ಗುರಿ ಸಾಧನೆಯ ಹಾದಿಯಲ್ಲಿ ಮಕ್ಕಳ ಮೇಲೆ ಒತ್ತಡ ಹೇರಬಾರದು. ಅವರ ಭಾವನೆಗಳನ್ನು ಅರ್ಥ ಮಾಡಿ ಕೊಂಡು ಮುಂದುವರಿಯುವಂತೆ ಮಾಡುವಲ್ಲಿ ಪೋಷಕರ ಪಾತ್ರವೂ ಬಹಳ ಮುಖ್ಯ.
ಪೋಷಕರಿಗೆ ಕಿವಿ ಮಾತುಗಳು
* ಸ್ವಯಂ ವಿಮರ್ಶೆ: ನಿಮ್ಮ ಮಕ್ಕಳ ಯಾವುದೇ ನಡವಳಿಕೆಯಲ್ಲಿ ನಿಮಗೆ ತಪ್ಪು ಕಂಡು ಬಂದಾಗ ಮೊದಲು ನಿಮ್ಮನ್ನು ನೀವು ವಿಮರ್ಶಿಸಿಕೊಳ್ಳಿ. ಮಕ್ಕಳು ಅನುಸರಿಸುವುದು ನಿಮ್ಮನ್ನೇ.
* ಶಿಸ್ತು: ಮಕ್ಕಳಿಂದ ಶಿಸ್ತನ್ನು ನಿರೀಕ್ಷಿಸುವುದಾದರೆ ಮೊದಲು ಅದನ್ನು ನಾವೇ ಪಾಲಿಸಬೇಕು. ಅವರ ತಪ್ಪುಗಳ ಮಾತ್ರ ಎಣಿಸಬಾರದು.
* ಹೋಲಿಕೆ: ನಿಮ್ಮ ಮಕ್ಕಳನ್ನು ಮತ್ತೊಬ್ಬರಿಗೆ ಹೋಲಿಸಿದಾಗ ಅಸಹನೆ ಮೂಡುತ್ತದೆ. ಹೋಲಿಸದೆಯೇ ಮೌಲ್ಯಮಾಪನ ಮಾಡುವ ಕೌಶಲ ಬೆಳೆಸಿಕೊಳ್ಳಿ.
* ಜೆನರೇಷನ್ ಗ್ಯಾಪ್: ನಮ್ಮ ಕಾಲದ ಬಗ್ಗೆ ಹೇಳುವ ಬದಲು ಕಾಲಕ್ಕನುಸಾರವಾಗಿ ಅವರ ಅಗತ್ಯಗಳನ್ನು ಪೂರೈಸುವ ಬಗ್ಗೆ ವಿವರಿಸಿದರೆ ಸಾಕು. ತಂತ್ರಜ್ಞಾನದ ಈ ಯುಗದಲ್ಲಿ ಅವರ ಬೇಡಿಕೆಗಳೂ ಭಿನ್ನವಾಗಿರುತ್ತವೆ. ಅಗತ್ಯಗಳೂ. ಅವರಿಗೆ ತಕ್ಕಂತೆ ಅಪ್‌ಡೇಟ್ ಆಗುವುದು ಪೋಷಕರ ಕರ್ತವ್ಯ.
* ನಿಮ್ಮ ಮಾತನ್ನು ಕೇಳಿಸಿಕೊಳ್ಳುವುದೇ ಇಲ್ಲ: ಹೆಚ್ಚು ಹೆಚ್ಚು ಉಪದೇಶ ಮಾಡಿದಷ್ಟು ನಮ್ಮ ಮಾತುಗಳನ್ನು ಕೇಳಿಸಿ ಕೊಳ್ಳುವುದನ್ನೇ ಬಿಟ್ಟು ಬಿಡುತ್ತಾರೆ. ನೀವು ಸ್ಪೀಕರ್ ಹಿಡಿದು ಮಾತನಾಡಿದರೂ ಅದು ಅವರ ಕಿವಿಗೆ ಹೋಗುವುದಿಲ್ಲ, ಅವರ ಪ್ರಪಂಚವೇ ಬೇರೆ, ನೀವು ಮಾತನಾಡಲು ಪ್ರಾರಂಭಿಸಿದಾಕ್ಷಣ ತಮ್ಮ ಗಮನ ಬೇರೆ ಕಡೆಗೆ ತಿರುಗಿಸಿ ಬಿಡ್ತಾರೆ, ನಮ್ಮಮ್ಮ, ನಮ್ಮಪ್ಪ ಏನೋ ಹೇಳ್ತಾನೆ ಇರ್ತಾರೆ ಎನ್ನುವ ಭಾವನೆ ಬೆಳೆಯುತ್ತದೆ.
* ಮಾಡುವುದೆಲ್ಲ ಬೇಡ: ನಕಾರಾತ್ಮಕ ನಿರ್ದೇಶನ ನೀಡುವ ಬದಲು ಸಕಾರಾತ್ಮಕವಾಗಿ ಸ್ಪಂದಿಸಿ. ಬೇಡ ಎಂದು ನಿರಾಕರಿಸುವ ಬದಲು ಇನ್ನೊಮ್ಮೆ ಮಾಡುವ, ಒಟ್ಟಿಗೆ ಮಾಡುವ ಹೀಗೆ ಉತ್ತರಗಳನ್ನು ನೀಡಿ. ಇಲ್ಲದಿದ್ದರೆ ಮನೆಯಲ್ಲಿ ಎಲ್ಲಕ್ಕೂ ಬೇಡ ಎನ್ನುತ್ತಾರೆ ಎನ್ನುವಂಥ ಋಣಾತ್ಮಕ ಭಾವ ಬೆಳೆಯುತ್ತದೆ.
ಅಷ್ಟೂ ಗೊತ್ತಾಗಲ್ವಾ? ನೀ ಸ್ವಲ್ಪ ಸುಮ್ಮನಿರು: ಇವೆರಡೂ ವೈರುಧ್ಯಗಳುಳ್ಳು ವಾಕ್ಯಗಳು. ಆದರೆ ನಮ್ಮ ಮಕ್ಕಳಿಗೆ ನಾವಿದನ್ನು ಬಳಸಿಯೇ ತೀರುತ್ತೇವೆ. ಜವಾಬ್ದಾರಿ ಬಂದಾಗ ಗೊತ್ತಾಗಲ್ವಾ ಎಂದೂ, ದೊಡ್ಡವರ ಚರ್ಚೆಯಲ್ಲಿ ನೀ ಸುಮ್ಮನಿರು ಎಂದೂ... ಇವೆರಡೂ ದಿಕ್ಕುಗಳಲ್ಲಿ ಮಕ್ಕಳು ಗೊಂದಲಕ್ಕೆ ಈಡಾಗುವ ಸಾಧ್ಯತೆ ಇರುತ್ತದೆ. ನಯವಾಗಿ ಅವರನ್ನು ತಮ್ಮೊಂದಿಗೆ ಪಾಲ್ಗೊಳ್ಳುವಂತೆಯೂ, ದೂರ ಇರುವಂತೆಯೂ ಮಾಡಬಹುದು.
* ನಿಮ್ಮ ಮಾತು ಅವರು ಕೇಳ ಬೇಕೆ?: ಹಾಗಾದರೆ ಮೊದಲು ನೀವು ಅವರ ಮಾತನ್ನು ಕೇಳಿಸಿ ಕೊಳ್ಳಲು ಆರಂಭಿಸಿ. ಆಗ ಅವರೂ ನಿಮ್ಮ ಮಾತನ್ನು ಗೌರವಿಸುತ್ತಾರೆ.
* ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿ, ಸ್ನೇಹದಿಂದಿರಿ: ಒಳ್ಳೆಯ ಮಾತಿನಲ್ಲಿ ಸ್ನೇಹದಿಂದ ಹೇಳಿದಾಗ ಅವರೂ ಬಾಗುತ್ತಾರೆ. ಅಲ್ಲದೆ ಈಗ ಮಕ್ಕಳು ಎಲ್ಲಕ್ಕೂ ಪ್ರಶ್ನೆಗಳನ್ನು ಕೇಳುತ್ತಾರೆ. ಅವರಿಗೆ ಸಮಾಧಾನವಾಗುವಂತೆ ಉತ್ತರಿಸಿದರೆ, ಇಬ್ಬರ ನಡುವಿನ ಅಂತರ ಕಡಿಮೆಯಾಗುತ್ತದೆ.
* ಅವರ ಸೋಲು ಗೆಲುವುಗಳಿಗೆ ಸಹಕರಿಸಿ: ಪ್ರತಿಯೊಂದು ಮಗುವೂ ವಿಭಿನ್ನ ಮತ್ತು ವಿಶೇಷ. ಈಗಿನ ಮಕ್ಕಳು ಬಹಳ ಸೂಕ್ಷ್ಮ. ಅವರು ಸೋತಾಗ ನೀವೇ ಆಸರೆ ಆಗಬೇಕು, ಮನೋಬಲ ನೀಡಬೇಕು, ಅವರ ಗೆಲುವನ್ನು ಹಂಚಿಕೊಳ್ಳಿ. ಆಗ ಪೋಷಕರ ನಿರೀಕ್ಷೆ ತಲುಪುವ ಛಲ ಮತ್ತು ಉತ್ಸಾಹ ಎರಡೂ ಬರುತ್ತವೆ. ಸೋಲಿನೊಂದಿಗೆ ಹೋರಾಡುವ ಸಾಮರ್ಥ್ಯ ಬರುತ್ತದೆ.
* ಮುಕ್ತವಾಗಿ ಮಾತನಾಡಿ: ಮಕ್ಕಳ ಮಾತನ್ನು ಸಮಾಧಾನದಿಂದ ಕೇಳಿ. ಮುಚ್ಚಿಡುವ ವರ್ತನೆಯನ್ನು ದೂರವಿಡಬಹುದು. ಎಲ್ಲ ವಿಚಾರಗಳನ್ನೂ ಹಂಚಿಕೊಳ್ಳುವ ಸೌಹಾರ್ದ ಸಂಬಂಧವಿದ್ದರೆ, ಹಂಚಿಕೊಳ್ಳುವ ಸ್ವಾತಂತ್ಯ್ರವನ್ನೂ ಬೆಳೆಸಿಕೊಳ್ಳುತ್ತಾರೆ. ಯಾವುದೇ ಹೆಜ್ಜೆಯನ್ನು ಇಡುವಾಗ ಖಂಡಿತ ನಿಮ್ಮನ್ನು ಕೇಳಿಯೇ ಮುಂದಡಿ ಇಡುತ್ತಾರೆ. ಆಗ ತಪ್ಪು ಹೆಜ್ಜೆಗಳನ್ನು ಇಡುವ ಸಾಧ್ಯತೆ ಕಡಿಮೆ.
* ಆಶಾವಾದಿಗಳಾಗಿ: ಜೀವನದಲ್ಲಿ ಹತಾಶರಾಗುವ ಅಗತ್ಯವಿಲ್ಲ, ಖಂಡಿತ ಮಕ್ಕಳ ಆಶಾ ದೀಪವನ್ನು ಬೆಳಗುವುದು ನಿಮ್ಮ ಕೈನಲ್ಲೇ ಇದೆ.
* ಬೇರೆಯವರು ಏನೆನ್ನುತ್ತಾರೆ ಎನ್ನುವ ಬಗ್ಗೆ ಆತಂಕ ಬೇಡ: ನಿಮ್ಮ ಮಕ್ಕಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಾಗ ಬೇರೆಯವರು ಏನು ತಿಳಿದುಕೊಳ್ಳುತ್ತಾರೆ ಎನ್ನುವ ಹಿಂಜರಿಕೆ, ಅಳುಕು ಬೇಡ, ನಿಮ್ಮ ನಿರ್ಧಾರಗಳು ನಿಮ್ಮವಾಗಿರಲಿ, ಬೇರೆಯವರ ಬಗ್ಗೆ ಚಿಂತೆ ಬೇಡ. ನಿಮ್ಮ ಮಕ್ಕಳ ಭವಿಷ್ಯವನ್ನು ನೀವೇ ರೂಪಿಸಿ. ಅನೇಕ ಪ್ರತಿಭಾನ್ವಿತ ವ್ಯಕ್ತಿಗಳು ಈ ಹಂತವನ್ನು ದಾಟಿದ್ದಾರೆ. ಮಾನಸಿಕ ಒತ್ತಡಗಳಾಗಲೀ, ಸಮಸ್ಯೆಗಳಾಗಲೀ ಇದ್ದಾಗ ನನಗೆ ಯಾಕೆ ಹೀಗಾಯ್ತು ಎನ್ನುವ ಪ್ರಶ್ನೆ ಎಲ್ಲರಿಗೂ ಬರುವುದು ಸಹಜ. ನೊಬೆಲ್ ಪ್ರಶಸ್ತಿ ವಿಜೇತ ಪ್ರೊಫೆಸರ್ ನ್ಯಾಷ್, (ಇವರ ಬಗ್ಗೆ ಬ್ಯೂಟಿಫ಼ುಲ್ ಮೈಂಡ್ ಎನ್ನುವ ಚಲನ ಚಿತ್ರವೂ ಬಂದಿದೆ), ಖ್ಯಾತ ಪಾಶ್ಚಾತ್ಯ ಸಂಗೀತಕಾರ ಬಿಥೋವನ್, ಕವಿ ಲಾರ್ಡ್ ಬೈರನ್, ಹಿಂದಿನ ಬ್ರಿಟಿಷ್ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್, ನಮ್ಮ ಟೆಲಿಫೋನನ್ನು ಕಂಡು ಹಿಡಿದ ಗ್ರಹಾಂ ಬೆಲ್, ಐಸ್ಸಾಕ್ ನ್ಯೂಟನ್, ಅಮೇರಿಕದ ಮಾಜಿ ಅಧ್ಯಕ್ಷ ಅಬ್ರಾಹಂ ಲಿಂಕನ್, ರೋನಾಲ್ಡ್ ರೇಗನ್, ವಿಶ್ವ ವಿಖ್ಯಾತ ಪಾಪ್ ಸಂಗೀತಕಾರ ಮೈಕಲ್ ಜಾಕ್ಸನ್, ಆಲ್ಬರ್ಟ್ ಐನ್ ಸ್ಟೀನ್, ಫ಼ುಟ್ ಬಾಲ್ ಆಟಗಾರ ಡೇವಿಡ್ ಬೆಕಾಮ್, ಕ್ರಿಕೆಟ್ ಆಟಗಾರ ಟೋನಿ ಗ್ರೇಗ್, ಟಾಮ್ ಕ್ರೂಸ್, ಈ ರೀತಿ ಬಹಳಷ್ಟು ಪ್ರತಿಭಾನ್ವಿತರು ತಮ್ಮ ಜೀವನದ ಒಂದು ಹಂತದಲ್ಲಿ ಮಾನಸಿಕ ಸಮಸ್ಯೆಗಳಿಗೆ ಒಳಗಾಗಿದ್ದಾರೆ. ಸೂಕ್ತ ಸಮಯದಲ್ಲಿ ಅದರ ಬಗ್ಗೆ ಗಮನ ಹರಿಸಿ ಅದರಿಂದ ಗೆದ್ದು ಬಂದಿದ್ದಾರೆ. ಆದ್ದರಿಂದ ಸಮಸ್ಯೆಯ ಬಗ್ಗೆ ಉದಾಸೀನ ಮಾಡದೆ ಪರಿಹರಿಸಿಕೊಂಡಾಗ ಯಾವುದೂ ಕಷ್ಟವಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.