ADVERTISEMENT

ನನಸಾಯಿತು ಗ್ರಾಮೀಣ ಕನಸು

ಮಂಜುನಾಥ ಗೌಡರ
Published 1 ಮೇ 2011, 19:30 IST
Last Updated 1 ಮೇ 2011, 19:30 IST

‘ಆಗ ನಮ್ಮ ಮಗ ಕಲಿಯುತ್ತಿದ್ದ  ಖಾಸಗಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತುಂಬಾ ಒತ್ತಡ. ಸಾವಿರಾರು ರೂಪಾಯಿ ಹಣ ನೀಡುವುದರ ಜತೆ  ಹೋಂ ವರ್ಕ್‌ಗೆ ಸಹಕರಿಸಿಯೂ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುತ್ತಿರಲಿಲ್ಲ. ‘ಆದರ್ಶ’ ಶಾಲೆಗೆ ಸೇರಿಸಿದ ಮೇಲೆ ಏನೂ ಖರ್ಚಿಲ್ಲ. ಕಲಿಕೆ ಕೂಡ ಉತ್ತಮಗೊಂಡಿದೆ’ ಎಂದು ಸಂತೋಷದಿಂದ ಹಂಚಿಕೊಳ್ಳುತ್ತಾರೆ ಪಾವಗಡದಲ್ಲಿನ ಆದರ್ಶ ಶಾಲೆಯ ವಿದ್ಯಾರ್ಥಿ ಪಾಲಕರು.

ಹೌದು ಕೊನೆಗೂ ಕಾಲ ಬದಲಾಯಿತು. ಸರ್ಕಾರಿ ಶಾಲೆಯತ್ತ ಪಾಲಕರು ಮುಖ ಮಾಡ ತೊಡಗಿದ್ದಾರೆ. ಕಾರಣ; ರಾಜ್ಯದ ಶೈಕ್ಷಣಿಕವಾಗಿ ಹಿಂದುಳಿದ ಸುಮಾರು 74 ತಾಲ್ಲೂಕುಗಳಲ್ಲಿ ಸರ್ಕಾರ ‘ಆದರ್ಶ’ ಶಾಲೆಗಳನ್ನು ಆರಂಭಿಸಿದೆ. ಇಂಗ್ಲಿಷ್ ಮಾಧ್ಯಮದಲ್ಲಿ ತಮ್ಮ ಮಕ್ಕಳು ಓದಬೇಕೆಂಬ ಗ್ರಾಮೀಣರ ಕನಸು ‘ಆದರ್ಶ’ದ ಮೂಲಕ ನನಸಾಗಲಿದೆ. ಈ ಶಾಲೆಗಳ ಉದ್ದೇಶ ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಂಗ್ಲ ಮಾಧ್ಯಮದ ಶಿಕ್ಷಣ ಒದಗಿಸುವುದಾಗಿದೆ.

ಉತ್ತಮ  ಗುಣಮಟ್ಟದ ಶಿಕ್ಷಣ, ಸೌಕರ್ಯ ಮತ್ತು ಲಭ್ಯತೆ ಇದರ ಹಿಂದಿನ ಉದ್ದೇಶ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ಉತ್ಕೃಷ್ಟವಾದ  ಶೈಕ್ಷಣಿಕ ಗುರಿ ಸಾಧನೆ, ಶಾಲೆಯನ್ನು ಅತ್ಯವಶ್ಯ ಮೌಲ್ಯಗಳುಳ್ಳ ಉತ್ತಮ ಕಲಿಕಾ ಕೇಂದ್ರವಾಗಿ ಮಾಡುವುದು ಈ ಯೋಜನೆಯ ಗುರಿ.  ಕೇಂದ್ರೀಯ ಶಾಲೆಗಳನ್ನು ಮಾದರಿಯಾಗಿಟ್ಟುಕೊಂಡು ರಾಜ್ಯ ಸರ್ಕಾರ ಈ ಶಾಲೆಗಳನ್ನು 2009-10ರಲ್ಲಿ   ಸ್ಥಾಪನೆ ಮಾಡಿದೆ. ಆದರೆ ಇಂದಿಗೂ ಬಹಳ ಜನಕ್ಕೆ ಈ ಶಾಲೆಯ ಕುರಿತು ಮಾಹಿತಿ ಇಲ್ಲವಾಗಿದೆ ಎನ್ನುತ್ತಾರೆ ಪಾವಗಡ ಕ್ಷೇತ್ರ  ಶಿಕ್ಷಣಾಧಿಕಾರಿ ತಿಮ್ಮರಾಜು.

ರಾಜ್ಯದಲ್ಲಿರುವ  202 ಶೈಕ್ಷಣಿಕ ಬ್ಲಾಕ್‌ಗಳ ಪೈಕಿ, ಅತಿ ಹಿಂದುಳಿದ 74 ಬ್ಲಾಕ್‌ಗಳಲ್ಲಿ (ತಾಲ್ಲೂಕು) ‘ಆದರ್ಶ ಶಾಲೆ’ಗಳು ಈಗಾಗಲೇ ತಲೆ ಎತ್ತಿವೆ. ರಾಜ್ಯದ ಯಾದಗಿರಿ ಜಿಲ್ಲೆಯಲ್ಲಿ ಇರುವ ಮೂರು ಶಾಲೆಗಳಲ್ಲಿ 1,500 ವಿದ್ಯಾರ್ಥಿಗಳಿಗೆ ಪ್ರವೇಶವಿದೆ. ಆದರೆ ಈ ವರ್ಷ ಪ್ರವೇಶಕ್ಕಾಗಿ ಸುಮಾರು 27 ಸಾವಿರ ಅರ್ಜಿಗಳು ಬಂದಿರುವುದು ಈ ಶಾಲೆಗಳು ಪೋಷಕರನ್ನು ಚುಂಬಕದಂತೆ ಸೆಳೆಯುತ್ತಿವೆ ಎಂಬುದಕ್ಕೆ ಉದಾಹರಣೆ.

ಪ್ರವೇಶ ವಿಧಾನ:
-‘ಬಿ’ ಶಾಲೆಗಳಿಗೆ ನಡೆಯುವ ಪ್ರವೇಶ ವಿಧಾನ ಇಲ್ಲಿ ಅಳವಡಿಸಲಾಗಿದೆ. 
-ಫೆಬ್ರುವರಿ ತಿಂಗಳಿನಲ್ಲಿ ಅರ್ಜಿ ಕರೆಯಲಾಗುವುದು.
-ಆಯ್ಕೆ ಪರೀಕ್ಷೆಯಲ್ಲಿ 5ನೇ ತರಗತಿ ಪಠ್ಯ ಪುಸ್ತಕ ಆಧರಿಸಿ ಭಾಷೆಗಳು ಕನ್ನಡ, ಇಂಗ್ಲಿಷ್ (ಶೇ20), ಗಣಿತ (ಶೇ 20), ವಿಜ್ಞಾನ (ಶೇ 20), ಸಮಾಜ ವಿಜ್ಞಾನ (ಶೇ 20) ಮತ್ತು ಸಾಮಾನ್ಯ ವಿಜ್ಞಾನ (ಶೇ 20)
-ಪ್ರಶ್ನೆ ಪತ್ರಿಕೆ:  ವಸ್ತುನಿಷ್ಠ ಪ್ರಶ್ನೆಗಳು ಆಂಗ್ಲ , ಕನ್ನಡ ಮಾಧ್ಯಮದಲ್ಲಿರುತ್ತವೆ.
-ಪರೀಕ್ಷಾ ಅವಧಿ 2 ಗಂಟೆ, ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಕನಿಷ್ಠ 250 ಮಕ್ಕಳಿಗೆ ಒಂದು ಕೇಂದ್ರ.
-ಕೊನೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪಾಲಕರ ಜತೆ ಚರ್ಚೆ, ನಂತರ ಬ್ಲಾಕ್ ಹಂತದ ಮೆರಿಟ್ ಆಧರಿಸಿ ಆಯ್ಕೆ  ನಡೆಯುತ್ತದೆ.

ಸೂಚನೆಗಳು :
-ಅರ್ಜಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಪಡೆಯಬಹುದು
-ಆಯ್ಕೆ ಪರೀಕ್ಷೆಗೆ ಯಾವುದೇ ಶುಲ್ಕವಿಲ್ಲ
-ದಾಖಲಾತಿ ಆಯಾ ತಾಲ್ಲೂಕಿನ ಮಕ್ಕಳಿಗೆ ಮಾತ್ರ ಆದ್ಯತೆ.

ವಿಶೇಷತೆಗಳು:
ಆದರ್ಶ ವಿದ್ಯಾಲಯಗಳು ಕೇಂದ್ರೀಯ ವಿದ್ಯಾಲಯಗಳ ಮಾದರಿಯಲ್ಲಿರುತ್ತವೆ. ಸೂಕ್ತವಾದ ಪಠ್ಯಕ್ರಮ, ವಿದ್ಯಾರ್ಥಿ ಶಿಕ್ಷಕರ ಅನುಪಾತ ಮಾಹಿತಿ ಸಂವಹನ, ತಂತ್ರಜ್ಞಾನದ ಬಳಕೆ, ಸಂಪೂರ್ಣ ಶೈಕ್ಷಣಿಕ ಪರಿಸರ ಮತ್ತು ವಿದ್ಯಾರ್ಥಿಗಳ ಕಲಿಕೆ (ಔಟ್‌ಪುಟ್)
-ಆಂಗ್ಲ ಮಾಧ್ಯಮವಾಗಿದ್ದರೂ ರಾಜ್ಯದ ಪಠ್ಯಕ್ರಮ.
-ಪದವಿ ಮತ್ತು ಸ್ನಾತಕ್ಕೋತ್ತರ ಪದವಿಯೊಂದಿಗೆ ತರಬೇತಿ ಪಡೆದ ಶಿಕ್ಷಕರು.
-ಉತ್ತಮ ಭೌತಿಕ ಸೌಕರ್ಯಕ್ಕೆ ಸರ್ಕಾರದ ಅನುಮೋದನೆ.
-ಸರ್ಕಾರಿ ಶಾಲೆಗಳಿಗೆ ಲಭ್ಯವಿರುವ ಉಚಿತ ಪಠ್ಯ ಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಉಪಾಹಾರ  ಮೊದಲಾದ  ಸವಲತ್ತು ಈ ಶಾಲೆಗಳಲ್ಲೂ ಲಭ್ಯ.
-ಆದರ್ಶ ವಿದ್ಯಾಲಯಗಳಿಗೆ ಸಾಮಾನ್ಯ ಪರೀಕ್ಷೆ ಮೂಲಕ ರಾಜ್ಯದ ರೋಸ್ಟರ್ ನಿಯಮಗಳಿಗೆ ಅನುಗುಣವಾಗಿ ದಾಖಲಾತಿ ಮಾಡಿಕೊಳ್ಳಲಾಗುವುದು. ಆಯ್ಕೆ ಪರೀಕ್ಷೆ ಆಯಾ ಬ್ಲಾಕ್‌ನ ಕೇಂದ್ರದಲ್ಲಿ ನಡೆಯುವುದು. ಆಯಾ ಬ್ಲಾಕ್‌ನ  ಮಕ್ಕಳಿಗೆ ಮಾತ್ರ ಪ್ರವೇಶ ಪರೀಕ್ಷೆಗೆ ಅವಕಾಶ.  
 
ಈಗಾಗಲೇ ಆಯ್ಕೆ ಪ್ರಕ್ರಿಯೆ ನಡೆದಿದೆ. ಮುಂದಿನ ಸಲ ಕುಳಿತುಕೊಳ್ಳುವ ವಿದ್ಯಾರ್ಥಿಗಳು ಈಗಿನಿಂದಲೇ ಪಠ್ಯಕ್ರಮವನ್ನು ಶಿಸ್ತುಬದ್ಧವಾಗಿ  ಓದಿದರೆ ಆಯ್ಕೆ ಸುಲಭ.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.