ADVERTISEMENT

ಅಂಧರ ಬಾಳಿನ ಬೆಳಕು ಸಮನ್ವಯ ಶಿಕ್ಷಣ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 19:30 IST
Last Updated 13 ಫೆಬ್ರುವರಿ 2011, 19:30 IST
ಅಂಧರ ಬಾಳಿನ ಬೆಳಕು ಸಮನ್ವಯ ಶಿಕ್ಷಣ
ಅಂಧರ ಬಾಳಿನ ಬೆಳಕು ಸಮನ್ವಯ ಶಿಕ್ಷಣ   


ಎಂದೂ ಬೆಳಕನ್ನೇ ಕಾಣದ ಕಣ್ಣುಗಳು. ಅಂತಹ ಕಣ್ಣುಗಳಿಗೆ ಜ್ಞಾನ ಎಂಬ ಬೆಳಕಿನ ಸ್ಪರ್ಶವಾಗುತ್ತದೆ ಎಂದರೆ, ಭರವಸೆಯ ಆಶಾಕಿರಣ ಮೂಡದಿರುತ್ತದೆಯೇ? - ಹೌದು. ಸರ್ವ ಶಿಕ್ಷಣ ಅಭಿಯಾನ ಯೋಜನೆ ಅಡಿ ‘ಸಮನ್ವಯ ಶಿಕ್ಷಣ’ ನಿಜಕ್ಕೂ ಅಂಧರ ಬಾಳಿನ ಬೆಳಕಾಗಿ ಪರಿಣಮಿಸಿದೆ.

6ರಿಂದ 14ರ ವಯೋಮಿತಿ ಒಳಗಿನ ದೃಷ್ಟಿಹೀನ ಮಕ್ಕಳಿಗೂ ಮೂಲ ಹಾಗೂ ಕಡ್ಡಾಯ ಶಿಕ್ಷಣ ನೀಡುವಂತಹ ಯೋಜನೆ ದಾವಣಗೆರೆ ದಕ್ಷಿಣ ಭಾಗದಲ್ಲಿ ಯಶಸ್ಸಿನತ್ತ ಸಾಗಿದೆ. ರಾಜ್ಯದಾದ್ಯಂತ ಈ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ.

ಇದಕ್ಕಾಗಿ ಆಯಾ ಕೇಂದ್ರಗಳಲ್ಲಿ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರನ್ನು (ಐಇಆರ್‌ಟಿ) ನೇಮಿಸಲಾಗಿದೆ.ಆಯಾ ಭಾಗದಲ್ಲಿ ಇರುವ ಅಂಧ ಮಕ್ಕಳನ್ನು ಗುರುತಿಸಿ ಈ ಶಿಕ್ಷಣ ನೀಡಲಾಗುತ್ತಿದೆ. ಇದಕ್ಕಾಗಿ ಗಾನಯೋಗಿ, ಪಂಡಿತ ದಿವಂಗತ ಪುಟ್ಟರಾಜ ಗವಾಯಿ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ದಾವಣಗೆರೆ ದಕ್ಷಿಣ ಶೈಕ್ಷಣಿಕ ವಲಯ ವ್ಯಾಪ್ತಿಯ ವೀರೇಶ್ವರ ಪುಣ್ಯಾಶ್ರಮದ ಅಂಧ ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದು ಇಲ್ಲಿನ ಮಕ್ಕಳ ಭಾಗ್ಯದ ಬಾಗಿಲು ತೆರೆದಂತಾಗಿದೆ.

ಶಿಕ್ಷಣ ಹೇಗೆ?
ಮುಂಜಾನೆ ಪ್ರಾರ್ಥನೆ ಮೂಲಕ ಇವರ ದೈನಂದಿನ ಚಟುವಟಿಕೆ ಆರಂಭವಾಗುತ್ತವೆ. ಈ ಮುಂಚೆಯೇ ಇಲ್ಲಿನ ಮಕ್ಕಳಿಗೆ ಸಂಗೀತದ ಜತೆಗೆ, ಬ್ರೈಲ್ ಲಿಪಿ ಮೂಲಕ ಮೂಲ ಶಿಕ್ಷಣ ನೀಡುವ ಪ್ರಯತ್ನ ಮಾಡಲಾಗಿತ್ತು. ನಂತರ ಸಂಗೀತ ಶಿಕ್ಷಣಕ್ಕೆ ಮಾತ್ರ ಆದ್ಯತೆ ನೀಡಿದ್ದರಿಂದ ಬ್ರೈಲ್ ಲಿಪಿ ಶಿಕ್ಷಣ ಸ್ಥಗಿತವಾಗಿತ್ತು. ಆದರೆ, ಈಗ ಪುನಃ ‘ಸಮನ್ವಯ ಶಿಕ್ಷಣ’ದ ಪರಿಣಾಮವಾಗಿ ಶಾಲಾ ಶಿಕ್ಷಕರ ಸಹಾಯದಿಂದ ಬ್ರೈಲ್ ಲಿಪಿ ಶಿಕ್ಷಣ ಮತ್ತು ಸಂಗೀತ ಶಿಕ್ಷಣ ಒಟ್ಟಾಗಿ ನೀಡುವ ಪ್ರಯತ್ನ ಸಾಗಿದೆ. ಆರು ತಿಂಗಳ ಅವಧಿಯಲ್ಲಿ ಸಾಮಾನ್ಯ ಓದು, ಬರಹ, ಸರಳ ಗಣಿತ ಕಲಿಸುವ ಜವಾಬ್ದಾರಿ ಶಿಕ್ಷಕರದು. ವ್ಯಾವಹಾರಿಕವಾಗಿ ಸಾಮಾನ್ಯ ಜ್ಞಾನ ಗಳಿಸಿದ ಮೇಲೆ, ಸಾಮರ್ಥ್ಯ ಗಳಿಕೆ ಆಧಾರದ ಮೇಲೆ, ಅವರ ವಯೋಮಿತಿಗೆ ಅನುಗುಣವಾಗಿ ಹತ್ತಿರದ ಶಾಲೆಗಳಿಗೆ ದಾಖಲು ಮಾಡಲಾಗುತ್ತದೆ.

 ಇಲ್ಲಿನ ಮಕ್ಕಳಿಗೆ ಸೆಪ್ಟೆಂಬರ್‌ನಿಂದ ತರಬೇತಿ ಆರಂಭಿಸಲಾಗಿದೆ. ಏಪ್ರಿಲ್‌ಗೆ ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ. ಆಗಾಗ್ಗೆ ನಡೆಯುವ ಸಂಪನ್ಮೂಲ ವ್ಯಕ್ತಿಗಳ ವ್ಯಕ್ತಿತ್ವ ವಿಕಸನದ ಉಪನ್ಯಾಸ ಇಲ್ಲಿನ ಅಂಗವಿಕಲ ಮಕ್ಕಳಲ್ಲಿ ಜೀವನ ಪ್ರೀತಿಗೆ ಇಂಬು ನೀಡುತ್ತಿದೆ.

ಬ್ರೈಲ್ ಲಿಪಿ ಶಿಕ್ಷಣ ನೀಡಲು ವೀರೇಶ್ವರ ಪುಣ್ಯಾಶ್ರಮದಲ್ಲೇ ಇರುವ ಅಂಧ ಶಿಕ್ಷಕ ತಿಪ್ಪೇಸ್ವಾಮಿ ಹಾಗೂ ಹತ್ತಿರದ ಪ್ರಾಥಮಿಕ ಶಾಲೆಯ ಶಿಕ್ಷಕಿ ಗಂಗಮ್ಮ ಪೂಜಾರ್ ಅವರನ್ನು ನೇಮಿಸಿಕೊಳ್ಳಲಾಗಿದೆ. ಜತೆಗೆ, ಇಲ್ಲಿನ ಮಕ್ಕಳಿಗೆ ಧ್ಯಾನ, ಪ್ರಾಣಾಯಾಮ, ಯೋಗ ತರಬೇತಿ ನೀಡಲಾಗುತ್ತಿದೆ. ಮಕ್ಕಳೂ ಅಷ್ಟೇ ಉತ್ಸಾಹದಿಂದ ಕಲಿಕೆಯಲ್ಲಿ ತೊಡಗಿದ್ದಾರೆ.

‘ಮುಂಚೆ ನಮಗೆ ಇಲ್ಲಿ ಕೇವಲ ಸಂಗೀತ ಶಿಕ್ಷಣ ನೀಡಲಾಗುತ್ತಿತ್ತು. ಬೇರೆ ಮಕ್ಕಳಂತೆ ನಾವೂ ಓದಬೇಕು ಎಂಬ ಆಸೆ ಇದೆ. ದುರದೃಷ್ಟ ಆ ಭಾಗ್ಯ ನಮಗಿಲ್ಲ. ಆದರೆ, ಬ್ರೈಲ್ ಲಿಪಿ ಶಿಕ್ಷಣ ಆ ಕೊರತೆಯನ್ನು ನೀಗಿಸಿದೆ. ಆಶ್ರಮದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಚರಂತಿಮಠ ಅವರ ಸಹಾನುಭೂತಿ ಆತ್ಮವಿಶ್ವಾಸ ಮೂಡಿಸಿದೆ. ಏನಾದರೂ ಸಾಧನೆ ಮಾಡಬೇಕೆಂಬ ಹಂಬಲವಿದೆ’ ಎಂದು ಹೃದಯತುಂಬಿ ನುಡಿಯುತ್ತಾನೆ ಅಂಧ ವಿದ್ಯಾರ್ಥಿ ಜಗದೀಶ್.

ದಾವಣಗೆರೆ ತಾಲ್ಲೂಕಿನಲ್ಲಿ ಒಟ್ಟು 1,335 ಅಂಗವಿಕಲ ಮಕ್ಕಳಿದ್ದಾರೆ. ದಕ್ಷಿಣ ವಲಯಕ್ಕೆ ಒಂದು ಸಮನ್ವಯ ಶಿಕ್ಷಣ ಕೇಂದ್ರ ಇರುವುದರಿಂದ ಆಶ್ರಮದಲ್ಲಿ 27 ಅಂಧ ಮಕ್ಕಳಿಗೆ ಮಾತ್ರ ತರಬೇತಿ ನೀಡಲಾಗುತ್ತಿದೆ. 6ರಿಂದ 14ವರ್ಷದ ಒಳಗಿನ ಒಟ್ಟು 10 ಮಕ್ಕಳಿದ್ದಾರೆ. ಇವರಿಗೆ ಇತರ ವಿದ್ಯಾರ್ಥಿಗಳಂತೆ ವಿದ್ಯಾರ್ಥಿವೇತನ, ಸಾಧನ ಸಲಕರಣೆ ವಿತರಿಸಲಾಗುತ್ತಿದೆ ಎನ್ನುತ್ತಾರೆ ಸಮನ್ವಯ ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.