ಚಾಂಪಿಯನ್ ತಂಡಕ್ಕೆ ಇದು ಸಂದಿಗ್ಧ ಕಾಲ. ಸವಾಲನ್ನು ಮೆಟ್ಟಿ ನಿಂತು ಭರವಸೆಯ ಹಾದಿಯಲ್ಲಿ ‘ಚಕ್ರ’ ಉರುಳಿಸಲು ಸಜ್ಜಾಗಬೇಕಾದ ಸಮಯ. ಪ್ರಮುಖ ಕೋಚ್ ಅನಾರೋಗ್ಯ, ಚಿನ್ನ ಬಾಚುವ ಸವಾರನ ಅನುಪಸ್ಥಿತಿ ಮತ್ತು ವಯೋಮಾನದ ಪಲ್ಲಟ... ಇತ್ಯಾದಿಗಳು ಈ ಬಾರಿ ರಾಜ್ಯದ ಸೈಕ್ಲಿಂಗ್ ತಂಡಕ್ಕೆ ಸವಾಲೆಸೆದಿದೆ.
ಫೆಬ್ರುವರಿ ಕೊನೆಯ ವಾರ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್‌ಷಿಪ್ ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ನಡೆಯಲಿದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ರಾಜ್ಯದ ವಿವಿಧ ವಯೋಮಾನದವರ ವಿಭಾಗದ ಸೈಕ್ಲಿಸ್ಟ್‌ಗಳ ಆಯ್ಕೆ ಪೂರ್ಣಗೊಂಡಿದೆ. ಆದರೆ ವಿವಿಧ ಕಾರಣಗಳಿಂದ ರಾಜ್ಯ ಸೈಕ್ಲಿಸ್ಟ್‌ಗಳು ಈ ಸಲ ಭಾರಿ ಸವಾಲು ಎದುರಿಸಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ.
ರೋಡ್ ಸೈಕ್ಲಿಂಗ್‌ನಲ್ಲಿ ಭಾರತದ ಯಾವುದೇ ರಾಜ್ಯದ ಸೈಕ್ಲಿಸ್ಟ್‌ಗಳ ಎದೆ ನಡುಗಿಸುವ ಶಕ್ತಿ ಕರ್ನಾಟಕಕ್ಕೆ ಇದೆ. ಸೈಕ್ಲಿಂಗ್ ಕ್ರೀಡಾ ನಿಲಯಗಳಲ್ಲಿರುವ ಉತ್ತರ ಕರ್ನಾಟಕದ ಸೈಕ್ಲಿಸ್ಟ್‌ಗಳಂತೂ ರಸ್ತೆಯಲ್ಲಿ ವಾಯುವೇಗದ ರೈಡರ್‌ಗಳು. ಈ ಕಾರಣದಿಂದಲೇ ಪ್ರತಿ ಬಾರಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಪ್ರಾಬಲ್ಯ ಮೆರೆಯುತ್ತದೆ. ನಮ್ಮ ರಾಜ್ಯದಲ್ಲೇ ಚಾಂಪಿಯನ್‌ಷಿಪ್ ನಡೆದಾಗ ನಮ್ಮವರು ಪ್ರಶಸ್ತಿಯನ್ನು ಬಿಟ್ಟುಕೊಡುವುದೇ ಇಲ್ಲ.
ಸೈಕ್ಲಿಂಗ್‌ನಲ್ಲಿ ಪಾಲ್ಗೊಳ್ಳುವ ಎಲ್ಲ ರಾಜ್ಯಗಳಿಗೂ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಪ್ರತಿಷ್ಠೆಯ ಕಣ. ಆದ್ದರಿಂದ ತರಬೇತಿಗೆ ಒತ್ತು ನೀಡುತ್ತವೆ. ರಾಜ್ಯದಲ್ಲೂ ಇಂಥ ತರಬೇತಿ ನಡೆಯುತ್ತದೆ. ಕಳೆದ ಬಾರಿ (2014ರ ಡಿಸೆಂಬರ್) ಜಮಖಂಡಿಯಲ್ಲಿ ನಡೆದ ಚಾಂಪಿಯನ್‌ಷಿಪ್‌ಗೆ ರಾಜ್ಯ ಅಮೆಚೂರ್ ಸೈಕ್ಲಿಂಗ್ ಸಂಸ್ಥೆ ನೂರು ದಿನಗಳ ತರಬೇತಿ ಏರ್ಪಡಿಸಿತ್ತು. ಇದಕ್ಕೆ ತಕ್ಕ ಫಲವೂ ಲಭಿಸಿತ್ತು. ರಾಜ್ಯದ ಸೈಕ್ಲಿಸ್ಟ್‌ಗಳು ನಾಲ್ಕು ಚಿನ್ನ ಸೇರಿದಂತೆ 21 ಪದಕಗಳನ್ನು ಗೆದ್ದು ಬೀಗಿದ್ದರು; ಚಾಂಪಿಯನ್‌ಷಿಪ್ ಬುಟ್ಟಿಗೆ ಹಾಕಿಕೊಂಡಿದ್ದರು. ಆದರೆ ಈ ಬಾರಿ ಪ್ರಮುಖ ಕೋಚ್ ಸಿ.ಎಂ.ಕುರಣಿ ಅವರ ಅನಾರೋಗ್ಯದಿಂದಾಗಿ ಸೈಕ್ಲಿಸ್ಟ್‌ಗಳು ತರಬೇತಿಗೆ ಸಂಬಂಧಿಸಿದಂತೆ ಇನ್ನಿಲ್ಲದ ಸಮಸ್ಯೆ ಎದುರಿಸುತ್ತಿದ್ದಾರೆ.
‘ಕಳೆದ ಬಾರಿಯಂತೆ ತರಬೇತಿ ನಡೆಸಲು ಈ ಬಾರಿ ಸಾಧ್ಯವಾಗಲಿಲ್ಲ. ಬಾಗಲಕೋಟೆ ಮತ್ತು ವಿಜಯಪುರ ಸೈಕ್ಲಿಂಗ್ ಕ್ರೀಡಾ ನಿಲಯದಲ್ಲಿ ಎಂದಿನಂತೆ ಅಭ್ಯಾಸ ನಡೆಯುತ್ತಿದೆ. ನಮ್ಮವರು ಈ ಬಾರಿಯೂ ಪದಕಗಳನ್ನು ಗೆಲ್ಲುವುದರಲ್ಲಿ ಅನುಮಾನ ಇಲ್ಲ’ ಎಂದು ರಾಜ್ಯ ಸೈಕ್ಲಿಂಗ್ ಸಂಸ್ಥೆಯ ಕಾರ್ಯದರ್ಶಿ ಎಸ್.ಎಂ. ಕುರಣಿ ತಿಳಿಸಿದರು.
ಈ ಬಾರಿ ಹೆಚ್ಚು ಆತಂಕವಿರುವುದು ಬಾಲಕಿಯರ ಮತ್ತು ಮಹಿಳಾ ವಿಭಾಗದಲ್ಲಿ. ಭರವಸೆಯ ಸೈಕ್ಲಿಸ್ಟ್ ಬೆಂಗಳೂರಿನ ಲೀಲಾವತಿ ಕಳೆದ ಬಾರಿ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದರು. ಇದು ಈ ಬಾರಿಯ ಅವರ ಪ್ರದರ್ಶನದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಚಿಂತನೆ ನಡೆದಿದೆ.
ರಾಜ್ಯದ ‘ಚಿನ್ನದ ಹುಡುಗಿ’ಯರಾದ ಸೀಮಾ ಆಡಗಲ್ ಮತ್ತು ರೇಣುಕಾ ದಂಡಿನ ಈ ಬಾರಿ ಮಹಿಳಾ ವಿಭಾಗಕ್ಕೆ ಪ್ರವೇಶಿಸಿರುವುದು ಕೂಡ ಗಮನಾರ್ಹ ವಿಷಯ. ಇವರಿಬ್ಬರೂ ಕಳೆದ ಬಾರಿ 30 ಕಿಲೋಮೀಟರ್ಸ್ ಟೀಮ್ ಟೈಮ್ ಟ್ರಯಲ್‌ನಲ್ಲಿ ಚಿನ್ನ ಗೆದ್ದಿದ್ದರು. ಮಹಿಳಾ ವಿಭಾಗದಲ್ಲಿ ಈ ಬಾರಿ ಶಾಹಿರಾ ಅತ್ತಾರ ಮತ್ತು ಲೀಲಾವತಿ ಅವರ ಮೇಲೆ ನಿರೀಕ್ಷೆ ಇದೆ.
ರಾಜು ಭಾಟಿ, ಮೇಘಾ ಗೂಗಾಡ, ಯಲ್ಲಪ್ಪ ಶಿರಬೂರ, ಸಂತೋಷ ಕುರಣಿ, ಸಚಿನ್ ರಂಜಣಗಿ, ವೆಂಕಣ್ಣ ಕೆಂಗಲಗುತ್ತಿ, ಶಾಹಿರಾ ಬಾನು ಲೋಧಿ, ಶೈಲಾ ಮಟ್ಯಾಳ, ರಾಜು ಎಂಟೆತ್ತ್ ಮುಂತಾದವರ ಕಿರಿಯರ ಮೇಲೆ ಭರವಸೆಯ ಹೊರೆ ಇದೆ.
***
ಪ್ರಮುಖ ಸೈಕ್ಲಿಸ್ಟ್ ಅಲಭ್ಯ
ರಾಜ್ಯದ ಪುರುಷ ವಿಭಾಗದ ಭರವಸೆಯ ಸೈಕ್ಲಿಸ್ಟ್, ಬೆಂಗಳೂರಿನ ನವೀನ್ ಜಾನ್ ಈ ಬಾರಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಅವರು ವಿದೇಶದಲ್ಲಿ ಇರುವುದರಿಂದ ಆಯ್ಕೆ ಪ್ರಕ್ರಿಯೆಯಲ್ಲೂ ಪಾಲ್ಗೊಂಡಿಲ್ಲ. ಕಳೆದ ಬಾರಿಯ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಮೊದಲ ಚಿನ್ನದ ಕಾಣಿಕೆ ನೀಡಿದ್ದು ನವೀನ್ ಜಾನ್.
ನವೀನ್ ಅವರ ಅನುಪಸ್ಥಿತಿಯಲ್ಲಿ ಪುರುಷರ ವಿಭಾಗಕ್ಕೆ ಶಕ್ತಿ ತುಂಬುವ ಹೊಣೆ ಕಳೆದ ಬಾರಿ 120 ಕಿಲೋಮೀಟರ್ಸ್ ಮಾಸ್ ಸ್ಟಾರ್ಟ್‌ನಲ್ಲಿ ಚಿನ್ನ ಗೆದ್ದ ಬಾಗಲಕೋಟೆ ಜಿಲ್ಲೆಯ ಬಸವರಾಜ ಕಡಪಟ್ಟಿ ಅವರ ಹೆಗಲ ಮೇಲೆ ಬಿದ್ದಿದೆ. ಬೆಂಗಳೂರಿನ ನವೀನ್ ರಾಜ್, ಮೈಸೂರಿನ ಲೋಕೇಶ ಎನ್, ಬಾಗಲಕೋಟೆ ಜಿಲ್ಲೆಯ ಲಕ್ಷ್ಮಣ ಕುರಣಿ, ಕೃಷ್ಣ ನಾಯ್ಕೋಡಿ, ಸಂತೋಷ ವಿಭೂತಿಹಳ್ಳಿ, ಭೀಮಪ್ಪ ವಿಜಯನಗರ ಮುಂತಾದವರು ಈ ವಿಭಾಗದಲ್ಲಿ ಮಿಂಚುವ ಭರವಸೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.