ADVERTISEMENT

ಕ್ರಿಕೆಟ್ ರಾಡಿ ತೊಳೆಯುವ ಮನಸ್ಸು ಮಂಡಳಿಗಿಲ್ಲ

ಗೋಪಾಲ ಹೆಗಡೆ
Published 20 ಮೇ 2012, 19:30 IST
Last Updated 20 ಮೇ 2012, 19:30 IST

ಭಾರತ ಮತ್ತು ಪಾಕಿಸ್ತಾನಗಳೆರಡೂ ಕ್ರಿಕೆಟ್ ಆಟವನ್ನು ಬಹಳ ಚೆನ್ನಾಗಿ ರಾಜಕೀಯಕ್ಕೆ ಬಳಸಿಕೊಂಡು ಬಂದಿವೆ. ಕ್ರಿಕೆಟ್ ರಾಯಭಾರದ ನೆಪದಲ್ಲಿ ಎರಡೂ ದೇಶಗಳ ರಾಜಕಾರಣಿಗಳು ಶಾಂತಿಯ ಮಾತುಗಳನ್ನಾಡುತ್ತಲೇ ಇದ್ದಾರೆ.
 
ಆದರೆ ಅವರ ಕೈಯಲ್ಲಿಯ ಬಂದೂಕುಗಳನ್ನು ಕೆಳಗಿಟ್ಟಿಲ್ಲ. ಎರಡೂ ರಾಷ್ಟ್ರಗಳ ನಡುವೆ ಕ್ರಿಕೆಟ್ ಸಂಬಂಧ ಇರಬಾರದೆಂದು ಯಾವ ಆಟಗಾರನೂ ಇದುವರೆಗೆ ಹೇಳಿಲ್ಲ. ಆದರೆ ಬೇರೆ ಬೇರೆ ಕಾರಣಗಳಿಂದ ಕ್ರಿಕೆಟ್ ಸರಣಿ ನಿಂತು ಹೋಗಿದೆ. ಭಯೋತ್ಪಾದಕರು ಮುಂಬೈ ಮೇಲೆ ದಾಳಿ ನಡೆಸಿದ ಮೇಲೆ ಕ್ರಿಕೆಟ್ ಬಾಂಧವ್ಯವೂ ಕಡಿದುಬಿತ್ತು.

ವಿಶ್ವ ಕಪ್ ಪಂದ್ಯ ಆಡಲು ಪಾಕಿಸ್ತಾನ ಭಾರತಕ್ಕೆ ಬಂತಾದರೂ ಬೇರೆ ಪಂದ್ಯಗಳಿಗೆ ಅವಕಾಶ ಇಲ್ಲ. ಐಪಿಎಲ್‌ನಲ್ಲಂತೂ ಪಾಕಿಸ್ತಾನದ ಯಾವ ಆಟಗಾರನೂ ಆಡುವಂತಿಲ್ಲ. ಪಂಜಾಬಿನ ಕಿಂಗ್ಸ್ ಇಲೆವೆನ್ ಪರವಾಗಿ ಅಜರ್ ಮಹಮ್ಮೂದ್ ಆಡುತ್ತಿರುವುದು ಅವರ ಬ್ರಿಟಿಷ್ ಪೌರತ್ವದ ಆಧಾರದ ಮೇಲೆ. ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ವಾಸಿಮ್ ಅಕ್ರಮ್ ತರಬೇತುದಾರನಾಗಿ  ಬಂದಿದ್ದಾರೆಯೇ ಹೊರತು ಆಟಗಾರನಾಗಿ ಅಲ್ಲ.

ಈಗ ಎರಡೂ ರಾಷ್ಟ್ರಗಳ ನಡುವೆ ಕ್ರಿಕೆಟ್ ಸರಣಿ ಆರಂಭವಾಗಬೇಕು ಎಂದು ಪಾಕಿಸ್ತಾನ ಕ್ರಿಕೆಟ್‌ನ ಸುರಸುಂದರಾಂಗ ಹಾಗೂ ಪ್ರಧಾನಿ ಕುರ್ಚಿಯ ಮೇಲೆ ಕಣ್ಣಿಟ್ಟಿರುವ ರಾಜಕಾರಣಿ ಇಮ್ರಾನ್ ಖಾನ್ ಹೇಳುತ್ತಿದ್ದಾರೆ. ಅವರು ಬಾಯಲ್ಲಿ ಕ್ರಿಕೆಟ್ ಮಾತನಾಡಿದರೂ ಒತ್ತು ಕೊಟ್ಟಿದ್ದು ಕಾಶ್ಮೀರ ವಿವಾದವನ್ನು ಬಗೆಹರಿಸುವ (ಜೀವಂತವಾಗಿಡುವ!) ವಿಷಯದ ಬಗ್ಗೆ. ಕ್ರಿಕೆಟ್‌ನಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುದು ಅವರಿಗೆ ಗೊತ್ತಿಲ್ಲದ ವಿಷಯವೇನಲ್ಲ.

ಇಲ್ಲಿ ಕ್ರಿಕೆಟ್ ಒಂದು ನೆಪ ಅಷ್ಟೇ. ಕ್ರಿಕೆಟ್ ರಾಯಭಾರ ಎನ್ನುವುದು ರಾಜಕೀಯ ಪ್ರಚಾರದ ವಸ್ತುವೇ ಹೊರತು ಮತ್ತೇನೂ ಅಲ್ಲ. ಕ್ರಿಕೆಟ್ ಎರಡೂ ರಾಷ್ಟ್ರಗಳ ನಡುವೆ ಸಂಬಂಧ ಸುಧಾರಿಸುವಲ್ಲಿ ಒಂದು ಸಣ್ಣ ಪಾತ್ರ ವಹಿಸಬಹುದಾದರೂ ಅದು ಜನರ ಭಾವನೆಗಳನ್ನು ಕೆರಳಿಸುವುದೂ ಅಷ್ಟೇ ನಿಜ. ಪಾಕಿಸ್ತಾನದ ಕ್ರಿಕೆಟಿಗರಲ್ಲೇ ಅತಿ ಹೆಚ್ಚು ಜಾಣ ಎನಿಸಿಕೊಂಡಿದ್ದ ಇಮ್ರಾನ್ ಈಗ ಕಾಶ್ಮೀರ ವಿಷಯದಲ್ಲಿ ಕ್ರಿಕೆಟ್ ಬೆರೆಸುವ ಯತ್ನಕ್ಕೆ ಕೈಹಾಕಿದಂತಿದೆ.

ಈ ವರ್ಷ ಮತ್ತೊಮ್ಮೆ ಪಾಕಿಸ್ತಾನದ ತಂಡ ವೊಂದು ಭಾರತಕ್ಕೆ ಬರಲಿದೆ. ಬರುವ ಅಕ್ಟೋಬರ್‌ನಲ್ಲಿ ಭಾರತದಲ್ಲಿ ನಡೆಯುವ ಚಾಂಪಿಯನ್ಸ್ ಟಿ-20 ಲೀಗ್‌ನಲ್ಲಿ ಪಾಕಿಸ್ತಾನದ ತಂಡ ಆಡಲು ಯಾವುದೇ ತೊಂದರೆ ಇಲ್ಲ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಹೇಳಿದೆ. ಭಾರತ ಸರ್ಕಾರವೂ ಯಾವುದೇ ವಿರೋಧ ವ್ಯಕ್ತಪಡಿಸಲಿಕ್ಕಿಲ್ಲ. ಕಳೆದ ವರ್ಷ ವಿಶ್ವ ಕಪ್ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಎದುರಾಳಿಯಾದಾಗ ಭಾರತದ ಪ್ರಧಾನಿ ಪಾಕಿಸ್ತಾನದ ಪ್ರಧಾನಿಯನ್ನು ಪಂದ್ಯ ನೋಡಲು ಆಮಂತ್ರಿಸಿದ್ದರು.

ಭಯೋತ್ಪಾದನೆ ನಿಲ್ಲದಿದ್ದರೂ ರಾಜಕಾರಣಿಗಳ ಆದರಾತಿಥ್ಯಕ್ಕೇನೂ ಕೊರತೆಯಿಲ್ಲ. ಈ ನಾಟಕಕ್ಕೆ ಕೊನೆಯೂ ಇಲ್ಲ. ಇದರ ಬದಲು ಕ್ರಿಕೆಟ್ ಆಟವನ್ನು ಅದರಷ್ಟಕ್ಕೆ ಬಿಟ್ಟುಬಿಡುವುದು ಒಳ್ಳೆಯದು. ಜನರು ಬಹುಶಃ ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದೂ ಇಲ್ಲ. ಕ್ರಿಕೆಟ್ ಅವರಿಗೆ ಮನರಂಜನೆ. ಬಹಳಷ್ಟು ಜನರಿಗೆ ಜೂಜಾಡಲು ಒಂದು ಅವಕಾಶ. ಐಪಿಎಲ್‌ನಲ್ಲಿ ಪಾಕಿಸ್ತಾನದ ಶಾಹಿದ್ ಅಫ್ರಿದಿ ಅವರಂಥ ಆಟಗಾರ ಆಡಿದ್ದರೆ ಪಂದ್ಯಗಳು ಇನ್ನಷ್ಟು ರೋಚಕವಾಗಿರಬಹುದಾಗಿತ್ತು.

ಆದರೆ ಈ ಬಾರಿಯ ಐಪಿಎಲ್ ಟೂರ್ನಿ ಮೈದಾನದ ಒಳಗಿನ ಆಟಕ್ಕಿಂತ ಹೊರಗೇ ಹೆಚ್ಚು ಸುದ್ದಿ ಮಾಡುತ್ತಿದೆ. ಕ್ರಿಕೆಟ್‌ನಲ್ಲಿ ಮೋಸದಾಟ ಆರಂಭವಾಗಿದ್ದೇ ಭಾರತ ಮತ್ತು ಪಾಕಿಸ್ತಾನದಲ್ಲಿ. ಕ್ರಿಕೆಟ್‌ನಲ್ಲಿ ಹಣದ ಪ್ರಭಾವ ಹೆಚ್ಚಾದಂತೆ ಅದರ ಲಾಭವನ್ನು ಕ್ರಿಕೆಟ್ ಮಂಡಳಿಯ ಜೊತೆ ಆಟಗಾರರೂ ಪಡೆದಿದ್ದಾರೆ.

ದಿಢೀರ್ ಶ್ರೀಮಂತಿಕೆಯ ಆಮಿಷಕ್ಕೆ ಕೆಲವು ಆಟಗಾರರು ಬಲಿ ಬಿದ್ದರು. ಸಿಕ್ಕಿಬಿದ್ದರೂ ಗಂಭೀರ ಶಿಕ್ಷೆ ಆಗುವುದಿಲ್ಲ ಎಂಬ ಭಂಡ ಧೈರ್ಯದಿಂದ ಆಟಗಾರರು ಮೋಸದಾಟದ ಸುಳಿಯಿಂದ ಹೊರಬರಲು ಯತ್ನಿಸಲಿಲ್ಲ. ಕಳೆದ ವರ್ಷ ಪಾಕಿಸ್ತಾನದ ಮೂವರು ಆಟಗಾರರು ಇಂಗ್ಲೆಂಡ್‌ನಲ್ಲಿ ಸಿಕ್ಕಿಬಿದ್ದು ಜೈಲು ಶಿಕ್ಷೆ ಅನುಭವಿಸಿದರೂ, ಮೋಸದಾಟ ಕ್ರಿಕೆಟ್‌ನಿಂದ ದೂರವಾಗಿಲ್ಲ.

ಖಾಸಗಿ ವಾಹಿನಿಯೊಂದು ನಡೆಸಿದ ಮಾರುವೇಷದ ಕಾರ್ಯಾಚರಣೆಯಲ್ಲಿ ಭಾರತದ ಐವರು ಆಟಗಾರರು ಸಿಕ್ಕಿಬಿದ್ದಿದ್ದಾರೆ. ಈ ಐವರೂ ಆಟಗಾರರನ್ನು ಕ್ರಿಕೆಟ್ ಮಂಡಳಿ ಕೂಡಲೇ ಅಮಾನತುಗೊಳಿಸಿದರೂ, ಕಠಿಣ ಕ್ರಮಗಳ ಸೂಚನೆ ಇಲ್ಲ. ಇದರ ಬಗ್ಗೆ ಚರ್ಚೆ ನಡೆಯುತ್ತಿದ್ದಂತೆಯೇ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಒಡೆಯ ಶಾರೂಖ್ ಖಾನ್, ವಾಂಖೇಡೆ ಕ್ರೀಡಾಂಗಣದಲ್ಲಿ ಗಲಾಟೆ ಮಾಡಿದ ಸುದ್ದಿ ಬಂತು. ಶಾರೂಖ್ ಕುಡಿದ ಮತ್ತಿನಲ್ಲಿ ದಾಂಧಲೆ ಹಾಕಿದರು ಎಂಬುದು ಆರೋಪ. ಅವರ ವಿರುದ್ಧ ಮುಂಬೈ ಕ್ರಿಕೆಟ್ ಸಂಸ್ಥೆ ದೂರು ದಾಖಲಿಸಿದೆ.

ಕೋಲ್ಕತ್ತ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿದ ನಂತರ ಈ ಘಟನೆ ನಡೆದಿದೆ. ಶಾರೂಖ್ ಯಾಕೆ ಅಷ್ಟೊಂದು ಸಿಟ್ಟಿನಿಂದ ವರ್ತಿಸಿದರು ಎಂಬುದು ಅವರಿಗೇ ಗೊತ್ತು. ಐಪಿಎಲ್‌ನಲ್ಲಿ ಬರೀ ತಂಡಗಳಷ್ಟೇ ಸೆಣಸುವುದಿಲ್ಲ. ಮಾಲೀಕರಿಗೆ ತಮ್ಮ  ತಂಡದ ಪ್ರದರ್ಶನ ಬಹಳ ಪ್ರತಿಷ್ಠೆಯ ವಿಷಯ.

ಶಾರೂಖ್ ಖಾನ್ ಗಲಾಟೆ ಸುದ್ದಿ ತಣ್ಣಗಾಗುವ ಮೊದಲೇ ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ತಂಡದ ಆಟಗಾರನೊಬ್ಬ ಅತ್ಯಾಚಾರ ಮಾಡಲು ಹೋಗಿ ಸಿಕ್ಕಿಬಿದ್ದ ಸುದ್ದಿ ದೆಹಲಿಯಿಂದ ಬಂತು. ಆರ್‌ಸಿಬಿ ಆಟಗಾರ, ಆಸ್ಟ್ರೇಲಿಯದ ಲೂಕ್ ಪಾಮರ್ಸ್ ಬ್ಯಾಚ್, ದೆಹಲಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧದ ಪಂದ್ಯದ ನಂತರ, ಹೊಟೆಲ್‌ನಲ್ಲಿ ಅಮೆರಿಕ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಮಾಡಲು ಹೋಗಿ ಸಿಕ್ಕಿಬಿದ್ದರು.

ಆತನ ವಿರುದ್ಧವೂ ಪ್ರಕರಣ ದಾಖಲಾಗಿದೆ. ಇವೆಲ್ಲ ಕ್ರಿಕೆಟ್‌ನ ಕಪ್ಪು ಚುಕ್ಕೆಗಳು. ಆದರೆ ಇಲ್ಲಿ ಯಾರಿಗೂ ಶಿಕ್ಷೆಯಾಗುವುದಿಲ್ಲ. ಹಣದ ಪ್ರಭಾವ ಎಲ್ಲವನ್ನೂ ಮುಚ್ಚಿಹಾಕುತ್ತದೆ. ಮೋಸದಾಟದ ವಿಷಯದಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಯಾವುದೇ ಗಂಭೀರವಾದ ಕ್ರಮವನ್ನು ತೆಗೆದುಕೊಂಡಿಲ್ಲ.

ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ ಒತ್ತಾಯದ ಮೇರೆಗೆ, ಭ್ರಷ್ಟಾಚಾರ ತಡೆ ದಳವೊಂದನ್ನು ಮಂಡಳಿ ರಚಿಸಿದರೂ ಅದು ಹೆಚ್ಚು ಪರಿಣಾಮಕಾರಿಯಾಗಿಲ್ಲ. ಈಗ ಸಿಕ್ಕಿಬಿದ್ದಿರುವ ಆಟಗಾರರು ಟೆಸ್ಟ್ ಅಥವಾ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದವರಲ್ಲ.

ಇವರು ಸಿಕ್ಕಿಬಿದ್ದದ್ದು ರಾಡಿಯನ್ನು ಸ್ವಲ್ಪ ಕದಡಿದಂತಾಗಿದೆ ಅಷ್ಟೇ. ಕ್ರಿಕೆಟ್ ಮಂಡಳಿ ಮೂಲ ಸಮಸ್ಯೆಯ ಪರಿಹಾರಕ್ಕೆ ಕೈಹಾಕುವ ಲಕ್ಷಣಗಳಂತೂ ಇಲ್ಲ. ಸಂಪೂರ್ಣ ತನಿಖೆಯಾದಲ್ಲಿ ಹಲವು ಮಂದಿ ಪ್ರಮುಖರ ತಲೆ ಹಾರುವ ಸಾಧ್ಯತೆಗಳಿರುವುದರಿಂದ ತನ್ನ ಅನುಕೂಲಕ್ಕೆ ತಕ್ಕಂತೆ ಮಂಡಳಿ ಕ್ರಮ ತೆಗೆದುಕೊಳ್ಳುತ್ತದೆ.

ಕೇಂದ್ರ ಕ್ರೀಡಾ ಸಚಿವ ಅಜಯ್ ಮಾಕೆನ್ ಈ ಸಂದರ್ಭವನ್ನು ಉಪಯೋಗಿಸಿಕೊಂಡು ಮತ್ತೊಮ್ಮೆ ಕ್ರಿಕೆಟ್ ಮಂಡಳಿಯ ವಿರುದ್ಧ ಕಿಡಿಕಾರಿದ್ದಾರೆ. ಅವರ ಮಾತಿನಲ್ಲಿ ಅರ್ಥ ಇದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಸ್ವಾಯತ್ತ ಸಂಸ್ಥೆ ಎನಿಸಿಕೊಂಡರೂ, ಸಾರ್ವಜನಿಕರ ಹಣದಿಂದ ಅದು ಬೆಳೆದಿರುವುದರಿಂದ, ಜನರಿಗೆ ಉತ್ತರ ಕೊಡಲೇಬೇಕಾಗುತ್ತದೆ.

ಮಂಡಳಿಯ ಲೆಕ್ಕಪತ್ರಗಳ ಬಗ್ಗೆ ಬಹಳ ಅನುಮಾನಗಳಿವೆ. ಅದರ ಹಣಕಾಸಿನ ವ್ಯವಹಾರಗಳ ಪರಿಶೀಲನೆ ಆಗಬೇಕು ಹಾಗೂ ರಾಷ್ಟ್ರೀಯ ಕ್ರೀಡಾ ನೀತಿಯ ನಿಯಮಗಳಿಗೆ ಅದು ಬದ್ಧವಾಗಿರಬೇಕು ಎಂಬ ಸಚಿವರ ವಾದವನ್ನು ಮಂಡಳಿ ಒಪ್ಪಿಯೇ ಇಲ್ಲ. ಇಲ್ಲಿ ಸಚಿವರಿಗೆ ಅವರ ಸರ್ಕಾರದ ಬೆಂಬಲವೇ ಇಲ್ಲ.

ಇದಕ್ಕೆ ಕಾರಣ ಕ್ರಿಕೆಟ್ ಮಂಡಳಿಯಲ್ಲಿ ತುಂಬಿರುವ ಪ್ರಭಾವಿ ರಾಜಕಾರಣಿಗಳು.  ಐಪಿಎಲ್ ಆರಂಭಿಸಿದ ಲಲಿತ್ ಮೋದಿಯ ಕರಾಮತ್ತುಗಳೆಲ್ಲ ಬಹಿರಂಗಗೊಂಡಾಗಲೇ ಎಲ್ಲ ಅವ್ಯವಹಾರಗಳ ಬಗ್ಗೆ ಮಂಡಳಿ ವಿಚಾರಣೆ ನಡೆಸಬೇಕಿತ್ತು.

ಆದರೆ ತಾನು ನಡೆದದ್ದೇ ದಾರಿ ಎಂಬಂತೆ ವರ್ತಿಸುವ ಕ್ರಿಕೆಟ್ ಮಂಡಳಿ ಎಲ್ಲರನ್ನೂ ಮೂರ್ಖರನ್ನಾಗಿಸುತ್ತ ಮುನ್ನಡೆದಿದೆ. ಇಷ್ಟೆಲ್ಲ ಆದರೂ ಕ್ರಿಕೆಟ್‌ಮರುಳು ಜನರನ್ನು ಬಿಟ್ಟಿಲ್ಲ. ಈ ಜಾತ್ರೆ ಹೀಗೆಯೇ ನಡೆಯುತ್ತಿರುತ್ತದೆ.  

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.