ADVERTISEMENT

ವಿಕಸನ ನ್ಯೂಸ್ಗೆ ಸ್ವಾಗತ...

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2012, 19:30 IST
Last Updated 14 ಅಕ್ಟೋಬರ್ 2012, 19:30 IST

ವಿಕಸನ ನ್ಯೂಸ್‌ಗೆ ಸ್ವಾಗತ, ನಾನು ಪ್ರಣವ್~ ಎಂದು ನ್ಯೂಸ್ ಬುಲೆಟಿನ್ ಶುರುವಾಗುತ್ತದೆ. ವೃತ್ತಿನಿರತ ವಾಹಿನಿಗಳ ವಾರ್ತೆಗಳನ್ನು ನೆನಪಿಸುತ್ತದೆ.  ಇದೇನಪ್ಪಾ ಹೊಸ ಚಾನೆಲ್ ಶುರುವಾಯಿತೋ ಎಂಬ ಕುತೂಹಲ ಸಹಜ. ಮನಸ್ಸು ವಿಕಸನವಾದಾಗ ಕುತೂಹಲಗಳು ಗರಿಗೆದರಬೇಕಲ್ಲವೇ?. ಇಲ್ಲಿ ಮನಸ್ಸಿನ ಮೌನಕ್ಕೆ ಮಾತು ಕೊಡುವ ಪ್ರಯತ್ನ ನಡೆದಿದೆ. ಭವಿಷ್ಯದ ನಡೆಗೆ ಪಥ ತೋರುವ ಪ್ರಕ್ರಿಯೆ ಹೆಜ್ಜೆಯೂರಿದೆ.

ಪುತ್ತೂರು (ದ.ಕ.) ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಪ್ರಾಯೋಗಿಕ ವಾಹಿನಿ ಇದು! ಕಾಲೇಜಿನ ಕಾರ್ಯಚಟುವಟಿಕೆಗಳ ಮಾಸಿಕ ಸುದ್ದಿ ಗುಚ್ಛ. ಇಲ್ಲಿ ವಾರ್ತೆ ಓದುವವರಿದ್ದಾರೆ, ವಿಶೇಷ ವರದಿ ತಯಾರಿಸುವವರಿದ್ದಾರೆ, ಕ್ಯಾಮೆರಾ ಹಿಡಿದು ಓಡಾಡುವವರಿದ್ದಾರೆ. ನೇರ ಸುದ್ದಿ ಕಳುಹಿಸುವವರೂ ಇದ್ದಾರೆ. ಇವರೆಲ್ಲಾ ಪತ್ರಿಕೋದ್ಯಮ ವಿದ್ಯಾರ್ಥಿಗಳು.

ಒಂದೆಡೆ ಸಿಲೆಬಸ್ ಕಲಿಕೆ. ಅಂಕಗಳಿಗಾಗಿ ಥಿಯರಿ ಸುತ್ತ ಗಿರಕಿ. ಮತ್ತೊಂದೆಡೆ ಪ್ರಾಕ್ಟಿಕಲ್. ಬದುಕನ್ನು ರೂಪಿಸುವ ಅಲಿಖಿತ ಪಠ್ಯ. ಎರಡನೆಯದಕ್ಕೆ ಅಂಕದ ಸರ್ಟಿಫಿಕೇಟ್ ಸಿಗದು. ಆದರೆ ಮಾರ್ಕಿಗೂ ಸಿಗದ ಬೌದ್ಧಿಕ ಪಕ್ವತೆ ಸಿಗುತ್ತದೆ. ಪತ್ರಿಕೋದ್ಯಮ ಪದವಿ ಬಳಿಕ ಮುಂದೇನು? ವಿದ್ಯಾರ್ಥಿಗಳನ್ನು ಪ್ರಶ್ನಿಸಿದರೆ ಉತ್ತರ ಹಲವು. ಆ್ಯಂಕರ್‌ನತ್ತ ಬಹುಜನರ ಚಿತ್ತ. ವರದಿಗಾರಿಕೆಯಲ್ಲಿ ಒಂದಷ್ಟು ನಿರೀಕ್ಷೆ. ವಾಹಿನಿ ಕೋಣೆಯೊಳಗೆ ಹೊಕ್ಕುವುದು ಇನ್ನೊಂದಾಸೆ. ಡಿಸೈನರ್ ಆಗುವುದು ದೂರದೃಷ್ಟಿ.

ಆಸಕ್ತಿಯ ಜೇನುಗೂಡು
ವಾಹಿನಿಗಳಲ್ಲಿ ಬರುವ ಸುದ್ದಿ ಬುಲೆಟಿನ್‌ನ್ನು ಜ್ಞಾಪಿಸಿಕೊಳ್ಳಿ. ಅದೇ ಮಾದರಿಯಲ್ಲಿ ಸಿದ್ಧವಾಗಿದೆ `ವಿಕಸನ ನ್ಯೂಸ್~. ಇದರ ತಯಾರಿಯಲ್ಲಿ ಪರಿಣತರ ಕೈಚಳಕವಿಲ್ಲ. ಸಾವಿರಗಟ್ಟಲೆ ರೂಪಾಯಿಯನ್ನು ವೃತ್ತಿ ನಿಪುಣರಿಗೆ ಸುರಿದಿಲ್ಲ. ವಿದ್ಯಾರ್ಥಿಗಳ ಯೋಚನೆ, ಯೋಜನೆಯಂತೆ ರೂಪಿತವಾಗಿದೆ. ಕಾಲೇಜಿನ ಮಾಧ್ಯಮ ಕೇಂದ್ರವನ್ನು ಬಳಸಿಕೊಂಡ ವಿಕಸನ ತಂಡವು, ಇರುವ ಸಂಪನ್ಮೂಲದಲ್ಲೇ ಸ್ಟುಡಿಯೊ ರೂಪಿಸಿಕೊಂಡು ಹದಿನೈದು ನಿಮಿಷದ ವಾರ್ತೆ ಸಿದ್ಧಪಡಿಸಿದೆ.

`ಇದನ್ನು ನೋಡುವಾಗ ವಿದ್ಯಾರ್ಥಿಗಳು ತಯಾರಿಸಿದ್ದಾರೆ ಎಂದು ನಂಬಲು ಕಷ್ಟವಾಗುತ್ತಿದೆ~ ಎಂದು ಹೆಮ್ಮೆಯಿಂದ ಹೇಳುತ್ತಾರೆ ಕಾಲೇಜಿನ ಹಿರಿಯರಾದ ಉರಿಮಜಲು ರಾಮ ಭಟ್ ಮತ್ತು ಪ್ರಾಚಾರ್ಯ ಡಾ. ಮಾಧವ ಭಟ್. ಕಾಲೇಜಿನ ಸಭಾ ಭವನವನ್ನು ಸ್ಟುಡಿಯೊವಾಗಿ ರೂಪಾಂತರಗೊಳಿಸಲು, ಸಲಹೆ ನೀಡಿ ಒಪ್ಪಗೊಳಿಸಲು ವಿದ್ಯಾರ್ಥಿಗಳಿಗೆ ಸಾಥ್ ನೀಡಿದವರು ಪತ್ರಿಕೋದ್ಯಮ ವಿಭಾಗದ ಸಾರಥಿ ರಾಕೇಶ್ ಕುಮಾರ್ ಕಮ್ಮಜೆ, ಕನ್ನಡ ವಿಭಾಗ ಮುಖ್ಯಸ್ಥ  ಡಾ. ಎಚ್.ಜಿ.ಶ್ರೀಧರ್, ಆಂಗ್ಲ ಉಪನ್ಯಾಸಕ ಗಣೇಶ ಪ್ರಸಾದ್, ಉಪನ್ಯಾಸಕಿ ಸ್ವಾತಿ.

ವಿಡಿಯೊ ಎಡಿಟಿಂಗ್, ಶೂಟಿಂಗ್, ಸ್ಕ್ರಿಪ್ಟ್, ಧ್ವನಿಮುದ್ರಣ, ಬರವಣಿಗೆಯಲ್ಲಿ ಅಧ್ಯಾಪಕರ ಪಾಲಿಲ್ಲ. ವಿದ್ಯಾರ್ಥಿಗಳಿಗೆ ಕ್ಯಾಮೆರಾ ಚಾಲೂ ಮಾಡುವ ತಾಕತ್ತು ಬಂದಿದೆ. ಕ್ಯಾಮೆರಾ ಮುಂದೆ ನಿಂತು ಮಾತನಾಡುವ ಧೈರ್ಯವಿದೆ. ವಾರ್ತೆ ಓದುವ ಹುಮ್ಮಸ್ಸು ರೂಪಿತವಾಗಿದೆ. ಹಿರಿಯರ ಮುಂದೆ ನಿಂತು ಬೈಟ್‌ಗಾಗಿ ಮೈಕ್ ಒಡ್ಡುವ ಆತ್ಮವಿಶ್ವಾಸ ಗರಿಗೆದರಿದೆ. ಇವೆಲ್ಲಾ ವಿದ್ಯಾರ್ಥಿಗಳ ಸಮೂಹ ಶ್ರಮ. ಸ್ವ-ಆಸಕ್ತಿಯ ಫಲ.

ಸಭಾಭವನ ರೂಪಾಂತರಗೊಂಡು ಸ್ಟುಡಿಯೊವಾಯಿತು. ವಾರ್ತಾ ವಾಚಕರಿಗೆ ತರಬೇತಿ, ಧ್ವನಿಯ ಏರಿಳಿತಗಳ ಮಾಹಿತಿ, ತಪ್ಪಿದಾಗ ರೀಟೇಕ್. ಕೆಲವು ಸಲ ಬೆಳಕಿನ ಕೊರತೆ. ಅದನ್ನು ಮತ್ತೆ ಮತ್ತೆ ಸರಿಪಡಿಸಿ ಶೂಟಿಂಗ್.

ಮಿಕ್ಸಿಂಗ್ ಮಾಡುವಾಗಲಂತೂ ಫಜೀತಿ. ಧ್ವನಿಗೂ, ತುಟಿ ಸಂಚಲನಕ್ಕೂ ವ್ಯತ್ಯಾಸ. ಕೆಲವೊಮ್ಮೆ ವಿದ್ಯುತ್ ಕಣ್ಣಾಮುಚ್ಚಾಲೆ. ಜನರೇಟರ್ ಕೋಣೆಗೆ ಓಡಲೆಂದೇ ಒಬ್ಬನ ನಿಯೋಜನೆ. ಹೀಗೆ ಹತ್ತು ಹಲವು ಎಡವಟ್ಟುಗಳನ್ನು ಮೈಮೇಲೆ ಎಳೆದುಕೊಂಡರೂ ಒಳ್ಳೆಯ ಪ್ರಾಯೋಗಿಕ ಉತ್ನನ್ನ ನೀಡಿದ ಸಮಾಧಾನ ವಿದ್ಯಾರ್ಥಿಗಳಿಗೆ ಇದೆ.

`ವಿಕಸನ ನ್ಯೂಸ್~ಗೆ ಸ್ವಾಗತ...
ಬೆಳ್ಳಂಬೆಳಿಗ್ಗೆ ಪತ್ರಿಕೆ ಓದುತ್ತೇವೆ. ರಾಜಕೀಯ ಸುದ್ದಿ ರಾಚಿದಾಗ ಖಾರವಾದ ಪ್ರತಿಕ್ರಿಯೆ ನೀಡುತ್ತೇವೆ. ಉಗ್ರ ಶಬ್ದಗಳಲ್ಲಿ ಖಂಡಿಸುತ್ತೇವೆ. ಪೇಪರ್ ಹುಡುಗನ ಸೈಕಲ್ ಬೆಲ್ ಶಬ್ದಕ್ಕಾಗಿ ಕಾಯುವ ನಮಗೆ ನಿಜವಾಗಿಯೂ ಪತ್ರಿಕಾ ಕಚೇರಿಯೊಳಗೆ ನಡೆಯುವ ಕೆಲಸದ ಸ್ವರೂಪ, ಒತ್ತಡ, ಡೆಡ್‌ಲೈನ್ ಏನೆಂಬುದರ ಅರಿವಿರುವುದಿಲ್ಲ. ಓದುಗನಿಗೆ ಅದು ಬೇಕಾಗಿಯೂ ಇಲ್ಲ.

ಆದರೆ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಈ ಅರಿವು ಮೂಡಿಸಲು ವಿಕಸನ  ಪತ್ರಿಕೆಯ ಪ್ರಕಾಶನ ಶ್ರಮಿಸುತ್ತಿದೆ. ಆರು ತಿಂಗಳಲ್ಲಿ ಏಳು ವಿದ್ಯಾರ್ಥಿ ಸಂಚಿಕೆಗಳು ಹೊರಬಂದಿವೆ. ಅದರಲ್ಲೊಂದು ಗಣೇಶ ಹಬ್ಬದ ವಿಶೇಷ ಸಂಚಿಕೆ.

ಒಬ್ಬರ ಲೇಖನ ಓದಿದಾಗ ಇನ್ನೊಬ್ಬರಿಗೆ ಪೆನ್ನು ಹಿಡಿಯಲು ಪ್ರಚೋದನೆ. ಕಾಲೇಜು, ಪತ್ರಿಕಾ ಕಚೇರಿ, ಸಾಹಿತಿಗಳಿಗೆ ವಿಕಸನವನ್ನು ಕಳುಹಿಸುತ್ತಾರೆ. ಅಭಿಪ್ರಾಯ ಸಂಗ್ರಹಿಸುತ್ತಾರೆ. ವಿದ್ಯಾರ್ಥಿಗಳು ಭವಿಷ್ಯದ ಬದುಕಿಗೆ ತೆರೆದುಕೊಳ್ಳಲು ಇದಕ್ಕಿಂತ ಇನ್ನೇನು ಬೇಕು? 
            
                           

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT