ADVERTISEMENT

ನಗರ ಯೋಜನೆ ನಿಮ್ಮ ಕನಸೇ?

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2012, 19:30 IST
Last Updated 14 ಅಕ್ಟೋಬರ್ 2012, 19:30 IST

2030ರ ಹೊತ್ತಿಗೆ ಭಾರತ 70 ದಶಲಕ್ಷಕ್ಕೂ ಹೆಚ್ಚಿನ ನಗರಗಳನ್ನು ಹೊಂದಲಿದೆ. ಈ ನಗರಗಳು ದೇಶದ ಒಟ್ಟಾರೆ ಆಂತರಿಕ ಉತ್ಪನ್ನದ ಶೇ 70ರಷ್ಟು ಕೊಡುಗೆ ನೀಡಲಿವೆ. ಅಂದ ಮೇಲೆ, ಅಂತಹ ಪ್ರಮುಖ 300-400 ನಗರಗಳ ನಗರೀಕರಣವನ್ನು ನಾವು ಹೇಗೆ ನಿರ್ವಹಿಸುತ್ತೇವೆ ಎಂಬುದರ ಮೇಲೆ ದೇಶದ ಬೆಳವಣಿಗೆಯ ಕಥೆ ಆರಂಭವಾಗುತ್ತದೆ ಎಂದಂತಾಯಿತು.

ಇಂತಹ ನಗರೀಕರಣ ಪರಿವರ್ತನೆ ಗಂಭೀರ ಸವಾಲುಗಳ ಜೊತೆಗೆ ಬಹಳಷ್ಟು ಅವಕಾಶಗಳನ್ನೂ ನಮಗೆ ಒದಗಿಸಿಕೊಡಲಿದೆ. ಗ್ರಾಮೀಣ ವ್ಯವಸ್ಥೆಯಿಂದ ನಗರೀಕರಣಕ್ಕೆ ಪರಿಣಾಮಕಾರಿಯಾಗಿ ಪರಿವರ್ತನೆಯಾಗಲು ನೆರವಾಗುವಂತಹ ಸಮರ್ಪಕ ಜ್ಞಾನ, ದೃಷ್ಟಿಕೋನ ಮತ್ತು ಉಪಕರಣಗಳೊಂದಿಗೆ ಸಜ್ಜಾಗಿರುವ ನಗರೀಕರಣ ವೃತ್ತಿಪರರನ್ನು ಸೃಷ್ಟಿಸುವುದು ಈ ಸಮಯದಲ್ಲಿ ಅತ್ಯಂತ ಅಗತ್ಯದ ಸಂಗತಿಯಾಗಿದೆ.

ನಮ್ಮ ಸಮಾಜ ಸತತವಾಗಿ ವಿಕಾಸದ ಸ್ಥಿತಿಯಲ್ಲಿರುತ್ತದೆ. ಈ ಸಂದರ್ಭದಲ್ಲಿ ಬರುವ ಆತಂಕಗಳನ್ನು ದೃಢವಾದ ನಗರೀಕರಣ ಯೋಜನೆಯೊಂದಿಗೆ ಮಾತ್ರ ಎದುರಿಸಲು ಸಾಧ್ಯ. ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಸುಸ್ಥಿರ ಪರಿಸರವನ್ನು ಸೃಷ್ಟಿಸುವುದು ಮುಖ್ಯವಾಗುತ್ತದೆ. ಇದನ್ನು ವಿದ್ಯುತ್ ಮತ್ತು ಜಲ ಸಂಪನ್ಮೂಲಗಳ ಸಮರ್ಥ ಬಳಕೆಯ ಮೂಲಕ ಸಾಧಿಸಬೇಕು.

ಸುಸ್ಥಿರ ಪರಿಸರಕ್ಕೆ ನಗರಗಳ ವಿನ್ಯಾಸ, ನಿರ್ಮಾಣ ಮತ್ತು ನಿರ್ವಹಣೆ ಒಂದು ಪೂರಕವಾದ ಹೆಜ್ಜೆಯಾಗಿರುತ್ತದೆ. ಇದರಿಂದ ಇಂಗಾಲದ ವಸ್ತುಗಳ ಬಳಕೆ ಕಡಿಮೆಯಾಗಿ ಸಂಪನ್ಮೂಲಗಳ ಸಮರ್ಥ ಬಳಕೆ ಸಾಧ್ಯವಾಗುತ್ತದೆ. ಇದರಿಂದ ನಗರ ನಿರ್ಮಾಣಕ್ಕೆ ತಗಲುವ ವಸ್ತುಗಳ ವೆಚ್ಚವೂ ಕಡಿಮೆಯಾಗುತ್ತದೆ.

ನಮ್ಮ ಹವಾಮಾನ ಪ್ರತಿ ವರ್ಷ ಕ್ಷಿಪ್ರಗತಿಯಲ್ಲಿ ಬದಲಾಗುತ್ತಿರುವುದರಿಂದ ಅದಕ್ಕೆ ತಕ್ಕ ಸ್ಥಳೀಯ ಪರಿಣಾಮಗಳನ್ನು ಎದುರಿಸಲು ನಗರಗಳು ಶಕ್ತವಾಗಿ ಇರಬೇಕಾಗುತ್ತದೆ. ಅಂತಹ ಪರಿಸರವನ್ನು ನಗರೀಕರಣ ವೃತ್ತಿಪರರು ನಗರಗಳಲ್ಲಿ ನಿರ್ಮಿಸಬೇಕಾಗುತ್ತದೆ.

ಅದಕ್ಕಾಗಿ ಅವರಿಗೆ ಗಣಿತ, ಭೂ ವಿಜ್ಞಾನ, ಜೀವ ವಿಜ್ಞಾನ, ಸಮಾಜಶಾಸ್ತ್ರ, ವಾಸ್ತುಶಿಲ್ಪ, ಯೋಜನೆ, ಭೂಗೋಳ, ನೀತಿಗಳ ಅಧ್ಯಯನದ ಜೊತೆಗೆ ಹಲವಾರು ವಿಷಯಗಳಲ್ಲಿ ಪರಿಣತಿಯೂ ಇರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ, ಕೆಲವು ಕೇಂದ್ರಗಳು ಭವಿಷ್ಯದ ನಗರೀಕರಣ ತಜ್ಞರನ್ನು ತರಬೇತುಗೊಳಿಸುವ ಕಾರ್ಯದಲ್ಲಿ ನಿರತವಾಗಿವೆ.

ಈ ಕ್ಷೇತ್ರದ ವೃತ್ತಿಪರರಿಗೆ ಸಂಬಳ ಪ್ಯಾಕೇಜ್‌ಗಳು ವಾರ್ಷಿಕ ಎರಡು ಲಕ್ಷದಿಂದ 3.6 ಲಕ್ಷ ರೂಪಾಯಿವರೆಗೆ ಇರುತ್ತದೆ. ಹಿರಿಯ ವೃತ್ತಿಪರರು/ ಸಲಹಾಗಾರರು ವಾರ್ಷಿಕ 9 ರಿಂದ 12 ಲಕ್ಷ ರೂಪಾಯಿವರೆಗೆ ವೇತನ ಪಡೆಯುತ್ತಾರೆ. ನಗರಗಳ ಹೆಚ್ಚುತ್ತಿರುವ ಬೇಡಿಕೆಗಳಿಗೆ ತಕ್ಕಂತಹ ಉತ್ಪನ್ನಗಳು ಮತ್ತು ಸೇವೆಗಳನ್ನು ಪೂರೈಸಬಲ್ಲ ತಮ್ಮದೇ ಆದ ಸಾಮಾಜಿಕ/ ವಾಣಿಜ್ಯ ವಹಿವಾಟುಗಳನ್ನು ಸಹ ನಗರೀಕರಣ ವೃತ್ತಿಪರರು ಸ್ಥಾಪಿಸಬಹುದು.


ರಜತ್‌ಕುಮಾರ್, ಸತೀಶ್ ಸೆಲ್ವಕುಮಾರ್

(ಮಾನವ ವಸಾಹತುಗಳ ಭಾರತೀಯ ಸಂಸ್ಥೆ,      ಬೆಂಗಳೂರು)

ಇಲ್ಲಿದೆ ನಗರೀಕರಣ ಪರಿಣತಿ ತರಬೇತಿ
ಸೆಂಟರ್ ಫಾರ್ ಎನ್ವಿರಾನ್‌ಮೆಂಟಲ್ ಪ್ಲಾನಿಂಗ್ ಅಂಡ್ ಟೆಕ್ನಾಲಜಿ (ಸಿಇಪಿಟಿ),
ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಚರ್ (ಎಸ್‌ಪಿಎ)
ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್(ಟಿಐಎಸ್‌ಎಸ್)
ದಿ ಎನರ್ಜಿ ಅಂಡ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್(ಟಿಇಆರ್‌ಐ)

ದಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಫಾರ್ ಹ್ಯೂಮನ್ ಸೆಟಲ್‌ಮೆಂಟ್ಸ್ (ಮಾನವ ವಸಾಹತುಗಳ ಭಾರತೀಯ
ಸಂಸ್ಥೆ- ಐಐಎಚ್‌ಎಸ್)
ಸಂಭಾವ್ಯ ರಾಷ್ಟ್ರೀಯ ನವೀನತಾ ವಿಶ್ವವಿದ್ಯಾಲಯ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.