ಶಕ್ತಿಯುತವಾದ ಸಂಭಾಷಣೆಯಲ್ಲಿ ನುಡಿಗಟ್ಟುಗಳು ಹಾಸು ಹೊಕ್ಕಾಗಿರುತ್ತವೆ, ಅಂತಹ ಕೆಲವು ನುಡಿಗಟ್ಟುಗಳ ಹಿನ್ನೆಲೆಯನ್ನು, ಅವುಗಳ ಉಪಯೋಗವನ್ನು ತಿಳಿದುಕೊಳ್ಳೋಣ.
1). To break the ice (ಮಂಜುಗಡ್ಡೆ ಮುರಿಯುವುದು)
ಇದರ ಅರ್ಥ, ಬಿಗಿ ವಾತಾವರಣವನ್ನು ತಿಳಿಗೊಳಿಸುವುದು ಎಂದು. ಈ ನುಡಿಗಟ್ಟು, 1823ರಲ್ಲಿ ಲಾರ್ಡ್ ಬೈರನ್‌ನ ಬರವಣಿಗೆಯಲ್ಲಿ ಕಂಡುಬಂದ ಮೇಲೆ, ಇದರ ಬಳಕೆ ಹೆಚ್ಚಾಯಿತು. ಇದರ ಮೂಲವೆಂದರೆ, ಚಳಿಗಾಲದಲ್ಲಿ, ನದಿಯಲ್ಲಿ ಹೆಪ್ಪುಗಟ್ಟಿದ ನೀರನ್ನು (Ice) ಮುರಿದು, ಹಡಗುಗಳು ಚಲಿಸುವುದಕ್ಕೆ ದಾರಿಮಾಡಿಕೊಟ್ಟ ನಂತರ ಆ ಋತುವಿನ ಚಟುವಟಿಕೆಗಳು ಪ್ರಾರಂಭವಾಗುತ್ತಿದ್ದವು. ಈ ನುಡಿಗಟ್ಟಿನ ಉಪಯೋಗ ವಾಕ್ಯದಲ್ಲಿ ಈ ರೀತಿ ಇರುತ್ತದೆ:
Everyone in the party is very serious. We have to break the ice.
2) To throw the book at some one (ಇನ್ನೊಬ್ಬರತ್ತ ಪುಸ್ತಕವನ್ನು ಎಸೆಯುವುದು)
ಈ ನುಡಿಗಟ್ಟಿನ ಅರ್ಥವೆಂದರೆ, ಯಾರನ್ನಾದರೂ ಕಠೋರವಾಗಿ ಶಿಕ್ಷಿಸುವುದು ಎಂದು. ಮೂಲಭೂತವಾಗಿ ಈ ನುಡಿಗಟ್ಟಿಗೆ ಸೆರೆಮನೆಯಲ್ಲಿರುವ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸುವುದು ಎಂದರ್ಥವಿತ್ತು. ಆದರೆ ಈಗ ಜೀವಾವಧಿ ಶಿಕ್ಷೆಗಿಂತ ಕಡಿಮೆಯಿದ್ದಾಗಲೂ ಈ ನುಡಿಗಟ್ಟನ್ನು ಬಳಸಬಹುದು. ವಾಕ್ಯದಲ್ಲಿ ಇದರ ಬಳಕೆಯನ್ನು ಗಮನಿಸಿ:
He had misbehaved with her on the road. So people threw the book at him.
3) Crocodile tears (ಮೊಸಳೆ ಕಣ್ಣೀರು)
ಇದರ ಅರ್ಥ, ಡೋಂಗಿ ಕಣ್ಣೀರು ಎಂದು. ಕಟ್ಟುಕಥೆಗಳ ಪ್ರಕಾರ, ತಮ್ಮ ಸುತ್ತಮುತ್ತಲಿರುವ ಮನುಷ್ಯರನ್ನು ತಮ್ಮ ಕಡೆಗೆ ಸೆಳೆದು, ನಂತರ ತಿಂದು ಹಾಕಲು ಮೊಸಳೆಗಳು ಮನುಷ್ಯರ ರೀತಿಯಲ್ಲಿ ಅಳುವಂತೆ ನಟಿಸುತ್ತಿದ್ದವಂತೆ. ಇದು ಗ್ರೀಕ್ ಮತ್ತು ಲ್ಯಾಟಿನ್ ಸಾಹಿತ್ಯದಲ್ಲಿ ಕಂಡುಬರುತ್ತದೆ. ಈ ನುಡಿಗಟ್ಟನ್ನು ವಾಕ್ಯದಲ್ಲಿ ಬಳಸುವ ರೀತಿ ಹೀಗಿದೆ:
Don’t shed crocodile tears.
4) To pull someone’s leg (ಇನ್ನೊಬ್ಬರ ಕಾಲೆಳೆಯುವುದು)
ಇದರ ಅರ್ಥ, ಇನ್ನೊಬ್ಬರನ್ನು ತಮಾಷೆಯಾಗಿ ಟೀಕಿಸುವುದು ಅಥವಾ ಹಾಸ್ಯ ಮಾಡುವುದು ಎಂದು. ಈ ನುಡಿಗಟ್ಟನ್ನು ಮೊದಮೊದಲು ಬಳಸುವಾಗ ಅದಕ್ಕೆ ಅಶುಭವಾದ ಅರ್ಥವಿತ್ತು. ಬಹು ಹಿಂದೆ, ಕಳ್ಳರ ಗುಂಪು ಜನರನ್ನು ಲೂಟಿ ಮಾಡಲು ಒಂದು ವಿಶೇಷವಾದ ದಾರಿಯನ್ನು ಕಂಡುಕೊಂಡಿತ್ತು. ಅದೇನೆಂದರೆ, ಒಬ್ಬ ಕಳ್ಳ ದಾರಿಹೋಕರ ಕಾಲೆಳೆದು ಬೀಳಿಸಿದ ಮೇಲೆ, ಇನ್ನಿತರ ಕಳ್ಳರು ಬಂದು ಆ ದಾರಿಹೋಕರನ್ನು ದೋಚುತ್ತಿದ್ದರು. ಹಾಗೆಯೇ, ಬರಬರುತ್ತಾ ಈ ನುಡಿಗಟ್ಟಿನ ಅರ್ಥವೇ ಬದಲಾಗಿ ಹೋಯಿತು. ಇದರ ಬಳಕೆಯನ್ನು ವಾಕ್ಯದಲ್ಲಿ ನೋಡೋಣ:
Don’t pull his legs. He is very innocent.
5) To meet the deadline (ಸಾವಿನ ಗೆರೆಯನ್ನು ಮುಟ್ಟುವುದು)
ಇದರ ಅರ್ಥ, ಕೊಟ್ಟ ಸಮಯಕ್ಕೆ ಮುಂಚೆ ಕೆಲಸವನ್ನು ಪೂರ್ಣಗೊಳಿಸುವುದು ಎಂದು. ಈ ನುಡಿಗಟ್ಟು, ಅಂತರ್ಯುದ್ಧದ ಸಮಯದಲ್ಲಿ ಸೆರೆಮನೆ ಶಿಬಿರಗಳೊಳಗಿನಿಂದ ಹುಟ್ಟಿಬಂದದ್ದು. ಅಲ್ಲಿ ಕೈದಿಗಳಿಗಾಗಿ ಒಂದು ಗೆರೆಯನ್ನು ಎಳೆದಿರುತ್ತಿದ್ದರು. ಇದನ್ನು ಸಾವಿನ ಗೆರೆ (deadline) ಎಂದು ಕರೆಯುತ್ತಿದ್ದರು. ಈ ಗೆರೆಯನ್ನು ದಾಟಲು ಪ್ರಯತ್ನಿಸಿದ ಕೈದಿಗಳನ್ನು ಅಲ್ಲಿಯೇ ಗುಂಡಿಟ್ಟು ಕೊಲ್ಲುತ್ತಿದ್ದರು. ಈ ವಾಕ್ಯದಲ್ಲಿ ಈ ನುಡಿಗಟ್ಟನ್ನು ಈ ರೀತಿ ಬಳಸಬಹುದು:
The last date to submit the application is 30th September. I have to meet the deadline without fail.
ಮತ್ತಷ್ಟು ನುಡಿಗಟ್ಟುಗಳ ಅರ್ಥವ್ಯಾಪ್ತಿಯನ್ನು ಮುಂದೆ ನೋಡೋಣ.
Arnold Toynbee ಎಂಬ ಚರಿತ್ರಕಾರನ ಜಗತ್ತಿನ ನಾಗರಿಕತೆಗಳ ಇತಿಹಾಸ ಎಂಬ ಇಪ್ಪತ್ತೊಂದು ಸಂಪುಟಗಳ ಬೃಹತ್ ಕೃತಿಯ ಮೊದಲ ವಾಕ್ಯ ಹೀಗಿದೆ: ‘The history of man is the history of a hungry animal in search of food’. ಇದೇ ರೀತಿ ಆಹಾರಕ್ಕೂ ನುಡಿಗಟ್ಟುಗಳಿಗೂ ಇರುವ ಸಂಬಂಧ ಅತ್ಯಂತ ಸಹಜವಾದುದು. ಈ ರೀತಿಯ ಕೆಲವು ನುಡಿಗಟ್ಟುಗಳನ್ನು ಇಲ್ಲಿ ಪರಿಶೀಲಿಸೋಣ.
Chew the fat (ಕೊಬ್ಬನ್ನು ಅಗಿಯುವುದು)
ಇದರ ಅರ್ಥ ಮುಖ್ಯವಲ್ಲದ ವಿಷಯಗಳ ಬಗ್ಗೆ ಮಾತನಾಡುವುದು ಎಂದು.
ಇನುಯಿಟ್ (Inuit) ಜನಾಂಗದವರು ಬೇರೆ ಏನಾದರೂ ಕೆಲಸ ಮಾಡುವಾಗ, ತಮ್ಮ ಕೆಲಸದ ಏಕತಾನತೆಯಿಂದ ದೂರವಿರುವ ಸಲುವಾಗಿ, ತಿಮಿಂಗಲದ ಕೊಬ್ಬಿನ ಚೂರುಗಳನ್ನು ಚ್ಯೂಯಿಂಗ್ ಗಮ್‌ನ ರೀತಿಯಲ್ಲಿ ಅಗಿಯುತ್ತಿದ್ದರು. ಈ ಚೂರುಗಳು ಬಾಯಲ್ಲಿ ಕರಗಲು ತುಂಬ ಸಮಯ ಹಿಡಿಯುತ್ತಿತ್ತು. ಹಾಗಾಗಿ ಆ ಜನರು ಕಾಲಕಳೆಯಲು ಅನುಕೂಲವಾಗುತ್ತಿತ್ತು. ಈ ನುಡಿಗಟ್ಟನ್ನು ವಾಕ್ಯದಲ್ಲಿ ಬಳಸುವ ರೀತಿಯನ್ನು ಗಮನಿಸಿ:
Why are you chewing fat? Don’t you have better work to do?
2) Don’t count your chickens before they hatch (ಕೋಳಿಮೊಟ್ಟೆಯಿಂದ ಮರಿಗಳು ಹೊರಬರುವುದಕ್ಕೆ ಮುಂಚೆಯೇ, ಕೋಳಿಮರಿಗಳನ್ನು ಎಣಿಸಬೇಡ).
ಇದರ ಅರ್ಥವೇನೆಂದರೆ, ನಾವು ಯಾವುದೇ ಕೆಲಸಕ್ಕೆ ಕೈಹಾಕುವ ಮುಂಚೆಯೇ, ಆ ಕೆಲಸದ ಯಶಸ್ಸಿನ ಬಗ್ಗೆ ಕನಸು ಕಾಣಬಾರದು ಎಂದು.
ಈ ನಾಣ್ನುಡಿಯು ಇಂಗ್ಲಿಷ್‌ನಲ್ಲಿ ಹೆಚ್ಚಾಗಿ ಬಳಕೆಗೆ ಬಂದದ್ದು ಹದಿನಾರನೇ ಶತಮಾನದ ಮಧ್ಯಭಾಗದಲ್ಲಿ. ಆದರೆ ಇದರ ಮೂಲವಿರುವುದು ಆರನೇ ಶತಮಾನದಲ್ಲಿ ಈಸೋಪನು ಬರೆದ ‘The milkmaid and the pail’ಎನ್ನುವ ಒಂದು ನೀತಿ ಕಥೆಯಲ್ಲಿ. ಈ ಕಥೆಯಲ್ಲಿ ಒಂದು ಚಿಕ್ಕ ಹುಡುಗಿ ತನ್ನ ತಲೆಯ ಮೇಲೆ ಹಾಲಿನ ಗಡಿಗೆಯನ್ನು ಹೊತ್ತುಕೊಂಡು ಹೋಗುವಾಗ ಹಗಲುಗನಸು ಕಾಣುತ್ತಾ ಹೋಗುತ್ತಾಳೆ. ಆ ಕನಸಿನಲ್ಲಿ ಆಕೆ ಹೇಗೆ ಹಾಲಿನಿಂದ ಬೆಣ್ಣೆ ಮಾಡಿ, ಅದನ್ನು ಮಾರಿ, ಬಂದ ಲಾಭದಿಂದ ಕೋಳಿ ಮೊಟ್ಟೆಗಳನ್ನು ಕೊಂಡು, ಅವುಗಳನ್ನು ಮರಿ ಮಾಡಿಸಿ, ಅವುಗಳನ್ನು ಚೆನ್ನಾಗಿ ಸಾಕಿ ಮತ್ತೆ ಅವುಗಳಿಂದ ಮೊಟ್ಟೆ ಇಡಿಸಿ ಲಾಭ ಮಾಡಿಕೊಳ್ಳಬಹುದು ಎಂದು ಯೋಚಿಸುತ್ತಾ ನಡೆಯುತ್ತಿರುತ್ತಾಳೆ. ಹೀಗೆ ಕನಸು ಕಾಣುತ್ತಾ ತಲೆಯಾಡಿಸುತ್ತಾ ಹೋಗಬೇಕಾದರೆ, ತಲೆ ಮೇಲಿನ ಗಡಿಗೆ ತುಳುಕಿ, ಹಾಲೆಲ್ಲಾ ಸೋರಿಹೋಗುತ್ತದೆ. ಈ ನಾಣ್ನುಡಿಯನ್ನು ವಾಕ್ಯದಲ್ಲಿ ಹೀಗೆ ಬಳಸಬಹುದು:
If you are going to count your chickens before they hatch, you will face a lot of disappointments.
3) High on the hog (ಹಂದಿಯ ಮೇಲ್ಮೈ)
ಇದರ ಅರ್ಥ ದುಂದುವೆಚ್ಚ ಮಾಡುವುದು ಎಂದು.
ಸಾಮಾನ್ಯವಾಗಿ ಹಂದಿಯ ದೇಹದ ಮೇಲ್ಭಾಗ ದಷ್ಟಪುಷ್ಟವಾಗಿದ್ದು, ಅದರ ಮಾಂಸ ಸಿರಿವಂತರಿಗೆ ಮಾತ್ರ ದಕ್ಕುವಂಥದ್ದಾಗಿದ್ದು, ಉಳಿದ ಮಾಂಸ ಮಾತ್ರ ಬಡವರಿಗೆ ಮೀಸಲಾಗಿತ್ತು. ಈ ನುಡಿಗಟ್ಟನ್ನು ವಾಕ್ಯದಲ್ಲಿ ಬಳಸುವ ರೀತಿ ಹೀಗಿದೆ:
If you choose to live high on the hog, you will find yourself low on the wallet.
ನುಡಿಗಟ್ಟುಗಳ ಉಪಯೋಗ ಅಡುಗೆಗೆ ಹಾಕುವ ಉಪ್ಪಿನಂತೆ. ಹೆಚ್ಚಾಗದಂತೆ ಒಂದು ಹದದಲ್ಲಿ ಉಪಯೋಗಿಸಿದಾಗ ಮಾತ್ರ ನುಡಿಗಟ್ಟುಗಳು ನಮ್ಮ ಸಂಭಾಷಣೆಯನ್ನು ಸತ್ವಶಾಲಿಯನ್ನಾಗಿ ಮಾಡುತ್ತವೆ ಎಂಬುದನ್ನು ಮರೆಯಬಾರದು.
ಮಾಹಿತಿಗೆ: 98452 13417
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.