಡಾಕೂಟದಲ್ಲಿ ಮೂರು ಬಾರಿ ಚಿನ್ನ ಗೆದ್ದಿರುವ ಅರುಂಧತಿ ಅವರು ಪ್ರೀಕ್ವಾರ್ಟರ್‌ ಹಣಾಹಣಿಯಲ್ಲಿ 5–0ಯಿಂದ ಕೊಲಂಬಿಯಾದ ದೆಯಾನಿರಾ ಕ್ಯಾಸಸ್‌ ಜೆರೆಜ್ ಎದುರು ಗೆದ್ದರು. ಎಂಟರಘಟ್ಟದ ಪಂದ್ಯದಲ್ಲಿ ಅವರು ಉಕ್ರೇನ್‌ನ ಆ್ಯನಾ ಸೆಜ್ಕೊ ಎದುರು ಸೆಣಸುವರು.

ADVERTISEMENT

ಬೇಬಿರೋಜಿಸನಾ ಅವರು ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಈಸ್ಟೋನಿಯಾದ ಡಯಾನ ಗೋರಿಸ್ನಾಜ ಎದುರು ಗೆದ್ದರು.

ಆಕಾಶ್ ಅವರು 5–0ಯಿಂದ ಜರ್ಮನಿಯ ಎನ್ರಿಕೊ ಕ್ಲಿಯೇಷ್‌ ಅವರನ್ನು ಮಣಿಸಿದರೆ, ವೆನೆಜುವೆಲಾದ ರಫೇಲ್ ಅಂಟೋನಿಯೊ ಪೆರ್ಡೊಮೊ ಅವರ ಸವಾಲನ್ನು ಸುಮಿತ್ ಮೀರಿದರು. ಗೀತಿಕಾ ಅವರು ರಷ್ಯಾದ ಡಯಾನಾ ಎರ್ಮಕೊವಾ ಎದುರು ಗೆದ್ದು ಮುಂದಿನ ಸುತ್ತಿಗೆ ಮುನ್ನಡೆದರು.

ಗುರುವಾರ ನಡೆದ ಬೌಟ್‌ಗಳಲ್ಲಿ ವಿಕಾಸ್‌ ಅವರು ಮಂಗೋಲಿಯಾದ ಸುಖಬಾತ್ ಎನ್‌ಕೋಜೊರೈಟ್‌ ಎದುರು 1–4ರಿಂದ, ಆರ್ಷಿ ಅವರು ಇಷ್ಟೇ ಅಂತರದಿಂದ ಉಜ್ಬೆಕಿಸ್ತಾನದ ನಿಗಿನಾ ಉಕ್ತಮೊವಾ ಎದುರು ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.