ADVERTISEMENT

ಕಾಲೇಜು ಶಿಕ್ಷಣ ಇಲಾಖೆಯ ಶಿಷ್ಯವೇತನಗಳು

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2011, 19:30 IST
Last Updated 10 ಏಪ್ರಿಲ್ 2011, 19:30 IST

ಅಕಾಡೆಮಿಕ್ ಪರಿಸರದಲ್ಲಿ ವಿದ್ಯಾರ್ಥಿಗಳ ಸಾಧನೆಗೆ ಸೂಕ್ತ ಪುರಸ್ಕಾರ ದೊರೆಯ ಬೇಕಾದುದು ನಿರೀಕ್ಷಿತವೇ. ಅದು ಯಾವುದೇ ಹಂತದ ಶಿಕ್ಷಣವಾಗಿರಲಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸುವ, ಗೌರವಿಸುವ ಜೊತೆಗೆ ಉತ್ತೇಜಕಗಳನ್ನು ನೀಡುವ ಕ್ರಮ ಶೈಕ್ಷಣಿಕ ವಲಯದಲ್ಲಿಯ ಕ್ರಿಯಾಶೀಲವಾದ ಚಟುವಟಿಕೆಯಾಗಿದೆ. ವಿದ್ಯಾರ್ಥಿಯ ಸಾಧನೆ ಮತ್ತು ಅರ್ಹತೆಯನ್ನು ಮನಗಂಡು ಅವರ ಬೆನ್ನು ಚಪ್ಪರಿಸುವ, ಆ ಮೂಲಕ ಅವರು ಇನ್ನಷ್ಟು ಮಹತ್ತರವಾದುದನ್ನು ಸಾಧಿಸುವಲ್ಲಿ ಪ್ರೇರಣೆಯಾಗುವ ಕೆಲಸವನ್ನು ಸರ್ಕಾರ ಹಾಗೂ ಸಮಾಜದ ವಿವಿಧ ಸಂಘ - ಸಂಸ್ಥೆಗಳು ಮಾಡಬೇಕು. ಕಾಲೇಜು ಶಿಕ್ಷಣ ಇಲಾಖೆಯು ಈ ದಿಸೆಯಲ್ಲಿ ಅನೇಕ ಬಗೆಯ ಶಿಷ್ಯವೇತನಗಳನ್ನು  ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಅವರು ಸಾಧನೆಯ ಹಾದಿಯಲ್ಲಿ ಮುನ್ನುಗ್ಗುವಂತೆ ಪ್ರೋತ್ಸಾಹಿಸುವ ಕಾರ್ಯವನ್ನು ನಿರ್ವಹಿಸುತ್ತಿದೆ. ಅದರ ಅಡಿಯಲ್ಲಿ ಲಭ್ಯವಿರುವ ಕೆಲವು ಪ್ರಮುಖವಾದ ಶಿಷ್ಯವೇತನಗಳನ್ನು ಇಲ್ಲಿ ಚರ್ಚಿಸಲಾಗಿದೆ.

ಭಾರತ ಸರ್ಕಾರದ ಮೆರಿಟ್ ಶಿಷ್ಯವೇತನ
ಈ ಶಿಷ್ಯವೇತನವನ್ನು ಪಿ.ಯು.ಸಿ., ಪದವಿ, ಡಿ.ಎಡ್, ವೈದ್ಯಕೀಯ, ತಾಂತ್ರಿಕ ಮತ್ತು ಸ್ನಾತಕೋತ್ತರ ಹಂತದ ಶಿಕ್ಷಣ ಪಡೆಯುವಲ್ಲಿ ಅತೀ ಹೆಚ್ಚಿನ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಲಾಗುವುದು. ಪಿ.ಯು.ಸಿ ವಿದ್ಯಾರ್ಥಿಗಳಿಗೆ ತಿಂಗಳಿಗೆ 300 ರೂಪಾಯಿ, ಪದವಿ ವಿದ್ಯಾರ್ಥಿಗಳಿಗೆ ತಿಂಗಳಿಗೆ 500 ರೂಪಾಯಿ, ಡಿ.ಎಡ್ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ತಿಂಗಳಿಗೆ 750 ರೂಪಾಯಿ ಮೊತ್ತವನ್ನು ನೀಡಲಾಗುವುದು. ಇಲ್ಲಿ ಪ್ರತಿಭೆಯೇ ಅತಿ ಮುಖ್ಯವಾದ ಮಾನದಂಡವಾಗಿರುತ್ತದೆ. ಒಟ್ಟು 875 ಈ ಬಗೆಯ ಶಿಷ್ಯವೇತನಗಳನ್ನು ನೀಡಲಾಗುತ್ತದೆ ಎಂದು ಇಲಾಖೆಯ ಮಾಹಿತಿಯಿಂದ ತಿಳಿದು ಬರುತ್ತದೆ.

ಭಾರತ ಸರ್ಕಾರದ ರಾಷ್ಟ್ರೀಯ ಹಿಂದಿ ಶಿಷ್ಯವೇತನ
ಪಿ.ಯು.ಸಿ., ಪದವಿ, ಸ್ನಾತಕೋತ್ತರ ಹಂತದಲ್ಲಿ ಹಿಂದಿಯನ್ನು ಒಂದು ವಿಷಯವನ್ನಾಗಿ ಅಧ್ಯಯನ ಮಾಡಿ ಅತೀ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಈ ಬಗೆಯ ಶಿಷ್ಯವೇತನವನ್ನು ನೀಡಲಾಗುವದು.

ಪಿ.ಯು.ಸಿ ವಿದ್ಯಾರ್ಥಿಗಳಿಗೆ ತಿಂಗಳಿಗೆ 300 ರೂಪಾಯಿ, ಪದವಿ ಹಂತದ ವಿದ್ಯಾರ್ಥಿಗಳಿಗೆ ತಿಂಗಳಿಗೆ 500 ರೂಪಾಯಿ ಮತ್ತು ಸ್ನಾತಕೋತ್ತರ ಹಂತದವರಿಗೆ 1000 ರೂಪಾಯಿಯ ಶಿಷ್ಯವೇತನ ಒದಗಿಸಲಾಗುವುದು. 325 ಈ ಬಗೆಯ ಶಿಷ್ಯವೇತನಗಳಿವೆ.

ಭಾಷೆ ವ್ಯಾಸಂಗ ಶಿಷ್ಯವೇತನ
 ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಯನ್ನು ಐಚ್ಛಿಕವಾಗಿ ಅಧ್ಯಯನ ಮಾಡಿದ್ದು ಅತೀ ಹೆಚ್ಚಿನ ಅಂಕ ಗಳಿಸಿದ್ದರೆ ಅಂಥಾ ವಿದ್ಯಾರ್ಥಿಗಳಿಗೆ ಈ ಶಿಷ್ಯವೇತನ ನೀಡಲಾಗುತ್ತದೆ. ಒಟ್ಟು 29 ಶಿಷ್ಯವೇತನಗಳನ್ನು ಇದರ ಅಡಿಯಲ್ಲಿ ನೀಡಲಾಗುತ್ತಿದ್ದು ಕನ್ನಡದಲ್ಲಿ 10, ಇಂಗ್ಲಿಷಿನಲ್ಲಿ 10 ಮತ್ತು ಸಂಸ್ಕೃತದಲ್ಲಿ 9 ಶಿಷ್ಯವೇತನಗಳು ಇಲ್ಲಿ ನಿಗದಿಯಾಗಿವೆ. ಶಿಷ್ಯವೇತನದ ಮೊತ್ತ ಪ್ರತಿ ತಿಂಗಳಿಗೆ 50 ರೂಪಾಯಿಗಳು.

ಜವಾಹರಲಾಲ್ ನೆಹರೂ ಶಿಷ್ಯವೇತನ
ಉನ್ನತ ಶಿಕ್ಷಣದ ಹಂತದಲ್ಲಿ ಅದರಲ್ಲೂ ಕರ್ನಾಟಕದ ಇಬ್ಬರು ವಿದ್ಯಾರ್ಥಿಗಳು ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಎಂ.ಫಿಲ್ ಹಾಗೂ ಪಿಎಚ್.ಡಿಯಂಥ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ಈ ಶಿಷ್ಯವೇತನವನ್ನು ಕೊಡಲಾಗುವುದು. ಒಟ್ಟು ಎರಡೇ ಶಿಷ್ಯವೇತನಗಳು ಇಲ್ಲಿವೆ. ಶಿಷ್ಯವೇತನದ ಮೊತ್ತ ಎಮ್.ಫಿಲ್ ವಿದ್ಯಾರ್ಥಿಗಳಿಗೆ ತಿಂಗಳಿಗೆ 5000 ರೂಪಾಯಿ. ಪಿಎಚ್.ಡಿ ವಿದ್ಯಾರ್ಥಿಗಳಿಗೆ 5600 ರೂಪಾಯಿಗಳ ಶಿಷ್ಯವೇತನವನ್ನು ನೀಡುವ ಜೊತೆಯಲ್ಲಿ ಖರ್ಚೆಂದು ವರ್ಷಕ್ಕೆ ರೂ 5000  ನೀಡಲಾಗುತ್ತದೆ.

ಸರ್ ಸಿ.ವಿ.ರಾಮನ್ ಶಿಷ್ಯವೇತನ
ಪದವಿ ಹಂತದಲ್ಲಿ ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಉತ್ತೇಜನ ಕೊಡುವ ನಿಟ್ಟಿನಲ್ಲಿ ಈ ಶಿಷ್ಯವೇತನವನ್ನು 2001-2002 ರ ನಂತರ ಇದನ್ನು ಆರಂಭಿಸಲಾಯಿತು. ಇಲ್ಲಿಯೂ ಪ್ರತಿಭೆಯೇ ಮಾನದಂಡ. ಶಿಷ್ಯವೇತನದ ಮೊತ್ತ ವರ್ಷಕ್ಕೆ 5000 ರೂಪಾಯಿಗಳು. ಸುಮಾರು 200 ಶಿಷ್ಯವೇತನಗಳು ಸಿ.ವಿ.ರಾಮನ್ ಅವರ ಹೆಸರಲ್ಲಿ ಕೊಡಲ್ಪಡುತ್ತವೆ.

ಸಂಚಿ ಹೊನ್ನಮ್ಮ ಶಿಷ್ಯವೇತನ
ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ಕೊಡುವ ನಿಟ್ಟಿನಲ್ಲಿ ಈ ಶಿಷ್ಯವೇತನವನ್ನು ಪದವಿ ಹಂತದ ಪ್ರತಿಭಾವಂತ ವಿದ್ಯಾರ್ಥಿನಿಯರಿಗಾಗಿಯೇ 2003-04ರ ಅವಧಿಯಲ್ಲಿ ಆರಂಭಿಸಲಾಗಿದೆ. ಮುಂಚೆ ಇದನ್ನು ಕಲಾ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರಿಗೆ ಮಾತ್ರ ನೀಡಲಾಗುತ್ತಿತ್ತು. 2005-06ರ ನಂತರ ಈ ಶಿಷ್ಯವೇತನವನ್ನು ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಿಗೂ ವಿಸ್ತರಿಸಲಾಯಿತು. ಈ ಶಿಷ್ಯವೇತನ ಖಾಸಗಿ ಹಾಗೂ ಸರ್ಕಾರಿ ಕಾಲೇಜುಗಳೆರಡಕ್ಕೂ ಅನ್ವಯವಾಗುತ್ತದೆ. ಶಿಷ್ಯವೇತನದ ಮೊತ್ತ ವರ್ಷಕ್ಕೆ 2000 ರೂಪಾಯಿ. ಒಟ್ಟು 1000 ಶಿಷ್ಯವೇತನಗಳನ್ನು ಇದರ ಅಡಿಯಲ್ಲಿ ನೀಡಲಾಗುವುದು.

ರಾಣಿ ಚನ್ನಮ್ಮ ಶಿಷ್ಯವೇತನ
2006-2007ರ ನಂತರ ಈ ಶಿಷ್ಯವೇತನವನ್ನು ಪರಿಚಯಿಸಲಾಯಿತು. ಪಿ.ಯು.ಸಿ.ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ ವೃತ್ತಿಪರ ಕೋರ್ಸುಗಳಿಗೆ ತೆರಳುವ ವಿದ್ಯಾರ್ಥಿನಿಯರಿಗಾಗಿ ಈ ಶಿಷ್ಯವೇತನವಿದೆ. ಇದರ ಅಡಿಯಲ್ಲಿ ಮಾಹಿತಿ ತಂತ್ರಜ್ಞಾನ, ಆಯುರ್ವೇದ ಮತ್ತು ವೈದ್ಯಕೀಯ ಸಂಸ್ಥೆಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿನಿಯರಿಗೆ ಅವರು ನೀಡಿದ ಪ್ರವೇಶ ಶುಲ್ಕವನ್ನು ಹಿಂತಿರುಗಿ ಕೊಡಲಾಗುವುದು. ಈ ಬಗೆಯ ಅವಕಾಶ ಒಟ್ಟು 270 ವಿದ್ಯಾರ್ಥಿನಿಯರಿಗೆ ಲಭ್ಯವಿದೆ.

ಇವೆಲ್ಲವುಗಳ ಜೊತೆಯಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ಬರುವ ಪದವಿ ಕಾಲೇಜುಗಳಲ್ಲಿ ಅಧ್ಯಯನ ಮಾಡುವ ಆಂಗ್ಲೋ ಇಂಡಿಯನ್ ವಿದ್ಯಾರ್ಥಿಗಳು ನೀಡಿರುವ ಪ್ರವೇಶ ಶುಲ್ಕ ಹಿಂತಿರುಗಿ ಕೊಡಲಾಗುವದು. ಈ ಬಗೆಯ ಶಿಷ್ಯವೇತನಗಳ ನೀಡಿಕೆಯ ಉದ್ದೇಶ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಗುಣ ಮೂಡಲಿ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸಿಗಬೇಕು ಎನ್ನುವುದಾಗಿದೆ. ಕಾಲೇಜು ಶಿಕ್ಷಣ ಇಲಾಖೆಯ ಅಡಿಯಲ್ಲಿ ಈ ಮೇಲಿನ ಹತ್ತು ಹಲವಾರು ಶಿಷ್ಯ ವೇತನಗಳನ್ನು ನೀಡಲಾಗುವುದು. ಇಲ್ಲಿರುವ ಬಹುತೇಕ ಶಿಷ್ಯವೇತನಗಳು ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ಲಭ್ಯವಿರುತ್ತವೆ. ಹೆಚ್ಚಿನ ವಿವರಗಳಿಗಾಗಿ ಕಾಲೇಜು ಶಿಕ್ಷಣ ಇಲಾಖೆಯ ವೆಬ್ ಸೈಟ್ www.dce.kar.nic


(ಆಧಾರ: ಇಲಾಖೆಯ ವೆಬ್‌ಸೈಟ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT